ಮಡಿಕೇರಿ, 19: ಬಹು ನಿರೀಕ್ಷಿತ ಜಿಲ್ಲೆಯ ಜನತೆಯ ಬೇಡಿಕೆಯಾಗಿರುವ ದೇಶದಲ್ಲೆ ರೈಲ್ವೇ ಸಂಪರ್ಕವಿಲ್ಲದಿರುವ ಕೊಡಗು ಜಿಲ್ಲೆಗೆ ರೈಲ್ವೇ ಮಾರ್ಗ ಕಲ್ಪಿಸುವ ಬೇಡಿಕೆ ಈಡೇರುವ ಬಗ್ಗೆ ಯಾವದೇ ಮುನ್ಸೂಚನೆ ಕಾಣುತ್ತಿಲ್ಲ. ಕೇಂದ್ರ ಸರಕಾರದ ಪ್ರಕಾರ ನಷ್ಟದ ಆಧಾರದಲ್ಲಿ ಕೊಡಗಿಗೆ ರೈಲು ಬರುವದು ನಿಸ್ಸಂಶಯನೀಯವಾಗಿದೆ.

ಲೋಕ ಸಭೆಯಲ್ಲಿಂದು ಸಂಸದೆ ಶೋಭಾ ಕರಂದ್ಲಾಜೆ ಅವರು ಮೈಸೂರಿನಿಂದ ಕೊಡಗಿನ ಕುಶಾಲನಗರದವರೆಗಿನ ರೈಲ್ವೇ ಸಂಪರ್ಕದ ಬಗ್ಗೆ ಪ್ರಸ್ತಾವನೆ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ರೈಲ್ವೇ ಖಾತೆ ಸಚಿವರು ಈ ಬಗ್ಗೆ ಸರ್ವೆ ಕಾರ್ಯ ನಡೆಸಿದ್ದು, ಮೈಸೂರಿನಿಂದ ಕುಶಾಲನಗರ ದವರೆಗೆ ಒಟ್ಟು 119.10 ಕಿ.ಮೀ. ರೈಲ್ವೇ ಮಾರ್ಗ ಬರಲಿದೆ. ಇದಕ್ಕೆ ರೂ. 2607.53 ಕೋಟಿ ವೆಚ್ಚ ತಗಲಲಿದೆ. ವೆಚ್ಚಕ್ಕೆ ತಕ್ಕುದಾದ ಆದಾಯವನ್ನು ಅವಲೋಕಿಸಿದಾಗ ಅಂದಾಜು ಶೇ. 5.65ರಷ್ಟು ನಷ್ಟವಾಗಲಿದೆ. ಈ ಕಾರಣದಿಂದಾಗಿ ಈ ಯೋಜನೆ ಆರ್ಥಿಕವಾಗಿ ಹೊರೆಯಾಗಲಿರುವದರಿಂದ ಈ ಯೋಜನೆಯನ್ನು ಮುಂದುವರಿಸುವ ಬಗ್ಗೆ ಚಿಂತನೆ ಇಲ್ಲವೆಂದು ವಿವರಣೆ ನೀಡಿದೆ.

ಆರ್ಥಿಕವಾಗಿ ಹೊರೆಯಾಗುವದರಿಂದ ಈ ಯೋಜನೆ ಮುಂದುವರಿಸಲಾಗದೆಂದು ಇಲಾಖೆ ಸ್ಪಷ್ಟಪಡಿಸಿದೆ. ಇಲ್ಲಿಗೆ ಜಿಲ್ಲೆ ಕನಿಷ್ಟ ರೈಲ್ವೇ ಸಂಪರ್ಕ ದೊರಕಬಹುದೆಂಬ ಜಿಲ್ಲೆಯ ಜನತೆಯ ಕನಸೂ ಕನಸಾಗಿಯೇ ಉಳಿಯಲಿದೆ.