ಮಡಿಕೇರಿ ಡಿ.11 :ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಮುನ್ನಡೆಯನ್ನು ಸಾಧಿಸಿದ ಹಿನ್ನೆಲೆ ಮಡಿಕೇರಿ ನಗರ ಕಾಂಗ್ರೆಸ್, ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಪ್ರಮುಖರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ನಗರದ ಇಂದಿರಾಗಾಂಧಿ ವೃತ್ತ ಚೌಕಿಯಲ್ಲಿ ಕಾಂಗ್ರೆಸ್ ಪರ ಘೋಷಣೆ ಕೂಗಿದ ಮುಖಂಡರು ಹಾಗೂ ಕಾರ್ಯಕರ್ತರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಜಯಕಾರ ಹಾಕಿದರು.

ಕೆಪಿಸಿಸಿ ಪ್ರಮುಖ ಟಿ.ಪಿ.ರಮೇಶ್ ಮಾತನಾಡಿ ರಾಜಸ್ಥಾನ, ಛತ್ತೀಸ್ ಗಢ ಮತ್ತು ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದು, ಮುಂದೆ ದೇಶಾದ್ಯಂತ ಈ ಗೆಲುವಿನ ಟ್ರೆಂಡ್ ಮುಂದುವರೆಯಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಜನಸಾಮಾನ್ಯರಿಗೆ ಸಂಕಷ್ಟವನ್ನು ತಂದೊಡ್ಡಿದ್ದ ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿಯಿಂದಾಗಿ ಮತದಾರರು ಕಾಂಗ್ರೆಸ್ ಕೈಹಿಡಿದಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್ ನಗರಾಧ್ಯಕ್ಷ ಕೆ.ಯು.ಅಬ್ದುಲ್ ರಜಾóಕ್ ಮಾತನಾಡಿ ಕಾಂಗ್ರೆಸ್ ಮುಕ್ತ ಭಾರತವನ್ನಾಗಿ ಮಾಡುವ ಹಗಲುಗನಸು ಕಾಣುತ್ತಿದ್ದ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ ಎಂದರು. ರಾಹುಲ್ ಗಾಂಧಿ ಅವರ ಕೈ ಮತ್ತಷ್ಟು ಬಲಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಗರಸಭಾ ಸದಸ್ಯರುಗಳಾದ ಚುಮ್ಮಿದೇವಯ್ಯ, ವೆಂಕಟೇಶ್, ಪಕ್ಷದ ಪ್ರಮುಖರಾದ ಚಂದ್ರಶೇಖರ್, ಟಿ.ಎಂ.ಅಯ್ಯಪ್ಪ, ಚಿಮ್ಮುಣಿರ ಶ್ಯಾಂ, ಸದಾ ಮುದ್ದಪ್ಪ, ಉಸ್ಮಾನ್, ಮುನೀರ್, ಯತೀಶ್, ಪಾರ್ವತಿ, ಪ್ರೇಮ, ನಾಣಯ್ಯ ಮತ್ತಿತರರು ಈ ಸಂದರ್ಭ ಹಾಜರಿದ್ದರು.