ಮಡಿಕೇರಿ, ಡಿ. 10 : ರೈತರು ಬೆಳೆದ ಬೆಳೆಯ ಹುಲ್ಲನ್ನು 2019 ಮಾರ್ಚ್ 1 ರವರೆಗೆ ಹೊರ ರಾಜ್ಯಗಳಿಗೆ ಸಾಗಿಸುವಂತಿಲ್ಲವೆಂದು ಸರಕಾರ ಆದೇಶ ಹೊರಡಿಸಿದ್ದು, ಈ ಕ್ರಮದಿಂದ ಕೊಡಗಿನ ರೈತರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿರುವದರಿಂದ ಸರ್ಕಾರವೇ ಉತ್ತಮ ಬೆಲೆ ನೀಡಿ ಹುಲ್ಲನ್ನು ಖರೀದಿಸಲಿ ಎಂದು ಅಮ್ಮತ್ತಿ ರೈತ ಸಂಘ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಕಾವಡಿಚಂಡ ಯು.ಗಣಪತಿ ಮಾರ್ಚ್ ಕಳೆದ ನಂತರ ಮಳೆ ಪ್ರಾರಂಭವಾಗುವದರಿಂದ ಹುಲ್ಲು ಗದ್ದೆಯಲ್ಲಿಯೇ ಉಳಿದು ಕೊಳೆತು ಹೋಗುವ ಸಾಧ್ಯತೆಗಳಿದ್ದು, ರೈತರು ಸಾಕಷ್ಟು ನಷ್ಟ ಅನುಭವಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಪ್ರಾಕೃತಿಕ ವಿಕೋಪದಿಂದ ಸಂಕಷ್ಟದಲ್ಲಿರುವ ಕೊಡಗಿನ ರೈತರ ರಕ್ಷಣೆಗೆ ಸರ್ಕಾರ ಬರಬೇಕಾಗಿತ್ತು. ಆದರೆ ಗೊಂದಲಮಯ ಆದೇಶಗಳ ಮೂಲಕ ಮತ್ತಷ್ಟು ಕಷ್ಟ, ನಷ್ಟಗಳನ್ನು ಅನುಭವಿಸಬೇಕಾದ ಪರಿಸ್ಥಿತಿ ಎದುರಾಗಿದ್ದು, ಹುಲ್ಲನ್ನು ಹೊರ ರಾಜ್ಯಗಳಿಗೆ ಸಾಗಿಸಲು ಅವಕಾಶ ನೀಡದಿದ್ದರೆ ಮಾರ್ಚ್ 15 ರೊಳಗೆ ಸರ್ಕಾರವೇ ಖರೀದಿ ಮಾಡಲಿ. ಈ ಕಾರ್ಯಕ್ಕೆ ಮುಂದಾಗದಿದ್ದಲ್ಲಿ ಜಿಲ್ಲೆಯಾದ್ಯಂತ ರೈತ ಸಂಘದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳುವದಾಗಿ ಗಣಪತಿ ಎಚ್ಚರಿಕೆ ನೀಡಿದರು.

ಮಳೆ ಹೆಚ್ಚಾಗಿ ಅಡಿಕೆ ಫಸಲು ಕೊಳೆರೋಗದಿಂದ ನೆಲ ಕಚ್ಚಿದೆ, ಕಾಫಿ, ಕರಿ ಮೆಣಸು ನಾಶವಾಗಿದೆ. ಕರ್ನಾಟಕ ರಾಜ್ಯ ಕೇರಳದ ಮೂರು ಪಾಲಿಗೂ ಅಧಿಕ ಕರಿಮೆಣಸು ಬೆಳೆಯುತ್ತದೆ. ಆದರೆ ಸರ್ಕಾರದ ನಿರ್ಲಕ್ಷ್ಯದಿಂದ ಕರಿಮೆಣಸಿಗಾಗಿ ಕೇಂದ್ರ ಸರ್ಕಾರದಿಂದ ಸಿಗುತ್ತಿರುವ ಎಲ್ಲಾ ಸೌಲಭ್ಯಗಳು ಕೇರಳದ ಪಾಲಾಗುತ್ತಿದ್ದು, ಕರ್ನಾಟಕ ಶೂನ್ಯಾವಸ್ಥೆಯಲ್ಲಿದೆ. ಹೊರ ದೇಶಗಳಿಂದ ಆಮದಾಗುತ್ತಿರುವ ಕರಿಮೆಣಸು ವ್ಯವಹಾರವನ್ನು ಸ್ಥಗಿತಗೊಳಿಸಿದರೆ ಸ್ಥಳೀಯ ಬೆಳೆಗಾರರು ಬೆಳೆದಿರುವ ಕರಿಮೆಣಸಿಗೆ ನ್ಯಾಯಯುತ ಬೆಲೆ ಸಿಗಲಿದೆ ಎಂದು ಗಣಪತಿ ಅಭಿಪ್ರಾಯಪಟ್ಟರು. ನಮ್ಮ ಜನಪ್ರತಿನಿದಿಗಳು ಸುಳ್ಳು ಭರವಸೆಗಳನ್ನು ನೀಡುತ್ತಲೇ ಬಂದಿದ್ದಾರೆ ಹೊರತು ಕರಿಮೆಣಸಿನ ಆಮದು ವ್ಯವಹಾರದ ಕುರಿತು ಕೊಡಗಿನ ಬೆಳೆಗಾರರ ಪರವಾದ ಯಾವದೇ ನಿರ್ಧಾರಗಳನ್ನು ತೆಗೆದುಕೊಂಡಿಲ್ಲವೆಂದು ಆರೋಪಿಸಿದರು.

ಇತ್ತೀಚಿನ ದಿನಗಳಲ್ಲಿ ತೋಟಗಳಲ್ಲಿ ಕಾಡಾನೆಯೊಂದಿಗೆ ಮಂಗಗಳ ಉಪಟಳವೂ ಹೆಚ್ಚಾಗಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಕೇವಲ ಕಚೇರಿಗೇ ಸೀಮಿತವಾಗದೆ ತೋಟಗಳಿಗೆ ಭೇಟಿ ನೀಡಿ ವನ್ಯಜೀವಿಗಳ ಉಪಟಳವನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.

ರೈತ ಸಮುದಾಯಕ್ಕೆ ಸಕಾಲದಲ್ಲಿ ಕಡಿಮೆ ದರದಲ್ಲಿ ಗೊಬ್ಬರವನ್ನು ದೊರಕಿಸಿ ಕೊಡಬೇಕು ಎಂದು ಆಗ್ರಹಿಸಿದ ಗಣಪತಿ ಕೆಲವು ಪ್ರದೇಶಗಳಲ್ಲಿ ಅವಧಿ ಮೀರಿದ ಗೊಬ್ಬರವನ್ನು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಸಂಚಾಲಕ ಕೆ.ಎಂ.ಕುಶಾಲಪ್ಪ ಹಾಗೂ ಕಾರ್ಯದರ್ಶಿ ಎಂ.ಜಿ.ಪೊನ್ನಪ್ಪ ಉಪಸ್ಥಿತರಿದ್ದರು.