ಸೋಮವಾರಪೇಟೆ, ಡಿ. 13: ನಡೆದಾಡುವ ದೇವರೆಂದೇ ಖ್ಯಾತಿಯಾಗಿರುವ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಬಗ್ಗೆ ಫೇಸ್‍ಬುಕ್‍ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಲಾಗಿದ್ದು, ಇಂತಹ ಕೃತ್ಯ ಎಸಗಿದ ಆರೋಪಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಆಗ್ರಹಿಸಿದೆ.
ತ್ರಿವಿಧ ದಾಸೋಹಿ, ಶತಾಯುಷಿ ಶ್ರೀ ಶಿವಕುಮಾರ ಸ್ವಾಮೀಜಿಯವರು ಅನಾರೋಗ್ಯಕ್ಕೀಡಾಗಿ ಚೆನೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ ಮನಿಶ್ ಮಣಿಕಂಠ ಎಂಬಾತ ಫೇಸ್‍ಬುಕ್‍ನಲ್ಲಿ ಶ್ರೀಗಳ ಆರೋಗ್ಯ ಹಾಗೂ ಚಿಕಿತ್ಸೆಯ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕುವ ಮೂಲಕ ಶ್ರೀಗಳಿಗೆ ಅಪಮಾನ ಮಾಡಿರುವದು ಖಂಡನೀಯ ಎಂದು ಪ್ರಮುಖರು ಆಕ್ಷೇಪಿಸಿದ್ದಾರೆ.
ಈ ಬಗ್ಗೆ ಮಡಿಕೇರಿ, ಶನಿವಾರಸಂತೆ, ಸೋಮವಾರಪೇಟೆ, ಕುಶಾಲನಗರ ಹಾಗೂ ಪಿರಿಯಾಪಟ್ಟಣ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ. ಆರೋಪಿಯನ್ನು ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಮಹಾಸಭಾದ ಜಿಲ್ಲಾಧ್ಯಕ್ಷ ಡಿ.ಬಿ. ಧರ್ಮಪ್ಪ, ಪ್ರಧಾನ ಕಾರ್ಯದರ್ಶಿ ಜಿ.ಎಂ. ಕಾಂತರಾಜು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್, ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷ ಮಹದೇವಪ್ಪ, ವೀರಾಜಪೇಟೆ ತಾಲೂಕು ಘಟಕದ ಅಧ್ಯಕ್ಷ ಎಸ್.ಎಸ್. ಸುರೇಶ್, ವೀರಾಜಪೇಟೆ ವೀರಶೈವ ಮಹಾಸಭಾದ ಅಧ್ಯಕ್ಷ ಕೆ.ಎನ್. ಸಂದೀಪ್ ಅವರುಗಳು ಆಗ್ರಹಿಸಿದ್ದಾರೆ.
ಶನಿವಾರಸಂತೆ : ಶ್ರೀ ಸಿದ್ದಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮಿಗಳ ಬಗ್ಗೆ ಅವಹೇಳನಕಾರಿ ಬರಹವನ್ನು ವಾಟ್ಸ್‍ಆಪ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ದಾಖಲಾಗಿರುವದನ್ನು ವಿರೋಧಿಸಿ ಶನಿವಾರಸಂತೆ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.
ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಗುಡುಗಳಲೆ ಗ್ರಾಮದ ಭಜರಂಗದಳದ ಸಹ ಸಂಚಾಲಕ ಜೆ.ಬಿ. ದಿಲೀಪ್ ಹಾಗೂ ಶಿಡಿಗಳಲೆ ಗ್ರಾಮದ ನಿವೃತ್ತ ಪ್ರಾಂಶುಪಾಲ ಎಸ್.ಎಂ. ಉಮಾಶಂಕರ್ ಅವರುಗಳು ಶನಿವಾರಸಂತೆ ಪೊಲೀಸ್ ಠಾಣೆಗೆ ಲಿಖಿತ ದೂರುಗಳನ್ನು ನೀಡಿದ್ದಾರೆ.