ಕುಶಾಲನಗರ, ಡಿ. 20: ಕುಶಾಲನಗರದ ರಥಬೀದಿಯಲ್ಲಿರುವ ಶ್ರೀ ಆಂಜನೇಯ ದೇವಾಲಯದಲ್ಲಿ 33ನೇ ವರ್ಷದ ಹನುಮ ಜಯಂತಿ ಪೂಜಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನೆರವೇರಿತು.

ಬೆಳಗ್ಗೆ ಪಂಚಾಮೃತ ಅಭಿಷೇಕ, ಪವಮಾನ ಹೋಮ ಪೂಜಾ ವಿಧಿಗಳು ಜರುಗಿತು. ಅರ್ಚಕರಾದ ರಾಧಾಕೃಷ್ಣ ಅವರ ನೇತೃತ್ವದಲ್ಲಿ ಪೂಜಾ ವಿಧಿ ಮಹಾಮಂಗಳಾರತಿ ಬಳಿಕ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು.

ಕುಶಾಲನಗರ ಸುತ್ತಮುತ್ತಲ ಗ್ರಾಮಗಳ ನೂರಾರು ಭಕ್ತಾದಿಗಳು ಪೂಜೋತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು. ಕುಶಾಲನಗರ ದೇವಾಲಯ ಒಕ್ಕೂಟದ ಪ್ರತಿನಿಧಿಗಳು ತೆರಳಿ ಫಲತಾಂಬೂಲ ಅರ್ಪಿಸಿ ಸಾಮೂಹಿಕ ಪೂಜೆ ಸಲ್ಲಿಸಿದರು.

ರಾಮಾಂಜನೇಯ ಉತ್ಸವ ಸಮಿತಿ ಆಶ್ರಯದಲ್ಲಿ ಸಂಜೆ ಅಲಂಕೃತ ಮಂಟಪದಲ್ಲಿ ದೇವರ ಮೂರ್ತಿ ಪ್ರತಿಷ್ಠಾಪಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಹತ್ತಕ್ಕೂ ಹೆಚ್ಚು ಉತ್ಸವ ಮೂರ್ತಿಗಳ ಶೋಭಾಯಾತ್ರೆಗೆ ಮೆರಗು ನೀಡಿದರು.

ಪ್ರಮುಖರಾದ ವಿ.ಡಿ. ಪುಂಡರೀಕಾಕ್ಷ, ರಾಜೀವ್, ಶ್ರೀ ರಾಮಾಂಜನೇಯ ಉತ್ಸವ ಸಮಿತಿ ಅಧ್ಯಕ್ಷರಾದ ಪ್ರಶಾಂತ್, ಉಪಾಧ್ಯಕ್ಷ ಅನುದೀಪ್, ಕಾರ್ಯದರ್ಶಿ ನವನೀತ್ ಪೊನ್ನೇಟಿ, ಸಹಕಾರ್ಯದರ್ಶಿ ವಿನು, ಖಜಾಂಚಿ ಪ್ರವೀಣ್, ಸಂಚಾಲಕ ಚಂದ್ರಶೇಖರ್ ಮತ್ತಿತರರು ಇದ್ದರು.