(ವರದಿ: ರವಿಕುಮಾರ್)
ಬೆಂಗಳೂರು, ಡಿ. 12: ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಹಳ್ಳಿಯೊಂದರ ಬಳಿ ಇರುವ ಶಂಕರನಾರಾಯಣ ಎಂಬ ವ್ಯಕ್ತಿ ಐದು ನೂರು ರೂಪಾಯಿ ಮುಖಬೆಲೆಯ ಹಳೆಯ ನೋಟುಗಳನ್ನು ಬದಲಾವಣೆ ಮಾಡಿ ಕೊಡಲು ಬೆಂಗಳೂರಿನ ಕೆಲವು ಮಧ್ಯವರ್ತಿಗಳನ್ನು ಸಂಪರ್ಕಿಸಿ ಪೇಚಿಗೆ ಸಿಲುಕಿದ್ದಾರೆ ಐದು ನೂರು ರೂಪಾಯಿ ಗರಿಷ್ಠ ಮುಖಬೆಲೆಯ ಸುಮಾರು ರೂ. ಒಂದು ಕೋಟಿ 95 ಲಕ್ಷ ಮೌಲ್ಯದ ಹಳೆ ನೋಟುಗಳ ಸಮೇತ ಬೆಂಗಳೂರಿನ ರಮೇಶ್ ಅಯ್ಯರ್, ಶರತ್, ವೆಂಕಟರಾಮು ಹಾಗೂ ಪ್ರಕಾಶ್ ಎಂಬುವವರು ಸಿಕ್ಕಿಬಿದ್ದಿದ್ದು ಅವರು ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದ ಶಂಕರನಾರಾಯಣ ಅವರಿಗೆ ಸೇರಿದ ಹಣ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ
ನೋಟುಗಳ ಸಮೇತ ನಂದಿನಿ ಲೇಔಟ್ ಬಸ್ ನಿಲ್ದಾಣದ ಬಳಿ ಭಾನುವಾರ ಬೆಳಿಗ್ಗೆ 7 ಗಂಟೆಗೆ ಇನೋವಾ ಕಾರಿನಲ್ಲಿ ಬಂದಿದ್ದ ಈ ನಾಲ್ವರು ಆರೋಪಿಗಳು ಅಪರಿಚಿತರಿಗೆ ಕಾಯುತ್ತಿದ್ದು ಕಂಡುಬಂದಿತ್ತು. ಇದರಿಂದ ಅನುಮಾನಗೊಂಡ ಸ್ಥಳೀಯರೊಬ್ಬರು ಠಾಣೆಗೆ ಮಾಹಿತಿ ನೀಡಿ ತನಿಖೆಗೆ ನೆರವಾಗಿದ್ದರು ಎಂದು ನಂದಿನಿ ಲೇಔಟ್ ಪೊಲೀಸ್ ಇನ್ಸ್ಪೆಕ್ಟರ್ ಲೋಹಿತ್ ‘ಶಕ್ತಿ’ಗೆ ತಿಳಿಸಿದ್ದಾರೆ
ಕೊಡಗು ಮೂಲದ ಈ ಶಂಕರನಾರಾಯಣ ಎಂಬ ವ್ಯಕ್ತಿಯನ್ನು ಬಂಧಿಸಲು ನಂದಿನಿ ಲೇಔಟ್ ಪೊಲೀಸರು ಸೋಮವಾರ ಸತತ ಪ್ರಯತ್ನ ನಡೆಸಿದ್ದು ಮಡಿಕೇರಿ, ಕುಶಾಲನಗರ, ವೀರಾಜಪೇಟೆ, ಸೋಮವಾರಪೇಟೆಗಳಲ್ಲಿ ಸುತ್ತಾಡಿದ ಮಾಹಿತಿ ಬಂದಿದೆ.
ಬುಧವಾರ ಸಂಜೆವರೆಗೂ ಆರೋಪಿ ಶಂಕರ ನಾರಾಯಣ ನಂದಿನಿ ಲೇಔಟ್ ಪೊಲೀಸರಿಗೆ ಸಿಕ್ಕಿಲ್ಲ. ಈ ನಡುವೆ ಆ ಹಣ ಇರಿಸಿಕೊಂಡಿದ್ದ ಬೆಂಗಳೂರು ಮೂಲದ ಮಧ್ಯವರ್ತಿಗಳಾದ ರಮೇಶ್, ಶರತ್, ವೆಂಕಟರಾಮು ಮತ್ತು ಪ್ರಕಾಶ್ ಅವರನ್ನು ಬಂಧಿಸಿ ವಶಕ್ಕೆ ಪಡೆದಿದ್ದಾರೆ
ಕೊಡಗಿನ ಆರೋಪಿಯ ಹುಡುಕಾಟಕ್ಕೆ ವ್ಯಾಪಕ ಬಲೆ ಬೀಸಲಾಗಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಲೋಹಿತ್ ಮಾಹಿತಿ ನೀಡಿದ್ದಾರೆ.