ಮಡಿಕೇರಿ, ಡಿ. 20: ಮೈಸೂರು-ಕುಶಾಲನಗರ ರೈಲು ಮಾರ್ಗ ಸ್ಥಾಪನೆಗೆ ಯಾವದೇ ಧಕ್ಕೆಯಿಲ್ಲ. ಇದುವರೆಗಿನ ಯೋಜನಾ ಪೂರ್ವಭಾವಿ ಸಿದ್ಧತೆಗಳು ಸಮರ್ಪಕವಾಗಿ ನಡೆದಿದೆ. ಆದರೆ, ಕುಶಾಲನಗರದಿಂದ ಮಡಿಕೇರಿವರೆಗಿನ ಮಾರ್ಗ ರಚನೆಗೆ ಮಾತ್ರ ಸರಕಾರ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ ಎಂದು ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ವಿವರಣೆಯಿತ್ತಿದ್ದಾರೆ. ನವದೆಹಲಿಯಿಂದ “ಶಕ್ತಿ”ಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು ಲೋಕಸಭೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಅವರ ಪ್ರಶ್ನೆಗೆ ಕೇಂದ್ರ ರೈಲ್ವೆ ಖಾತೆ ಸಚಿವ ಪೀಯೂಷ್ ಗೋಯಲ್ ಅವರು ಮೈಸೂರು- ಮಡಿಕೇರಿ ರೈಲು ಮಾರ್ಗ ಪ್ರಾರಂಭಗೊಳ್ಳ್ಳುವದಿಲ್ಲ. ಲಾಭದಾಯಕವಲ್ಲ ಎನ್ನುವ ಕಾರಣಕ್ಕೆ ಕೈ ಬಿಡಲಾಗಿದೆ ಎಂಬ ಉತ್ತರದ ಕುರಿತು “ಶಕ್ತಿ” ಸಮಜಾಯಿಷಿಕೆ ಬಯಸಿದಾಗ ಸಂಸದ ಪ್ರತಾಪ್ ಸಿಂಹ ಆ ಕುರಿತು ಸ್ಪಷ್ಟಪಡಿಸಿದರು.

ಮೈಸೂರು- ಕುಶಾಲನಗರ ರೈಲು ಮಾರ್ಗ ಈ ಹಿಂದೆಯೇ ಕೇಂದ್ರದಲ್ಲಿ ಅಂಗೀಕಾರವಾಗಿತ್ತು. 2014 ರಲ್ಲಿ ಆಗಿನ ರೈಲ್ವೇ ಖಾತೆ ಸಚಿವರಾಗಿದ್ದ ಕೊಡಗಿನ ಡಿ.ವಿ. ಸದಾನಂದ ಗೌಡ ಅವರು ಬಜೆಟ್ ಮಂಡನೆ ಸಂದರ್ಭ ಕುಶಾಲನಗರದಿಂದ ಮುಂದುವರಿದು ಮಡಿಕೇರಿವರೆಗೂ ರೈಲು ಮಾರ್ಗ ನಿರ್ಮಾಣಕ್ಕೆ ಸರ್ವೆ ಕಾರ್ಯ ನಡೆಸಲು ಘೋಷಿಸಿದ್ದರು. ಅದರ ಅನ್ವಯ ಸರ್ವೆ ನಡೆದು ಕುಶಾಲನಗರದಿಂದ ಮಡಿಕೇರಿವರೆಗೆ ತಿರುವು ಪ್ರದೇಶದೊಂದಿಗೆ ಅರಣ್ಯ ಪ್ರದೇಶಗಳೂ ಇರುವದರಿಂದ ಆ ಯೋಜನೆಗೆ ಒಟ್ಟು 2607 ಕೋಟಿ ಖರ್ಚು ಮಾಡುವದು ಸರಕಾರಕ್ಕೆ ನಷ್ಟವುಂಟು ಮಾಡುತ್ತದೆ ಎಂದು ವರದಿ ತಿಳಿಸಿತ್ತು. ಈ ಯೋಜನೆಯ ಅಂತರ 119.10 ಕಿ. ಮೀಟರ್. ಆದರೆ, ರೈಲ್ವೇ ಖಾತೆ ಅಧಿಕಾರಿಗಳು ಈ ಹಿಂದೆಯೇ ಕೇಂದ್ರವು ಅಂಗಿಕರಿಸಿದ್ದ ಕುಶಾಲನಗರದವರೆÀಗಿನ ಯೋಜನೆ ಮರೆತು ಇಡೀ ಯೋಜನೆಯನ್ನೇ ಕೈ ಬಿಡಬೇಕಾಗುತ್ತದೆ ಎಂದು ಸಚಿವಾಲಯಕ್ಕೆ ತಪ್ಪು ಮಾಹಿತಿ ನೀಡಿದ ಹಿನ್ನೆಲೆ ಗೊಂದಲವುಂಟಾಗಿದೆಯಷ್ಟೆ. ಈಗಾಗಲೇ ತಾನು ಸಚಿವರು ಮತ್ತು ಇಲಾಖಾಧಿಕಾರಿಗಳೊಂದಿಗೆ ಈ ಕುರಿತು ಚರ್ಚಿಸಿದ್ದೇನೆ. ಮೈಸೂರಿನಿಂದ ಕುಶಾಲನಗರದವರೆಗೆ ಈ ಹಿಂದೆ ಆಂಗೀಕೃತಗೊಂಡಂತೆ

