ಮಡಿಕೇರಿ, ಡಿ.12: ಬೆಂಗಳೂರಿನ ಆಚಾರ್ಯ ಪಾಠಶಾಲಾ ಶಿಕ್ಷಣ ದತ್ತಿಯ ವತಿಯಿಂದ ಮಡಿಕೇರಿಯ ಸರಕಾರಿ ಪದವಿಪೂರ್ವ ಕಾಲೇಜಿಗೆ ರೂ 56 ಲಕ್ಷದ ವೆಚ್ಚದಲ್ಲಿ 2 ಅಂತಸ್ತಿನ ಹೊಸ ಕಂಪ್ಯೂಟರ್ ಲ್ಯಾಬ್ ಹಾಗೂ ಶೌಚಾಲಯದ ವ್ಯವಸ್ಥೆ ಮುಂದಿನ ವರ್ಷದ ಜೂನ್ ತಿಂಗಳಿನಲ್ಲಿ ಕಲ್ಪಿತವಾಗಲಿದೆ.

ಈ ನಿಟ್ಟಿನಲ್ಲಿ ಬುಧವಾರದಂದು ಕಾಲೇಜಿನ ಆವರಣದಲ್ಲಿ ಜಿಲ್ಲಾಧಿಕಾರಿ ಶ್ರೀವಿದ್ಯಾ ಪಿ.ಐ ಅವರಿಂದ ಗುದ್ದಲಿ ಪೂಜೆಯ ಮೂಲಕ ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಾಯಿತು. ಜಿಲ್ಲಾಧಿಕಾರಿಯವರು ಆಚಾರ್ಯ ಪಾಠಶಾಲಾ ಶಿಕ್ಷಣ ದತ್ತಿಯ ಈ ಪ್ರಯತ್ನವನ್ನು ಪ್ರಶಂಶಿಸಿದರು.

“ಕೊಡಗಿನಲ್ಲಾದ ದುರಂತದ ನಂತರ ಕೊಡಗಿನ ಜನರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ನಾವು ಮುಖ್ಯಮಂತ್ರಿಯವರನ್ನು ಭೇಟಿಯಾದ ಸಂದರ್ಭ ಕೊಡಗಿನ ಉಸ್ತುವಾರಿ ಸಚಿವರಾದ ಸಾರಾ ಮಹೇಶ್‍ರವರು ಕೊಡಗಿನ ಜಿಲ್ಲಾಧಿಕಾರಿಯವರನ್ನು ಭೇಟಿಯಾಗಲು ಸಲಹೆ ನೀಡಿದರು. ಬಳಿಕ ಇಲ್ಲಿನ ಜಿಲ್ಲಾಧಿಕಾರಿಯವರನ್ನು ಭೇಟಿಯಾದಾಗ ಮಡಿಕೇರಿಯ ಸರಕಾರಿ ಪದವಿಪೂರ್ವ ಕಾಲೇಜಿನ ಪರಿಸ್ಥಿತಿ ಅರಿತುಕೊಂಡು, ಈ ಕಾಲೇಜಿನ ವಿದ್ಯಾರ್ಥಿಗಳಿಗೆ ಕಂಪ್ಯೂಟರ್‍ಗಳು ಇಲ್ಲದ ಕಾರಣ ಕಂಪ್ಯೂಟರ್ ಲ್ಯಾಬ್ ನಿರ್ಮಾಣ ಮಾಡುವ ನಿರ್ಧಾರ ತೆಗೆದುಕೊಂಡು, ಗುತ್ತಿಗೆದಾರರಿಗೆ ಯೋಜನೆ ಕುರಿತು ಮಾರ್ಗದರ್ಶನದೊಂದಿಗೆ ರೂ. 56 ಲಕ್ಷ ವೆಚ್ಚದಲ್ಲಿ ಹೈಟೆಕ್ ಲ್ಯಾಬ್ ಹಾಗೂ ಕಾಲೇಜಿನ ಮಕ್ಕಳಿಗೆ ಶೌಚಾಲಯದ ವ್ಯವಸ್ಥೆಯನ್ನು ಮುಂದಿನ ವರ್ಷದ ಜೂನ್ ತಿಂಗಳ ಒಳಗೆ ಕಲ್ಪಿಸಿಕೊಡು ತ್ತೇವೆ,” ಎಂದು ಆಚಾರ್ಯ ಪಾಠಶಾಲಾ ಶಿಕ್ಷಣ ದತ್ತಿಯ ಅಧ್ಯಕ್ಷರಾದ ಟಿವಿ ಮಾರುತಿಯವರು ತಿಳಿಸಿದರು. ಕಟ್ಟಡದ ಕೆಲಸ ಪೂರ್ಣ ಗೊಂಡ ನಂತರ ಪೀಠೋಪಕರಣ ಗಳನ್ನು ನೆಹರು ನಗರ ಸಹಕಾರ ಬ್ಯಾಂಕ್ ಕಲ್ಪಿಸಿಕೊಡಲಿದೆ ಎಂದು ಆಚಾರ್ಯ ಪಾಠಶಾಲಾ ಶಿಕ್ಷಣ ದತ್ತಿಯ ಉಪಾಧ್ಯಕ್ಷರಾದ ಎ.ಪಿ ಆಚಾರ್ಯ ಅವರು ತಿಳಿಸಿದರು. ‘ಸೊನಾಟ’ ಕಂಪೆನಿಯ ಮೂಲಕ ಕಂಪ್ಯೂಟರ್‍ಗಳನ್ನೂ ಕಲ್ಪಿಸಿಕೊಡುವ ಭರವಸೆಯನ್ನು ಆಚಾರ್ಯ ಪಾಠಶಾಲಾ ಶಿಕ್ಷಣ ದತ್ತಿಯ ಅಧ್ಯಕ್ಷರು ನೀಡಿದರು.

ಇದೇ ವೇಳೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ಜೆಲ್ಲಾಧಿಕಾರಿ ಯವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಏರ್ಪಾಡಾಗಿದ್ದು, ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್À, ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಆಚಾರ್ಯ ಪಾಠಶಾಲಾ ಶಿಕ್ಷಣ ದತ್ತಿಯ ಕಾರ್ಯಕರ್ತರು, ಸರಕಾರಿ ಪದವಿಪೂರ್ವ ಕಾಲೇಜಿನ ಉಪನಿರ್ದೇಶಕರಾದ ಕೆಂಚಪ್ಪ, ಉಪಾಧ್ಯಕ್ಷರಾದ ಧನಂಜಯ್ ಎ.ಪಿ ಹಾಗು ಪ್ರಾಂಶುಪಾಲರಾದ ವಿಜಯನ್, ಪತ್ರಕರ್ತೆ ಪ್ರಜ್ಞಾ ಜಿ.ಆರ್. ಇವರುಗಳು ಉಪಸ್ಥಿತರಿದ್ದರು.