ಗೋಣಿಕೊಪ್ಪ ವರದಿ, ಡಿ. 11: ಚೀನಿಹಡ್ಲು ರಸ್ತೆ ಅಭಿವೃದ್ಧಿ ಕಾರ್ಯಗಳಿಗೆ ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು.
ಜಿಲ್ಲಾ ಪಂಚಾಯಿತಿ ಸದಸ್ಯೆ ಪಿ.ಆರ್. ಪಂಕಜ, ತಿತಿಮತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್, ಪಿಡಿಓ ಮಮತಾ, ಹಾಡಿ ಅಧ್ಯಕ್ಷ ಮಲ್ಲಪ್ಪ ಪೂಜೆ ನೆರವೇರಿಸಿದರು.
ಮಣ್ಣು ರಸ್ತೆಗೆ ಕಲ್ಲು ಹಾಕುವ ಮೂಲಕ ಅಭಿವೃದ್ಧಿಗೆ ಮುಂದಾಗಿರುವ ಪಂಚಾಯಿತಿ ಭೂಮಿಪೂಜೆ ನಡೆಸುವ ಸಂದರ್ಭ ನೂರಾರು ಹಾಡಿ ನಿವಾಸಿಗಳು ಪಾಲ್ಗೊಂಡು ಸಂತೋಷ ವ್ಯಕ್ತಪಡಿಸಿದರು. ತಿತಿಮತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ತಿತಿಮತಿ ಗ್ರಾಮ ಪಂಚಾಯಿತಿಯ 14 ನೇ ಹಣಕಾಸು ಯೋಜನೆಯಿಂದ 2.5 ಲಕ್ಷ, ಉದ್ಯೋಗಖಾತ್ರಿ ಯೋಜನೆಯಿಂದ 3 ಲಕ್ಷ, ಒಟ್ಟು 5.5 ಲಕ್ಷ ಅನುದಾನದಲ್ಲಿ ಹಾಡಿಗೆ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಹಾಡಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಪಂಚಾಯಿತಿಯಿಂದ ವಿಶೇಷ ಯೋಜನೆ ರೂಪಿಸಿ ಕೊಳ್ಳಲಾಗಿದೆ ಎಂದರು. ಅರಣ್ಯ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ಪಿ.ಸಿ. ರಾಮು, ಗ್ರಾ. ಪಂ. ಮಾಜಿ ಅಧ್ಯಕ್ಷ ಶರಣುಪಿಳ್ಳೆ, ಪ್ರಮುಖರುಗಳಾದ ಡಾ. ಮದ್ಯಸ್ತ, ಚುಬ್ರು ಪಾಲ್ಗೊಂಡಿದ್ದರು.
- ಸುದ್ದಿಪುತ್ರ