ಮಡಿಕೇರಿ, ಡಿ. 19: ಹೆಚ್1 ಎನ್1 ರೋಗ ಬಗ್ಗೆ ಹೆಚ್ಚಿನ ಅರಿವು ಮೂಡಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಇಲಾಖಾ ಅಧಿಕಾರಿಗಳ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹೆಚ್1 ಎನ್1 ರೋಗದ ಬಗ್ಗೆ ಅಲ್ಲಲ್ಲಿ ಮಾಹಿತಿ ಕೇಳಿ ಬರುತ್ತದೆ. ಈ ಬಗ್ಗೆ ಜಿಲ್ಲೆಯ ಎಲ್ಲಾ ಕಡೆಗಳಲ್ಲಿ ವಿವಿಧ ಇಲಾಖೆಗಳ ಜೊತೆಗೂಡಿ ಆರೋಗ್ಯ ಶಿಕ್ಷಣ ಅರಿವು ಕಾರ್ಯಕ್ರಮ ಆಯೋಜಿಸುವಂತೆ ಅವರು ಸಲಹೆ ಮಾಡಿದರು.
ಹೆಚ್1 ಎನ್1 ಸೇರಿದಂತೆ ಯಾವದೇ ರೀತಿಯ ಖಾಯಿಲೆಗಳ ಸಂಬಂಧ ಹತ್ತಿರದ ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆ ಮಾರ್ಗದರ್ಶನದಂತೆ ಔಷಧಿ ಪಡೆಯುವಂತಾಗಬೇಕು. ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವದೇ ಕಾರಣಕ್ಕೂ ವೈಯಕ್ತಿಕ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ನಾಗರಿಕರಿಗೆ ಮಾಹಿತಿ ನೀಡುವಂತಾಗ ಬೇಕು ಎಂದರು. ಯಾವದೇ ರೋಗದಿಂದ ದೂರವಿರುವಂತಾಗಲು ವೈಯಕ್ತಿಕ ಸ್ವಚ್ಛತೆ, ಸಮುದಾಯ ಶುಚಿತ್ವ ಹಾಗೂ ಉತ್ತಮ ಪರಿಸರ ಅಗತ್ಯ. ಆ ನಿಟ್ಟಿನಲ್ಲಿ ಶುದ್ದ ಕುಡಿಯುವ ನೀರು ಬಳಸುವದು, ನೀರನ್ನು ಕುದಿಸಿ ಬಳಸುವಂತಾಗ ಬೇಕು. ಹೀಗೆ ನಾನಾ ಮುನ್ನೆಚ್ಚರಿಕೆಗಳನ್ನು ವಹಿಸಬೇಕಿದೆ. ಆ ನಿಟ್ಟಿನಲ್ಲಿ ಮಾಹಿತಿ, ಮಾರ್ಗದರ್ಶನ ಮತ್ತು ಶಿಕ್ಷಣ ನೀಡಬೇಕಿದೆ ಎಂದು ಅವರು ಹೇಳಿದರು.
ಕುಡಿಯುವ ನೀರಿನ ಟ್ಯಾಂಕ್, ಕುಡಿಯುವ ನೀರು ಪೂರೈಕೆ ಮಾಡುವ ಘಟಕಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಗ್ರಾ.ಪಂ. ಸೇರಿದಂತೆ ಶಾಲಾ-ಕಾಲೇಜುಗಳಲ್ಲಿ ನೀರಿನ ಟ್ಯಾಂಕ್ನ್ನು ಎರಡು ತಿಂಗಳಿಗೊಮ್ಮೆಯಾದರೂ ಸ್ವಚ್ಛಗೊಳಿಸಬೇಕು ಎಂದು ತಿಳಿಸಿದರು. ಜಿ.ಪಂ.ಸಿಇಓ ಕೆ.ಲಕ್ಷ್ಮಿಪ್ರಿಯಾ ಅವರು ಹೆಚ್1 ಎನ್1 ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಮೂಡಿಸು ವಂತಾಗಬೇಕು ಎಂದರು.
