ಗೋಣಿಕೊಪ್ಪ ವರದಿ, ಡಿ. 20 : ಇಲ್ಲಿನ ಅಶ್ವಿನಿ ಸ್ಪೋಟ್ಸ್ ಫೌಂಡೇಷನ್ ವತಿಯಿಂದ ಜಿಲ್ಲಾ ಶಾಲಾ ಮಟ್ಟದ ಸ್ಕೂಲ್ ಟ್ರ್ಯಾಕ್ ಮತ್ತು ಫೀಲ್ಡ್ ಚಾಂಪಿಯನ್‍ಶಿಪ್ ಕಾಲ್ಸ್ ಶಾಲಾ ಮೈದಾನದಲ್ಲಿ ಚಾಲನೆ ನೀಡಲಾಯಿತು. ಜಿಲ್ಲೆಯ ವಿವಿಧ ಶಾಲೆಗಳಿಂದ ಆಗಮಿಸಿದ್ದ ಕ್ರೀಡಾಪಟುಗಳು ಒಂದಾಗಿ ಸೇರಿ ಪಥ ಸಂಚಲನ ಮಾಡುವ ಕ್ರೀಡಾಕೂಟಕ್ಕೆ ಮೆರಗು ನೀಡಿದರು.
12, 14 ಹಾಗೂ 16 ವಯೋಮಿತಿ ಕ್ರೀಡಾಪಟುಗಳು ಪಾಲ್ಗೊಂಡರು. ಬಹುತೇಕ ವಿದ್ಯಾರ್ಥಿಗಳು ಮೊದಲ ಬಾರಿಗೆ ಟ್ರ್ಯಾಕ್ ಅನುಭವ ಪಡೆದುಕೊಂಡರು. ಒಂದಷ್ಟು ಕ್ರೀಡಾಪಟುಗಳು ಶೂ ಇಲ್ಲದೆ, ಬರಿಗಾಲಿನಲ್ಲಿ ಪಾಲ್ಗೊಂಡು ಗಮನ ಸೆಳೆದರು. ಬಾಲಕ, ಬಾಲಕಿಯರಿಗೆ ಓಟ, ಹರ್ಡಲ್ಸ್, ಶಾಟ್‍ಪುಟ್, ಡಿಸ್ಕಸ್, ಹೈಜಂಪ್, ಲಾಂಗ್‍ಜಂಪ್ ಹಾಗೂ ರಿಲೇಯಲ್ಲಿ ಪಾಲ್ಗೊಂಡರು.
ಅಶ್ವಿನಿ ಸ್ಪೋಟ್ಸ್ ಫೌಂಡೇಷನ್ ಮುಖ್ಯಸ್ಥೆ ಅಶ್ವಿನಿ ನಾಚಪ್ಪ ಮಾತನಾಡಿ, ಬಾಲಕ, ಬಾಲಕಿಯರು ಕ್ರೀಡಾಕೂಟದಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆ ಅನಾವರಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಮೊದಲ ಬಾರಿಗೆ ಕೃತಕ ಹುಲ್ಲು ಹಾಸಿನ ಮೈದಾನದಲ್ಲಿ ಅನುಭವ ಪಡೆಯುವ ಮೂಲಕ ಉತ್ತಮ ಕ್ರೀಡಾಪಟುಗಳಿಗೆ ಅಡಿಪಾಯ ಹಾಕಲು ನಿರ್ಧರಿಸಲಾಗಿದೆ. ಉತ್ತಮ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಮುಂದಾಗಿದ್ದೇವೆ ಎಂದರು. ಈ ಸಂದರ್ಭ ಕಾಲ್ಸ್ ಮುಖ್ಯಸ್ಥ ದತ್ತಾ ಕರುಂಬಯ್ಯ, ಪ್ರಾಂಶುಪಾಲ ಬಾಚೇಟೀರ ಗೌರಮ್ಮ ನಂಜಪ್ಪ ಪಾಲ್ಗೊಂಡಿದ್ದರು.