ಬೆಳಗಾವಿ, ಡಿ.11: ಬೆಳಗಾವಿಯಲ್ಲಿ ನಡೆಯುತ್ತಿರುವ ರಾಜ್ಯ ಶಾಸಕಾಂಗದ ಅಧಿವೇಶನದ ಎರಡನೇ ದಿನವಾದ ಇಂದು ಸದನದಲ್ಲಿ ಕೊಡಗಿನ ಕೆಲವು ಸಮಸ್ಯೆಗಳ ಬಗ್ಗೆ ಶಾಸಕರುಗಳು ಪ್ರಶ್ನಿಸಿದರು.ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು 94ಸಿ ಮತ್ತು 94 ಸಿಸಿ ಅಡಿಯಲ್ಲಿ ಜಾಗ ಮಂಜೂರಾತಿಗೆ ಖಜಾನೆ -2 ಅಡಿಯಲ್ಲಿ ಭೂ ಪರಿವರ್ತನೆ ಶುಲ್ಕ ಪಾವತಿಸಲು ತಂತ್ರಾಂಶದಲ್ಲಿ ಅವಕಾಶ ಇಲ್ಲದೆ ಇರುವದನ್ನು ಗಮನಕ್ಕೆ ತಂದರು. ಇದರಿಂದಾಗಿ ಹಕ್ಕು ಪತ್ರಗಳು ವಿತರಣೆಯಾಗುತ್ತಿಲ್ಲ ಎಂದು ಗಮನಕ್ಕೆ ತಂದರು. ತಂತ್ರಾಂಶದಲ್ಲಿನ ದೋಷದ ಬಗ್ಗೆ ಸರಕಾರ ಏನು ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯ ಕಂದಾಯ ಸಚಿವ ಆರ್. ವಿ. ದೇಶÀಪಾಂಡೆ ಅವರು 94 ಸಿ ಮತ್ತು 94 ಸಿಸಿ ಅಡಿಯಲ್ಲಿ 1775 ಅರ್ಜಿಗಳು ಸ್ವೀಕೃತಿಗೊಂಡಿದ್ದು ಆ ಪೈಕಿ 1422 ವಿಲೇವಾರಿ ಯಾಗಿವೆ, 353 ಬಾಕಿಯಿದೆ ಎಂದು ಮಾಹಿತಿಯಿತ್ತರು. ಹಕ್ಕು ಪತ್ರ ನೀಡಲಾಗುತ್ತಿದೆ ಎಂದು ತಿಳಿಸಿದರು.

ಬಗರ್ ಹುಕುಂ ಸಾಗುವಳಿದಾರರಿಗೆ ಹೊಸದಾಗಿ 57 ರಡಿ ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ ಮಾನದಂಡ ಹಾಗೂ ಯಾವ ಬೆಳೆಗಳಿಗೆ ಇದು ಅನ್ವಯವಾಗುತ್ತದೆ ಮತ್ತು ಪಾವತಿಸಬೇಕಾದ ಶುಲ್ಕದ ವಿಧಾನದ ಕುರಿತು ರಂಜನ್ ಪ್ರಶ್ನಿಸಿದರು. ಈ ಬಗ್ಗೆ ಉತ್ತರಿಸಿದ ಸಚಿವರು ಬಗರ್ ಹುಕುಂ ಸಾಗುವಳಿದಾರರು 1.1.2005 ರ ಪೂರ್ವದಲ್ಲಿ ಸತತ 3 ವರ್ಷ ಸಾಗುವಳಿ ಮಾಡಬೇಕು. ಅರ್ಜಿದಾರರು ಒತ್ತುವರಿ ಸಂದರ್ಭದಲ್ಲಿ ಪ್ರೌಢರಾಗಿದ್ದು ಸ್ವಂತ ಕೃಷಿ ಮಾಡಿರಬೇಕು. ಒತ್ತುವರಿ ಜಮೀನು ಅರ್ಜಿದಾರರ ಖಾಯಂ ವಿಳಾಸದ ತಾಲೂಕಿನ ವ್ಯಾಪ್ತಿಯೊಳಗಿರಬೇಕು, ನಮೂನೆ 50 ಮತ್ತು 53 ರಡಿ ಈಗಾಗಲೇ ಅರ್ಜಿ ಸಲ್ಲಿಸಿರುವವರು ಮತ್ತೊಮ್ಮೆ 57 ರಡಿ ಅರ್ಜಿ ಸಲ್ಲಿಸುವಂತಿಲ್ಲ. ಅರ್ಜಿ ಸ್ವೀಕರಿಸಿದ ಜೇಷ್ಠತೆ ಆಧಾರದಲ್ಲಿ ನಮೂನೆ-58 ರ ರಿಜಿಸ್ಟರ್‍ನಲ್ಲಿ ದಾಖಲಿಸಬೇಕು. ಭೂ ಮಂಜೂರಾತಿ ಮಿತಿಯು ಸ್ವಂತ ಹಿಡುವಳಿ ಮತ್ತು ಒತ್ತುವರಿ ಸೇರಿ 2 ಹೆಕ್ಟೇರ್ (ಡಿ ಕ್ಲಾಸ್) ಮೀರಿರಬಾರದು ಎಂದು ಸಚಿವರು ಮಾಹಿತಿಯಿತ್ತರು.

ರಾಜ್ಯದಲ್ಲಿ ಅಬಕಾರಿ ಇಲಾಖೆÉಯಲ್ಲಿ ಖಾಲಿ ಹುದ್ದೆಗಳಿದ್ದು ಭರ್ತಿ ಮಾಡುವಂತೆ ಅಪ್ಪಚ್ಚು ರಂಜನ್ ಸದನದಲ್ಲಿ ಆಗ್ರಹಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಅವರು ಅಬಕಾರಿ ಉಪ ನಿರೀಕ್ಷಕರ 177 ಹುದ್ದೆ ಹಾಗೂ ಅಬಕಾರಿ ರಕ್ಷಕರ 1003 ಹುದ್ದೆಗಳಿಗೆ ಕ್ರಮ ಕೈಗೊಳ್ಳಲಾಗಿದೆ ಎಂದರು. ಅಲ್ಲದೆ ಜಿಲ್ಲಾ ಮಟ್ಟಗಳಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದ ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಮೂಲಕ ವಾಹನ ಚಾಲಕರ ವೃಂದದಲ್ಲಿ ಖಾಲಿಯಿರುವ 183 ಹುದ್ದೆಗಳ ನೇರ ನೇಮಕಾತಿ ನಡೆಸಲಾಗುತ್ತದೆ ಎಂದು ಮಾಹಿತಿಯಿತ್ತರು.