ಸೋಮವಾರಪೇಟೆ, ಡಿ. 11: ಮಾನವ ಹಕ್ಕುಗಳ ರಕ್ಷಣೆ ಬಗ್ಗೆ ಸಾಮಾಜಿಕ ಅರಿವು ಅಗತ್ಯ ಎಂದು ಇಲ್ಲಿನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪರಶುರಾಮ್ ಎಫ್. ದೊಡ್ಡಮನಿ ಅಭಿಪ್ರಾಯಿಸಿದರು.

ತಾಲೂಕು ಆಡಳಿತ, ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಇಲ್ಲಿನ ತಾಲೂಕು ಕಚೇರಿಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ನಿರಂಕುಶ ಮತ್ತು ಬಂಡವಾಳ ಶಾಹಿ ಪ್ರಭುತ್ವದ ಸಮಯದಲ್ಲಿ ಹೆಚ್ಚಿನ ಮಾನವ ಹಕ್ಕುಗಳ ಉಲ್ಲಂಘನೆ ಯಾಗಿದ್ದು, ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಅದು ಬೇರೆ ಬೇರೆ ರೀತಿಯಲ್ಲಿ ಮುಂದುವರೆಯುತ್ತಿದೆ ಎಂದು ವಿಷಾಧಿಸಿದ ನ್ಯಾಯಾಧೀಶರು, ಆರ್ಥಿಕ, ಸಾಮಾಜಿಕ, ಧಾರ್ಮಿಕ ಅಸಮಾನತೆ ತೊಲಗಬೇಕು. ಎಲ್ಲರಿಗೂ, ಎಲ್ಲಾ ಜೀವಿಗಳಿಗೂ ಬದುಕುವ ಹಕ್ಕಿದೆ ಎಂಬದನ್ನು ಮನುಷ್ಯ ಮನಗಾಣಬೇಕು. ತಮ್ಮ ಹಕ್ಕುಗಳನ್ನು ಗೌರವಿಸುತ್ತಾ, ಇತರರ ಹಕ್ಕುಗಳಿಗೂ ಗೌರವ ನೀಡಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ಸಿವಿಲ್ ನ್ಯಾಯಾಧೀಶ ಭರತ್ ಮಾತನಾಡಿ, ಮೂಲಭೂತ ಹಕ್ಕುಗಳಲ್ಲಿಯೇ ಜೀವಿಸುವ, ಸಮಾನತೆಯ ಹಕ್ಕುಗಳು ಅಡಕವಾಗಿವೆ. ಆದರೆ ಇಂದಿನ ದಿನಗಳಲ್ಲಿ ನೈತಿಕ ಜೀವನ ಶೈಲಿ ಕಡಿಮೆಯಾಗುತ್ತಿದ್ದು, ಮತ್ತೊಬ್ಬರ ಹಕ್ಕುಗಳನ್ನು ಗೌರವಿಸುತ್ತಾ ನೈತಿಕವಾಗಿ ಬದುಕುವದೇ ಮಾನವ ಹಕ್ಕುಗಳಾಗಿವೆ ಎಂದರು.

ಇಂದಿನ ದಿನಗಳಲ್ಲಿ ಹೋರಾಟಕ್ಕೆ ಮಾತ್ರ ಮಾನವ ಹಕ್ಕುಗಳು ಸೀಮಿತವಾಗಿವೆ. ಹಕ್ಕುಗಳ ವ್ಯಾಖ್ಯಾನ, ಪರಿಭಾಷೆಯನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕಿದೆ. ನಮ್ಮ ಹಕ್ಕುಗಳ ಬಗ್ಗೆ ಹೊಂದಿರುವ ತಪ್ಪು ಗ್ರಹಿಕೆಗಳಿಂದ ಹೊರಬರಬೇಕಿದೆ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಾನವ ಹಕ್ಕುಗಳ ರಕ್ಷಣೆ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಜೀವನದ ಎಲ್ಲಾ ಕ್ಷೇತ್ರಗಳಲ್ಲೂ ಪ್ರಾಮಾಣಿಕತೆ ಮತ್ತು ಕಾನೂನಿನ ನಿಯಮಗಳನ್ನು ಅನುಸರಿಸುತ್ತೇನೆ. ಲಂಚ ಪಡೆಯುವದಿಲ್ಲ-ಸ್ವೀಕರಿಸುವದೂ ಇಲ್ಲ, ಕೆಲಸಗಳಲ್ಲು ಪ್ರಾಮಾಣಿಕ ಮತ್ತು ಪಾರದರ್ಶಕತೆಯಿಂದ ನಿರ್ವಹಿಸು ತ್ತೇನೆ. ಸಾರ್ವಜನಿಕ ಹಿತಾಸಕ್ತಿಯಲ್ಲಿ ಕಾರ್ಯನಿರ್ವಹಿಸುತ್ತೇನೆ. ನಿಷ್ಠೆ ಯಿಂದಿರುತ್ತೇನೆ ಎಂಬಿತ್ಯಾದಿ ವಿಷಯ ಗಳ ಬಗ್ಗೆ ಪ್ರತಿಜ್ಞೆ ಸ್ವೀಕರಿಸಲಾಯಿತು.

ಕಾರ್ಯಕ್ರಮದಲ್ಲಿ ನ್ಯಾಯಾಧೀಶ ರಾದ ಮಲ್ಲಿಕಾರ್ಜುನ್, ತಾಲೂಕು ತಹಶೀಲ್ದಾರ್ ಮಹೇಶ್ ಸೇರಿದಂತೆ ತಾಲೂಕು ಕಚೇರಿ ಸಿಬ್ಬಂದಿಗಳು, ಸಾರ್ವಜನಿಕರು ಭಾಗವಹಿಸಿದ್ದರು.