ಸೋಮವಾರಪೇಟೆ,ಡಿ.20: ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಅಭಿಮಾನಿಗಳ ಸಂಘದ ವತಿಯಿಂದ 32ನೇ ವರ್ಷದ ರಾಜ್ಯಮಟ್ಟದ ಬೆಳ್ಳಿಬಟ್ಟಲಿನ ಕಬಡ್ಡಿ ಪಂದ್ಯಾವಳಿಗೆ ತಾ.21ರಂದು (ಇಂದು) ಚಾಲನೆ ದೊರೆಯಲಿದೆ. ಎರಡು ದಿನಗಳ ಕಾಲ ಇಲ್ಲಿನ ಸಾಕಮ್ಮ ಬಂಗಲೆಯ ಸಮೀಪದ ಮೈದಾನದಲ್ಲಿ ನಡೆಯುವ ಕಬಡ್ಡಿ ಪಂದ್ಯಾಟಕ್ಕೆ ತಾ. 21ರಂದು ಬೆಳಿಗ್ಗೆ 11.30ಕ್ಕೆ ಕುಸುಬೂರು ಎಸ್ಟೇಟ್ ವ್ಯವಸ್ಥಾಪಕ ಕುಶಾಲಪ್ಪ ಚಾಲನೆ ನೀಡಲಿದ್ದಾರೆ. ವಕೀಲ ಎಚ್.ಸಿ.ನಾಗೇಶ್ ಅಧ್ಯಕ್ಷತೆ ವಹಿಸಲಿದ್ದಾರೆ.

ತಾ. 22ರಂದು ಸಂಜೆ ಫೈನಲ್ ಪಂದ್ಯಾಟ ನಡೆಯಲಿದೆ. ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಉದ್ಯಮಿಗಳಾದ ಎಚ್.ಎನ್.ರವೀಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕೆ.ಪಿ.ಸಿ.ಸಿ.ಸದಸ್ಯೆ ಕೆ..ಪಿ.ಚಂದ್ರಕಲಾ, ಕಾಂಗ್ರೆಸ್ ಮುಖಂಡ ವಿ.ಪಿ.ಶಶಿಧರ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. ಪಂದ್ಯಾಟದ ವಿಜೇತ ತಂಡಗಳಿಗೆ ನೀಡಲಾಗುವ ಬೆಳ್ಳಿ ಬಟ್ಟಲಿನ ಟ್ರೋಫಿಯನ್ನು ಸಂಘದ ಅಧ್ಯಕ್ಷ ಎಚ್.ಎ.ನಾಗರಾಜ್ ಅವರು ಪತ್ರಿಕಾಭವನದಲ್ಲಿ ಅನಾವರಣಗೊಳಿಸಿದರು.