(ಮೊದಲ ಪುಟದಿಂದ) ರೂ. 667 ಕೋಟಿ ವೆಚ್ಚದಲ್ಲಿ ಯೋಜನೆ ಜಾರಿಗೊಳ್ಳಲಿದೆ. ಈ ಯೋಜನೆಯ ಅಂತರ 90 ಕಿ.ಮೀಟರ್ ಮಾತ್ರ. ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆ ಜಾರಿಗೆ ಕರ್ನಾಟಕ ಸರಕಾರವು ಕೂಡ ಶೇ. 50 ರಷ್ಟು ವೆಚ್ಚ ಭರಿಸುವದಾಗಿ ಒಪ್ಪಂದವಾಗಿತ್ತು. ಅಲ್ಲದೆ ಈ ಯೋಜನೆÉಗೆ ಅಗತ್ಯವಾದ ಜಾಗವನ್ನು ಉಚಿತವಾಗಿ ನೀಡುವದಾಗಿಯೂ ಸಮ್ಮತಿಯಾಗಿತ್ತು. ಇದೇ ಒಪ್ಪಂದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಮುಂದುವರಿಯಿತು ಎಂದು ಸಂಸದ ಪ್ರತಾಪ್ ಸಿಂಹ ಮಾಹಿತಿಯಿತ್ತರು. ಇದರಿಂದಾಗಿ ಈ ಯೋಜನಾ ಜಾರಿಗೆ ಕೇಂದ್ರಕ್ಕೂ ಯಾವದೇ ನಷ್ಟವುಂಟಾಗುವದಿಲ್ಲ. ಲಾಭದಾಯಕವಾಗಿಯೇ ಪರಿಣಮಿಸಲಿದೆ ಎಂದು ಸ್ಪಷ್ಟೀಕರಣವಿತ್ತರು. ಆದರೆ, ಈ ಹಿಂದೆ ಕೊಡಗು ಉಸ್ತುವಾರಿ ಸಚಿವರಾಗಿದ್ದ ಎಂ ಆರ್,. ಸೀತಾರಾಂ ಅವರು ಮಾತ್ರ ಈ ರೈಲ್ವೆ ಯೋಜನೆಗೆ ವೈಯಕ್ತಿಕವಾಗಿ ವಿರೋಧ ವ್ಯಕ್ತಪಡಿಸಿದ್ದರು ಎಂದು ಸಂಸದರು ಜ್ಞಾಪಿಸಿದರು.

ಇದೀಗ ಈ ಹಿಂದಿನ ಮುಖ್ಯಮಂತ್ರಿಗಳು ಒಪ್ಪ್ಪಂದ ಮಾಡಿಕೊಂಡಂತೆ ಮುಂದುವರಿಯುವ ಕುರಿತು ಈಗಿನ ಸರಕಾರದ ಅಧಿಕೃತ ಒಪ್ಪಿಗೆ ಸೂಚಿಸುವಂತೆ ಕೋರಿ ಕೇಂದ್ರ ರೈಲ್ವೇ ಇಲಾಖೆಯಿಂದ ರಾಜ್ಯ ಸರಕಾರದ ಕಾರ್ಯದರ್ಶಿಯವರಿಗೆ ಪತ್ರ ಬರೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಂಸದರು ಮಾಹಿತಿಯಿತ್ತರು.

ಕೊಡಗಿಗೆ ರೈಲು ಮಾರ್ಗದ ಯೋಜನೆಗೆ ತೊಡಕಾದ ಈ ಬೆಳವಣಿಗೆ ಕುರಿತು ಬೆಳಗಾವಿಯಲ್ಲಿರುವ ಕೊಡಗಿನ ಜನ ಪ್ರತಿನಿಧಿಗಳಾದ ನಾಲ್ವರು ಶಾಸಕರುಗಳ ಅಭಿಪ್ರಾಯವನ್ನು ದೂರವಾಣಿ ಮೂಲಕ ಕೇಳಲಾಯಿತು.

