ಮಡಿಕೇರಿ, ಡಿ. 10: ಮಡಿಕೇರಿ ರೋಟರಿ ಹಾಗೂ ಕೂರ್ಗ್ ಎಜುಕೇಷನ್ ಫಂಡ್ ವತಿಯಿಂದ ನಗರದ ಕೊಡವ ಸಮಾಜ ಸಭಾಂಗಣದಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ನಡೆಯಿತು.
ಮಡಿಕೇರಿ ತಾಲೂಕು ವಿದ್ಯಾರ್ಥಿಗಳಿಗಾಗಿ ನಡೆದ ಕಾರ್ಯಕ್ರಮದಲ್ಲಿ 8 ಶಾಲೆಯ 170ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಡಿ.ಪಿ. ಸುಮನ್, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಹೇಗೆ ಎದುರಿಸಬೇಕು. ಅದಕ್ಕಾಗಿ ಹೇಗೆ ತಯಾರಿ ನಡೆಸಿಕೊಳ್ಳಬೇಕು ಎಂಬದರ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಲವು ಹಂತಗಳಿರುತ್ತದೆ. ಪ್ರತಿಯೊಂದು ಹಂತವೂ ಅತ್ಯಂತ ಪ್ರಮುಖವಾಗಿದ್ದು, ವಿದ್ಯಾರ್ಥಿಗಳು ಹೆಚ್ಚು ಗಮನ ಹರಿಸಬೇಕು. ಕೆಪಿಎಸ್ಸಿ, ಯುಪಿಎಸ್ಸಿನಲ್ಲಿ ಮೂರು ಹಂತಗಳ ಪರೀಕ್ಷೆ ನಡೆಯುತ್ತದೆ. ಅಂತಿಮ ಹಂತದಲ್ಲಿ ಸಂದರ್ಶನವಿರುತ್ತದೆ. ಆದರಿಂದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಿದ್ಧತೆ ನಡೆಸುವ ಕುರಿತು ಹಲವು ಮಾಹಿತಿಗಳನ್ನು ವಿದ್ಯಾರ್ಥಿ ಗಳೊಂದಿಗೆ ಹಂಚಿಕೊಂಡರು.
ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಕೆ. ನಾಚಪ್ಪ, ಭಾರತೀಯ ಸೈನ್ಯ ಸೇರ್ಪಡೆ ಹಾಗೂ ಸೈನ್ಯದಲ್ಲಿನ ವಿವಿಧ ರೀತಿಯ ಉನ್ನತ ಅಧಿಕಾರಿಗಳ ಹುದ್ದೆಗೆ ಏರಲು ಹೇಗೆ ಸಿದ್ಧತೆ ನಡೆಸಿಕೊಳ್ಳಬೇಕು ಎಂಬದರ ಬಗ್ಗೆ ವಿವರಿಸಿದರು.
ವಕೀಲ ನಿರಂಜನ್ ಮಾತನಾಡಿ, ಮಕ್ಕಳು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳುವತ್ತ ಹೆಚ್ಚಿನ ಗಮನ ಹರಿಸಬೇಕು. ಮೊಬೈಲ್ನ್ನು ಹೆಚ್ಚಾಗಿ ಬಳಕೆ ಮಾಡಬಾರದು ಹಾಗೂ ಪೋಷಕರು ಮಕ್ಕಳ ಮೇಲೆ ಒತ್ತಡ ಹೇರಬಾರದು ಎಂದು ಹೇಳಿದರು.
ಜಿಲ್ಲಾ ಉದ್ಯೋಗ ಅಧಿಕಾರಿ ಜಗನ್ನಾಥ್ ಮಾತನಾಡಿ, ಸರಕಾರ ಹಲವು ಪರೀಕ್ಷೆಗಳಿಗೆ ಅರ್ಜಿ ಆಹ್ವಾನಿಸುತ್ತಲೇ ಇರುತ್ತದೆ. ಈಗ ಆನ್ಲೈನ್ ಮೂಲಕವೂ ಪರೀಕ್ಷೆಗಳು ನಡೆಯುತ್ತದೆ. ಇಂತಹ ಸೌಲಭ್ಯಗಳನ್ನು ಪ್ರತಿ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಮಡಿಕೇರಿ ರೋಟರಿ ಅಧ್ಯಕ್ಷ ನಿವೃತ್ತ ಮೇಜರ್ ಓಡಿಯಂಡ ಎಸ್. ಚಿಂಗಪ್ಪ, ಪ್ರಮುಖರಾದ ಡಾ. ಪಾಟ್ಕರ್, ಮೃಣಾಲಿನಿ ಚಿಣ್ಣಪ್ಪ, ಡಾ. ರವಿ ಅಪ್ಪಾಜಿ, ಎಂ.ಎಂ. ಕಾರ್ಯಪ್ಪ, ರೋಟರಿ ಹಾಗೂ ಕೂರ್ಗ್ ಎಜು ಕೇಷನ್ ಫಂಡ್ನ ಪದಾಧಿಕಾರಿಗಳು, ವಿವಿಧ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಇದ್ದರು. ರೋಟರಿಯ ಗೀತಾ ಗಿರೀಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.