ಮಡಿಕೇರಿ, ಡಿ.10 : ಅತಿವೃಷ್ಟಿಯಿಂದ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ತೋಟ, ಗದ್ದೆಗಳನ್ನು ಕಳೆದುಕೊಂಡಿರುವ ಸಂತ್ರಸ್ತರಿಗೆ ಕನಿಷ್ಟ 15 ಸೆಂಟ್ಸ್ ಜಾಗವನ್ನು ಒಳಗೊಂಡಂತೆ ಮನೆಯನ್ನು ಮಂಜೂರು ಮಾಡಬೇಕೆಂದು ಮಕ್ಕಂದೂರು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮಸ್ಥ ಹಾಗೂ ಮಳೆಹಾನಿ ಸಂತ್ರಸ್ತ ಕೆ.ಟಿ.ಅನುಕೂಲ್, ಮಹಾಮಳೆಯಿಂದ ಮಕ್ಕಂದೂರು, ಹೆಮ್ಮೆತ್ತಾಳು ಹಾಗೂ ಮೇಘತ್ತಾಳು ಗ್ರಾಮ ವ್ಯಾಪ್ತಿಯಲ್ಲಿ ಸಾಕಷ್ಟು ಜಮೀನು ಕೊಚ್ಚಿಹೋಗಿದ್ದು, ಈಗಲೂ ಆ ಪ್ರದೇಶ ಅಪಾಯದ ಸ್ಥಿತಿಯಲ್ಲಿದೆ. ಅಳಿದು ಉಳಿದಿರುವ ಕಾಫಿ ತೋಟದ ಕಾಫಿ ಫಸಲನ್ನು ಒಣಗಿಸಲು ಮತ್ತು ದಾಸ್ತಾನು ಮಾಡಲು ಜಾಗದ ಕೊರತೆ ಎದುರಾಗಿದ್ದು, ಸಂತ್ರಸ್ತರಿಗೆ ಮನೆಯೊಂದಿಗೆ ಕಣ, ಗೋದಾಮು, ದನದ ಕೊಟ್ಟಿಗೆಗಳ ನಿರ್ಮಾಣಕ್ಕೆ ಪೂರಕವಾಗಿ 15 ಸೆಂಟ್ಸ್ ಜಾಗವನ್ನು ಮೀಸಲಿಡಬೇಕೆಂದು ತಿಳಿಸಿದರು.

ಬೆಳೆಗಾರರಿಗೆ ಅಗತ್ಯವಾಗಿ ಗೋದಾಮು, ಕಣ ಹಾಗೂ ವಾಹನ ನಿಲ್ಲಿಸಲು ಜಾಗದ ಅಗತ್ಯವಿದ್ದು, ಎರಡು ಮುಕ್ಕಾಲು ಸೆಂಟ್ಸ್ ಜಾಗದಲ್ಲಿ ಮನೆ ನಿರ್ಮಿಸಿ ಕೊಟ್ಟರೆ ಯಾವದೇ ಉಪಯೋಗವಿಲ್ಲವೆಂದರು. ಜಿಲ್ಲಾಡಳಿತ ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಉಪವಾಸ ಸತ್ಯಾಗ್ರಹ ನಡೆಸುವದಲ್ಲದೆ, ಕಾನೂನು ಹೋರಾಟಕ್ಕೂ ಮುಂದಾಗುವದಾಗಿ ಅನುಕೂಲ್ ಎಚ್ಚರಿಕೆ ನೀಡಿದರು.

ಹೋರಾಟ ಸಮಿತಿಗಳಲ್ಲಿ ರಾಜಕೀಯ ಬೆರೆತಿರುವದರಿಂದ ಮತ್ತು ರಾಜಕೀಯ ಮುಖಂಡರುಗಳು ತಮಗೆ ಬೇಕಾದವರ ಹೆಸರನ್ನು ಮಾತ್ರ ಸಂತ್ರಸ್ತರ ಪಟ್ಟಿಯಲ್ಲಿ ಸೇರಿಸಿರುವದರಿಂದ ಗ್ರಾಮಸ್ಥರೇ ಪ್ರತ್ಯೇಕವಾಗಿ ಬೇಡಿಕೆ ಈಡೇರಿಕೆಗಾಗಿ ಹೋರಾಟ ನಡೆಸುವದಾಗಿ ತಿಳಿಸಿದರು. ಅತಿವೃಷ್ಟಿಯಿಂದ ಯಾವದೇ ಹಾನಿಯಾಗದವರು ಕೂಡ ಸರ್ಕಾರದ ಸೌಲಭ್ಯ ಪಡೆಯುತ್ತಿದ್ದಾರೆ. ಆದರೆ, ಸಾಕಷ್ಟು ಕಷ್ಟ ನಷ್ಟಗಳನ್ನು ಅನುಭವಿಸಿದವರಿಗೆ ಇಲ್ಲಿಯವರೆಗೆ ಸೌಲಭ್ಯ ದೊರೆತಿಲ್ಲವೆಂದು ಅನುಕೂಲ್ ಬೇಸರ ವ್ಯಕ್ತಪಡಿಸಿದರು.

