ಮಡಿಕೇರಿ, ಡಿ. 11: ಮಾನವ ಹಕ್ಕುಗಳ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಇರಬೇಕು. ಜೊತೆಗೆ ವೈಯಕ್ತಿಕ ಮತ್ತು ಸಾಮಾಜಿಕ ಹಕ್ಕುಗಳನ್ನು ಗೌರವಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಹೇಳಿದ್ದಾರೆ.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ ಹಾಗೂ ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆದ ‘ಮಾನವ ಹಕ್ಕು ದಿನಾಚರಣೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಒಂದನೇ ಅಪರ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಡಿ. ಪವನೇಶ್ ಮಾತನಾಡಿ ಮೂಲಭೂತ ಹಕ್ಕುಗಳೆಲ್ಲವನ್ನು ಮಾನವ ಹಕ್ಕು ಎಂದು ಅರಿತು ಪ್ರತಿಯೊಬ್ಬರೂ ಗೌರವಿಸಬೇಕು. ಮಾನವ ಹಕ್ಕುಗಳನ್ನು ಉಲ್ಲಂಘಿಸಬಾರದು ಎಂದರು.
ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶೆ ನೂರುನ್ನೀಸ ಅವರು ಮಾತನಾಡಿ ಪ್ರತಿಯೊಬ್ಬರೂ ಹಕ್ಕು ಗಳನ್ನು ಪಡೆಯಲು ಹೋರಾಡುತ್ತೇವೆ. ಆದರೆ ಕರ್ತವ್ಯಗಳನ್ನು ಮರೆತಿದ್ದೇವೆ ಎಂದು ವಿಷಾದಿಸಿದರು.
ಜಿ.ಪಂ. ಸಿಇಒ ಲಕ್ಷ್ಮೀಪ್ರಿಯಾ ಮಾತನಾಡಿ ಕಾನೂನಿನ ಬಗ್ಗೆ ತಿಳುವಳಿಕೆ ಇದ್ದಲ್ಲಿ ಮಾನವ ಹಕ್ಕು ಉಲ್ಲಂಘನೆ ಕಡಿಮೆಯಾಗಲಿದೆ ಎಂದು ನುಡಿದರು.
ವಕೀಲರ ಸಂಘದ ಉಪಾಧ್ಯಕ್ಷ ಪಿ.ಯು. ಪ್ರೀತಂ ಮಾತನಾಡಿ ಮಾನವ ಹಕ್ಕು ಸಂರಕ್ಷಣೆ ಜೊತೆಗೆ, ಮಾನವೀ ಯತೆಯಿಂದ ಆತ್ಮಸಾಕ್ಷಿಯಾಗಿ ನಡೆದುಕೊಳ್ಳಬೇಕು ಎಂದು ನುಡಿದರು.
ಉಪ ವಿಭಾಗಾಧಿಕಾರಿ ಟಿ. ಜವರೇಗೌಡ, ಜಿ.ಪಂ. ಉಪಕಾರ್ಯದರ್ಶಿ ಗುಡೂರು ಭೀಮಸೇನ, ಸಹಾಯಕ ಕಾರ್ಯದರ್ಶಿ ಶ್ರೀಕಂಠಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್, ಜಿಲ್ಲಾ ಸರ್ಜನ್ ಡಾ. ಜಗದೀಶ್, ಜಿಲ್ಲಾ ಖಜಾನಾಧಿಕಾರಿ ಸತೀಶ್, ಜಗನ್ನಾಥ್ ಇತರರು ಇದ್ದರು.
ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕ ಜಯಪ್ಪ ಸ್ವಾಗತಿಸಿ, ನಿರೂಪಿಸಿದರು. ಪ್ರಶಾಂತ್ ಪ್ರಾರ್ಥಿಸಿದರು. ಪೌರಾಯುಕ್ತ ಎಂ.ಎಲ್. ರಮೇಶ್ ವಂದಿಸಿದರು.