ರೈತರು-ಬೆಳೆಗಾರರರಿಗೆ ಅನುಕೂಲ

“ಶಕ್ತಿ”ಯೊಂದಿಗೆ ಪ್ರತಿಕ್ರಿಯಿಸಿದ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರು ಈ ರೀತಿ ನುಡಿದರು:-“ಕುಶಾಲನಗರದವರೆಗೆ ರೈಲು ಅತ್ಯವಶ್ಯಕವಿದೆ. ಈ ಬಗ್ಗೆ ನಾನು ಸಂಸದರೊಂದಿಗೂ , ಸದಾನಂದಗೌಡ ಅವರೊಂದಿಗೂ ಒತ್ತಾಯಿಸುತ್ತೇನೆ. ರೈಲ್ವೆ ಸ್ಥಾಪನೆಯಿಂದ ಕೊಡಗಿನ ರೈತರು, ಬೆಳೆಗಾರರಿಗೂ ಅನುಕೂಲವಾಗಲಿದೆ. ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಶೇ. 25 ರಷ್ಟು ಖರ್ಚು ಕಡಿಮೆಯಾಗಲಿದೆ” ಎಂದು ರಂಜನ್ ಅಭಿಪ್ರಾಯಪಟ್ಟರು.

ಕುಶಾಲನಗರದವರೆಗೆ ಬೇಕು

ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರು “ಶಕ್ತಿ” ಯೊಂದಿಗೆ ಪ್ರತಿಕ್ರಿಯಿಸಿ “ರೈಲ್ವೆ ಮಾರ್ಗ ಸರಕಾರಕ್ಕೆ ಲಾಭದಾಯಕವಲ್ಲ ಎನ್ನುವ ಅಂಶ ಈ ಹಿಂದಿನಿಂದಲೂ ಇತ್ತು. ಆದರೆ. ಸದಾನಂದಗೌಡ ಅವರು ರೈಲ್ವೇ ಖಾತೆ ಸಚಿವರಾದಾಗ ತಮ್ಮ ಅಧಿಕಾರ ಪರಿವ್ಯಾಪ್ತಿಯೊಳಗೆ ಈ ಯೋಜನೆಯನ್ನು ಜಾರಿಗೊಳಿಸಲು ಚಾಲನೆ ನೀಡಿದ್ದರು. ರಾಜ್ಯ ಸರಕಾರ ಸಕಾಲದಲ್ಲಿ ಸ್ಪಂದಿಸಿದ್ದರೆ ಈ ರೀತಿ ಆಗುತ್ತಿರಲಿಲ್ಲ. ರೈಲು ಮಾರ್ಗಕ್ಕೆ ಅಗತ್ಯವಾದ ಭೂಮಿಯನ್ನು ನೀಡಬೇಕು . ಇನ್ನಾದರೂ ನೀಡಲಿ. ಈ ಬಗ್ಗೆ ಸದಾನಂದ ಗೌಡರು ಮತ್ತು ಸಂಸದರ ಗಮನಕ್ಕೆ ತರಲಾಗುವದು ಎಂದು ಬೋಪಯ್ಯ ತಿಳಿಸಿದರು. ಕುಶಾಲನಗರದವರೆಗೆ ರೈಲು ಬೇಕಾಗಿದೆ ಎಂದರು.

ಕೊಡಗಿನ ಜನರ ಅಭಿಪ್ರಾಯ

ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರ ಅಭಿಪ್ರಾಯ ಬಯಸಿದಾಗ “ಕೊಡಗಿನ ಜನರ ಮನಸ್ಸಿನಲ್ಲಿ ಏನಿದೆ, ಅದಕ್ಕೆ ನಾವು ಬದ್ಧರಾಗಿರಬೇಕಲ್ಲ, ಜಿಲ್ಲೆಯ ಜನರ ನಿಲುವೇನಿದೆ ಅದಕ್ಕೆ ತಾನು ಬದ್ಧಳಿದ್ದೇನೆ” ಎಂದು ಅವರು ತಮ್ಮ ನಿಲುವು ಪ್ರಕಟಿಸಿದರು.

ಮಾಹಿತಿ ಪಡೆಯಬೇಕಷ್ಟೆ

ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರನ್ನು ಪ್ರಶ್ನಿಸಿದಾಗ “ನÀನಗೆ ಈ ಕುರಿತು ಯಾವದೇ ಸ್ಪಷ್ಟ ಮಾಹಿತಿಯಿಲ್ಲ, ವಿಷಯ ತಿಳಿದು ಬಳಿಕ ನನ್ನ ಅಭಿಪ್ರ್ರಾಯ ತಿಳಿಸುತ್ತೇನೆ” ಎಂದು ನುಡಿದರು.