ಹೆಬ್ಬಾಲೆ, ಡಿ. 10: ಸಮೀಪದ ಹೆಬ್ಬಾಲೆ ಗ್ರಾಮದಲ್ಲಿ ಗ್ರಾಮ ದೇವತೆ ಶ್ರೀ ಬನಶಂಕರಿ ಅಮ್ಮನವರ ವಾರ್ಷಿಕ ಹಬ್ಬ ಶನಿವಾರ ಮುಕ್ತಾಯಗೊಂಡಿತು.
ಹೆಬ್ಬಾಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ ಹಾಗೂ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತ ತಂಡಗಳಿಗೆ ಜಿ.ಪಂ. ಸದಸ್ಯ ಎಚ್.ಆರ್. ಶ್ರೀನಿವಾಸ್ ಬಹುಮಾನ ವಿತರಿಸಿದರು.
ಈ ಸಂದರ್ಭ ಮಾತನಾಡಿದ ಅವರು ದಾನಿಗಳ ಹಾಗೂ ಗ್ರಾಮಸ್ಥರ ಸಹಕಾರದಿಂದ ಗ್ರಾಮ ದೇವತೆ ಹಬ್ಬವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ವರ್ಷ ನಡೆಯುವ ಗ್ರಾಮ ದೇವತೆ ಹಬ್ಬಗಳು ಗ್ರಾಮದ ಜನರಲ್ಲಿ ಪರಸ್ಪರ ಸಾಮರಸ್ಯ ಹಾಗೂ ಒಗ್ಗಟ್ಟು ಮೂಡಿಸುವ ವೇದಿಕೆಯಾಗಿದೆ ಎಂದರು.
ಗ್ರಾಮ ಪಂಚಾಯತಿ ಸದಸ್ಯ ಮಧುಸೂದನ್ ಮಾತನಾಡಿ ಪ್ರತಿ ವರ್ಷ ಯಾವದೇ ಗೊಂದಲ ಹಾಗೂ ಗಲಾಟೆ ಇಲ್ಲದೆ ಶಾಂತಿಯುತವಾಗಿ ಹಬ್ಬ ಆಚರಣೆ ಮಾಡಿಕೊಂಡು ಬರಲು ಊರಿನ ಎಲ್ಲಾ ಸಮುದಾಯದ ಸಹಕಾರವೇ ಕಾರಣ ಎಂದರು. ಮಾದರಿ ಯುವಕ ಸಂಘದ ಅಧ್ಯಕ್ಷ ಎಚ್.ಆರ್. ಆದರ್ಶ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಉದ್ಯಮಿಗಳಾದ ಸಿದ್ದಲಿಂಗಪುರದ ರಾಮಣ್ಣ, ಬೇಬಿ, ಮಂಜುನಾಥ, ರಾಜಶೇಖರ್, ಶ್ಯಾಮ್, ಗಳಿಗೆ ನಾಗೇಶ್, ತೊರೆನೂರು ಕೃಷಿಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಜೀವನ್, ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಯಜಮಾನ್ ಬಸವರಾಜು, ಹೆಬ್ಬಾಲೆ ಪ್ರೌಢಶಾಲೆ ಆಡಳಿತ ಮಂಡಳಿ ಅಧ್ಯಕ್ಷ ರಮೇಶ್, ಮಾದರಿ ಸಂಘದ ಪದಾಧಿಕಾರಿಗಳಾದ ಎಚ್.ಟಿ. ಸಂತೋಷ್, ಎಚ್.ಟಿ. ಪುನೀತ್, ಎಚ್.ಜೆ. ಶ್ರೀಧರ್, ಎಚ್.ಜೆ. ಸುದರ್ಶನ್, ಮನು, ಮಾಜಿ ಸೈನಿಕ ಪುಟ್ಟೆಗೌಡ ಉಪಸ್ಥಿತರಿದ್ದರು.