ಮಡಿಕೇರಿ, ಡಿ. 20: ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆಯೊಂದಿಗೆ ನಿವೃತ್ತಿ ಬಳಿಕ ತನ್ನ ಪತ್ನಿಯೊಂದಿಗೆ ವಿಶ್ರಾಂತ ಜೀವನ ನಡೆಸುತ್ತಿದ್ದ ಕೇಪಾಡಂಡ ಈ. ನಂಜುಂಡ ತಾ. 16ರಿಂದ ಕಾಣೆಯಾಗಿದ್ದು, ಸಮಾಜ ಕಲ್ಯಾಣ ಇಲಾಖೆ ಸೇವೆಯಿಂದ ನಿವೃತ್ತಿಯೊಂದಿಗೆ ಪತಿಯೊಡನೆ ಬದುಕು ಸವೆಸುತ್ತಿದ್ದ ಕಿಟ್ಟಿಜಾನಕಿ ಇದೀಗ ಪತಿಗಾಗಿ ಕಣ್ಣೀರುಗರೆಯುತ್ತಿದ್ದಾರೆ. ಸದಾ ಮಡಿಕೇರಿಯ ಬಹುತೇಕ ದೇವಾಲಯಗಳನ್ನು ಸಂದರ್ಶಿಸುತ್ತಾ ಇದ್ದ 80ರ ಇಳಿವಯಸ್ಸಿನ ನಂಜುಂಡ (ಚೋಟು ಪೊಲೀಸ್) ತಾ. 16ರಂದು ಬೆಳಿಗ್ಗೆ ತಮ್ಮ ಹುಟ್ಟೂರು ಚೇರಂಬಾಣೆ ಬಳಿಯ ಪಾಕತಮ್ಮೆ (ಭಗವತಿ) ದೇವರ ವಾರ್ಷಿಕೋತ್ಸವಕ್ಕೆ ತೆರಳಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿ ಜಾನಕಿಯ (ಕಿಟ್ಟಿ) ಆರೋಗ್ಯ ಸುಧಾರಣೆಗೆ ಪ್ರಾರ್ಥಿಸುತ್ತಾ, ಆಕೆಯ ಹೆಸರಿನಲ್ಲಿ ದೇವರಿಗೆ ಭಂಡಾರ ಹಾಗೂ ಬೆಳ್ಳಿಯ ರೂಪ (ಆಳುರೂಪ) ಸಹಿತ ಹೊರಟಿದ್ದಾರೆ. ಎಂದಿನಂತೆ ಇಲ್ಲಿನ ಪತ್ರಿಕಾಭವನ ಪಕ್ಕದಲ್ಲಿರುವ ಮನೆಯಿಂದ ಗೇಟುದಾಟಿ ಹೊರಬಂದು, ರಸ್ತೆಯಲ್ಲಿ ಒಮ್ಮೆ ಹಿಂತಿರುಗಿ ಮಡದಿಯತ್ತ ಕೈಸನ್ನೆ (ಗುಡ್ ಬೈ) ಹೇಳಿ ತೆರಳಿದವರು ಐದು ದಿನ ಕಳೆದರೂ ವಾಪಾಸಾಗಿಲ್ಲ.
ಪ್ರತ್ಯಕ್ಷದರ್ಶಿಗಳ ಪ್ರಕಾರ ಗ್ರಾಮ ದೇವಾಲಯದಲ್ಲಿ ಎಲ್ಲರೊಂದಿಗೆ ಬೆರೆತಿದ್ದು, ಬೇಂಗೂರು ದೇವಸ್ಥಾನದಲ್ಲಿ ಹರಕೆ ಕೂಡ ಸಲ್ಲಿಸಿ ಮಧ್ಯಾಹ್ನ ಬೋಜನ ಸ್ವೀಕರಿಸಿದ್ದಾರೆ. ಆನಂತರದಲ್ಲಿ ದೇಗುಲ ಬಳಿ ರಸ್ತೆಯಲ್ಲಿ ಕೆಲವರೊಂದಿಗೆ ಉಭಯಕುಶಲೋಪರಿ ಮಾತನಾಡುತ್ತಾ ಇದ್ದರೆಂಬದು ಖಾತರಿಯಾಗಿದೆ. ದೇವಾಲಯದಿಂದ ಹೊರಟಿರುವ ಪತಿ ಮನೆಗೂ ವಾಪಾಸಾಗದೆ, ಬೇಂಗೂರಿನಲ್ಲೇ ಇರುವ ತನ್ನ ತಮ್ಮ ಕುಶಾಲಪ್ಪ ಮನೆಗೂ ತೆರಳದ ನಂಜುಂಡ ಎಲ್ಲಿಗೆ ತೆರಳಿದರು ಅಥವಾ ಏನಾಗಿ ಹೋದರು ಎಂಬ ಚಿಂತೆಯೊಂದಿಗೆ, ಅವರ ಪತ್ನಿ ಹಾಗೂ ಬಂಧುವರ್ಗದ ಆತಂಕವಾಗಿದೆ.
ಇಂದು ‘ಶಕ್ತಿ’ಯಲ್ಲಿ ಪತಿ ನಾಪತ್ತೆಯಾಗಿರುವ ಸುದ್ದಿ ಓದಿಕೊಂಡು ಏಕಾಂತದಲ್ಲಿ ಪತ್ನಿ ಜಾನಕಿ ದುಃಖಿಸುತ್ತಿದ್ದ ದೃಶ್ಯ ಇನ್ನಷ್ಟು ಆತಂಕ ಹುಟ್ಟು ಹಾಕಿದೆ. ಪರಸ್ಪರ ಒಬ್ಬರಿಗೊಬ್ಬರು ಊರುಗೋಲಂತೆ ಜೀವಿಸುತ್ತಿದ್ದ ವೃದ್ಧ ದಂಪತಿಯಲ್ಲಿ, ಇದೀಗ ಕಾಣೆಯಾಗಿರುವ ಪತಿಗಾಗಿ ಪತ್ನಿಯ ನೋವು, ಸಂಕಟ, ದುಃಖ- ದುಮ್ಮಾನಗಳು ಈ ವೃದ್ಧೆಯ ಆರೋಗ್ಯದ ಮೇಲೆಯೂ ಪ್ರತಿಕೂಲ ಪರಿಣಾಮ ಬೀರತೊಡಗಿದೆ. ಈ ಬಗ್ಗೆ ಪೊಲೀಸ್ ಪುಕಾರು ದಾಖಲಾಗಿದೆ. ಇಲಾಖೆಯಿಂದ ಹುಟುಕಾಟವೂ ಸಾಗಿದೆ.