ಕುಶಾಲನಗರ, ಡಿ. 11: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ, ಪಟ್ಟಣ ಪಂಚಾಯಿತಿ ಕುಶಾಲನಗರ ಆಶ್ರಯದಲ್ಲಿ ಶಿಶು ಪ್ರದರ್ಶನ ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಸ್ಥಳೀಯ ಹೌಸಿಂಗ್ ಬೋರ್ಡ್ ಕಾಲೋನಿಯ ರಾಮಮಂದಿರ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳ ಪೋಷಣೆ, ಮಾಹಿತಿ ಅರಿವು ಹಾಗೂ ಮಕ್ಕಳ ಆರೋಗ್ಯ ತಪಾಸಣೆ ಕಾರ್ಯಕ್ರಮ ನಡೆಯಿತು.

ಆರೋಗ್ಯ ಇಲಾಖೆಯಿಂದ ಗರ್ಭಿಣಿ ಸ್ತ್ರೀಯರ ತಪಾಸಣೆ ಹಾಗೂ ಪೌಷ್ಟಿಕಾಂಶ ಆಹಾರದ ಬಗ್ಗೆ ಮಾಹಿತಿ ಒದಗಿಸಲಾಯಿತು. ಮಕ್ಕಳಿಗಾಗಿ ಆಟೋಟ ಸ್ಪರ್ಧೆ ಏರ್ಪಡಿಸಲಾಗಿತ್ತು.

ಈ ಸಂದರ್ಭ ನಡೆದ ಸರಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಕೆ.ಶೀಲಾ, ಆರೋಗ್ಯವಂತ ಸಮಾಜ ನಿರ್ಮಿಸುವ ಹಿನ್ನಲೆಯಲ್ಲಿ ಇಲಾಖೆ ಶಿಬಿರಗಳ ಮೂಲಕ ಅರಿವು ಮೂಡಿಸುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಹಿರಿಯ ವೈದ್ಯರಾದ ಡಾ. ಹರಿ ಎ. ಶೆಟ್ಟಿ ಮಾತನಾಡಿ, ರೋಟರಿ ಮೂಲಕ ಅಂಗನವಾಡಿಗಳ ಕುಂದುಕೊರತೆ ನೀಗಿಸಲು ಯೋಜನೆ ರೂಪಿಸಲಾಗಿದೆ. ಮಕ್ಕಳ ಬಗ್ಗೆ ಪೋಷಕರು ಕಾಳಜಿ ವಹಿಸುವದರೊಂದಿಗೆ ಸರಕಾರದ ಸೌಲಭ್ಯಗಳ ಸದುಪಯೋಗ ಪಡೆಯುವಂತೆ ತಿಳಿಸಿದರು. ಈ ಸಂದರ್ಭ ಆರೋಗ್ಯವಂತ ಶಿಶುಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಗರ್ಭಿಣಿಯರಿಗೆ ಪ್ರೊಟಿನ್ ಪೌಷ್ಟಿಕಾಂಶ ವಿತರಣೆ ಮಾಡ ಲಾಯಿತು. ಕಾರ್ಯಕ್ರಮದಲ್ಲಿ ವೈದ್ಯರಾದ ಡಾ. ಭರತ್, ಇನ್ನರ್‍ವೀಲ್ ಕ್ಲಬ್ ಪ್ರಮುಖರಾದ ಆರತಿ ಎ. ಶೆಟ್ಟಿ, ಪಪಂ ಸದಸ್ಯರುಗಳಾದ ಶೈಲಾ ಕೃಷ್ಣಪ್ಪ, ಜಯಲಕ್ಷ್ಮಿ ನಂಜುಂಡಸ್ವಾಮಿ, ಆರೋಗ್ಯ ಇಲಾಖೆ ತಾಲೂಕು ಮೇಲ್ವಿಚಾರಕಿ ದಮಯಂತಿ, ನಿರ್ಮಲ, ಮಹಿಳಾ ಸಮಾಜ ಅಧ್ಯಕ್ಷೆ ಸಲೀನ ಡಿ ಕುನ್ನ, ಮಹಿಳಾ ಆರೋಗ್ಯ ಸಹಾಯಕಿ ಡಿ.ಎಂ. ಸುಶೀಲಾ, ಗೌರಮ್ಮ ಇದ್ದರು. ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕರಾದ ಚಂದ್ರೇಶ್ ಕಾರ್ಯಕ್ರಮ ನಿರೂಪಿಸಿದರು, ಅಂಗನವಾಡಿ ಕಾರ್ಯಕರ್ತೆ ಕೆ.ಕೆ. ಶಾರದ ಸ್ವಾಗತಿಸಿದರು.