ಹೆಚ್1 ಎನ್1 ರೋಗ ಸೇರಿದಂತೆ ಯಾವದೇ ರೀತಿಯ ಕಾಯಿಲೆಗಳು ಹರಡದಂತೆ ನೋಡಿ ಕೊಳ್ಳಬೇಕು. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ವಿಳಂಬ ಮಾಡದೆ ಪರಿಶೀಲಿಸಿ ಅಗತ್ಯ ಔಷಧಿ ಮತ್ತು ಚಿಕಿತ್ಸೆ ನೀಡಬೇಕು ಎಂದು ಸಲಹೆ ಮಾಡಿದರು. ಜಿಲ್ಲಾ, ತಾಲೂಕು ಸಮುದಾಯ, ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳನ್ನು ದಾಸ್ತಾನು ಮಾಡಿಕೊಳ್ಳುವಂತೆ ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಅವರು ಮಾಹಿತಿ ನೀಡಿ, ಹೆಚ್1 ಎನ್1 ವೈರಸ್ನಿಂದ ಹರಡುವ ರೋಗವಾಗಿದೆ ಎಂದರು. ಜಿಲ್ಲೆಯಲ್ಲಿ 24 ಶಂಕಿತ ಹೆಚ್1 ಎನ್ 1 ಪ್ರಕರಣಗಳು ಕಂಡುಬಂದಿವೆ. ಇದರಲ್ಲಿ 7 ಪ್ರಕರಣಗಳು ದೃಢಪಟ್ಟಿವೆ. ಹೆಚ್1 ಎನ್1 ಸಂಬಂಧ ಆಸ್ಪತ್ರೆಗಳಲ್ಲಿ ಔಷಧಿ, ಮಾಸ್ಕ್, ಶಿರಾಫ್ ಮತ್ತಿತರ ಔಷಧಿ ಗಳನ್ನು ದಾಸ್ತಾನು ಮಾಡಲಾಗಿದೆ ಎಂದು ತಿಳಿಸಿದರು. ಇನ್ನಷ್ಟು ಹೆಚ್ಚಿನ ಔಷಧಿ ತರಿಸಿಕೊಳ್ಳಲಾಗುವದು ಎಂದು ಅವರು ತಿಳಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಶಿವಕುಮಾರ್ ಅವರು ಜಿಲ್ಲೆಯಲ್ಲಿ 25 ಡೆಂಗ್ಯೂ, 6 ಚಿಕನ್ ಗುನ್ಯಾ, 476 ಕರುಳುಬೇನೆ, 27 ಕಾಮಲೆ, 734 ವಿಷಮ ಶೀತ ಜ್ವರ ಪ್ರಕರಣಗಳು ಕಂಡುಬಂದಿವೆ ಎಂದು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಕುಡಿಯುವ ನೀರು ಮೂಲಗಳ ಜೈವಿಕ ವಿಶ್ಲೇಷಣೆ ಸಂಬಂಧಿಸಿದಂತೆ 11,328 ಕಡೆಗಳಲ್ಲಿ ಪರೀಕ್ಷೆ ಮಾಡಲಾಗಿದ್ದು, 10,118 ಕಡೆಗಳಲ್ಲಿ ಕುಡಿಯುವ ನೀರು ಯೋಗ್ಯವಾಗಿದೆ. 993 ಕಡೆಗಳಲ್ಲಿ ಕ್ಲೋರೀನೇಷನ್ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಜಿಲ್ಲಾ ಸರ್ಜನ್ ಡಾ. ಜಗದೀಶ್ ಅವರು ಹೆಚ್1 ಎನ್1 ಸೇರಿದಂತೆ ಹಲವು ರೋಗಗಳ ಔಷದಿ ಲಭ್ಯವಿದೆ ಎಂದು ಮಾಹಿತಿ ನೀಡಿದರು. ಪೌರಾಯುಕ್ತ ಎಂ.ಎಲ್. ರಮೇಶ್ ಅವರು ಸೊಳ್ಳೆ ರಹಿತ ಓವರ್ ಹೆಡ್ ಟ್ಯಾಂಕ್ ಹಾಗೂ ಅಂಡರ್ ಗ್ರೌಂಡ್ ಟ್ಯಾಂಕ್ಗಳನ್ನು ನಿರ್ಮಿಸಲು ಕ್ರಮವಹಿಸಲಾಗುವದು. ವಾರಕ್ಕೊಮ್ಮೆ ಸೊಳ್ಳೆನಾಶಕ ದ್ರಾವಣವನ್ನು ಸಿಂಪಡಿಸಲಾಗುವದು. ನೀರು ಸರಬರಾಜು ಮಾಡುವ ಮೊದಲು ಕ್ಲೋರಿನ್ ಹಾಕುವದು ಮತ್ತಿತರ ಕಾರ್ಯ ಕೈಗೊಳ್ಳಲಾಗುವದು ಎಂದು ತಿಳಿಸಿದರು. ಅಂಗನವಾಡಿ ಸೇರಿದಂತೆ ಶಾಲಾ-ಕಾಲೇಜುಗಳಲ್ಲಿ ಹಾಗೂ ಹಾಸ್ಟೆಲ್ಗಳಲ್ಲಿ ಕುಡಿಯುವ ನೀರಿನ ಟ್ಯಾಂಕ್ನ್ನು ಶುಚಿಗೊಳಿಸುವದು, ಕೈಗಾರಿಕೆ ಘಟಕಗಳಲ್ಲಿ ಆರೋಗ್ಯ ಸಂಬಂಧ ಕಾರ್ಮಿಕರಲ್ಲಿ ಅರಿವು ಮೂಡಿಸುವದು. ಪರಿಸರ ನೈರ್ಮಲ್ಯ ಮತ್ತಿತರ ಬಗ್ಗೆ ಜಾಗೃತಿ ಮೂಡಿಸುವದು ಅತ್ಯಗತ್ಯ ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜು, ಪಶುಪಾಲನಾ ಇಲಾಖೆ ಉಪ ನಿರ್ದೇಶಕ ತಮ್ಮಯ್ಯ, ಸಿಡಿಪಿಓ ಅರುಂಧತಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣಾಧಿಕಾರಿ ಹಾಗೂ ಇತರರು ಇದ್ದರು.