ತಾಲೂಕು ಕಚೇರಿಯಲ್ಲಿ ಅರ್ಹ ಪಲಾನುಭವಿಗಳಿಗೆ ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ, ಪರಿಹಾರ ನೀಡಬೇಕಾದರೆ ಶೇಕಡವಾರು ಕಮೀಷನ್ ಕೇಳುತ್ತಿರುವದಲ್ಲದೆ, ಬ್ಲಾಕ್‍ಮೇಲ್ ತಂತ್ರ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.ಬಾಡಿಗೆ ಮನೆಯಲ್ಲಿ ಇರುವವರಿಗೆ ಪ್ರತಿ ತಿಂಗಳು 10 ಸಾವಿರ ರೂ. ನೀಡುವದಾಗಿ ಸರ್ಕಾರ ತಿಳಿಸಿದೆಯಾದರೂ, ಇಲ್ಲಿಯವರೆಗೆ ಹಣವನ್ನು ನೀಡಿಲ್ಲವೆಂದು ಅನುಕೂಲ್ ಗಮನ ಸೆಳೆದರು.

ಗ್ರಾಮಸ್ಥ ಟಿ.ಕೆ.ಕುಶಾಲಪ್ಪ ಮಾತನಾಡಿ, ರೈತರು ಕಷ್ಟಪಟ್ಟು ಬೆಳೆದ ಕೃಷಿ ಪಸಲು ಸೇರಿದಂತೆ ಇಡೀ ಜಮೀನು ನಾಶವಾಗಿದ್ದು, ಪರಿಶ್ರಮಕ್ಕೆ ಯಾವದೇ ಫಲವಿಲ್ಲದಾಗಿದೆ. ಹಾನಿ ಸಂಭವಿಸಿ ಇಷ್ಟು ದಿನಗಳು ಕಳೆದಿದ್ದರು ವಿಕೋಪಕ್ಕೆ ಒಳಗಾದ ಸಾಕಷ್ಟು ಪ್ರದೇಶಕ್ಕೆ ಅಧಿಕಾರಿಗಳು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ಆರೋಪಿಸಿದರು. ಪ್ರಾಕೃತಿಕ ವಿಕೋಪ ಸಂದರ್ಭ ಹಾನಿಗೊಳಗಾಗಿರುವ ವಾಹನಗಳಿಗೆ ಕೂಡ ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕೆಂದು ಕುಶಾಲಪ್ಪ ಒತ್ತಾಯಿಸಿದರು.

ಮಾಜಿ ಸೈನಿಕ ಬಿ.ಎಸ್.ವಿಜಯ ಮಾತನಾಡಿ, 5 ಎಕರೆ ಜಮೀನನ್ನು ಸಂಪೂರ್ಣವಾಗಿ ಕಳೆದು ಕೊಂಡಿರುವ ತನ್ನ ಹೆಸರನ್ನು ಪರಿಹಾರದ ಪಟ್ಟಿಯಿಂದ ರಾಜಕೀಯ ಕಾರಣಕ್ಕಾಗಿ ಕೈಬಿಡಲಾಗಿದೆ ಎಂದು ಆರೋಪಿಸಿದರು.

ತನ್ನ ವಾಸದ ಮನೆಗೂ ಕೂಡ ಸಾಕಷ್ಟು ಹಾನಿಯಾಗಿದ್ದು, ಯಾವದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ. ಗ್ರಾಮ ಲೆಕ್ಕಿಗರು ಸ್ಥಳ ಪರಿಶೀಲನೆ ನಡೆಸಿ ಮನೆ ಇರುವ ಪ್ರದೇಶ ವಾಸಕ್ಕೆ ಯೋಗ್ಯವಿಲ್ಲವೆಂದು ತಿಳಿಸಿದ್ದಾರೆ. ಎಲ್ಲವನ್ನು ಕಳೆದುಕೊಂಡು ನಾವುಗಳು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದರೂ, ನಿಮಗೆ ನಿವೃತ್ತಿ ವೇತನ ಬರುತ್ತದೆ ಮತ್ತು ನಿಮ್ಮ ಪತ್ನಿಗೆ ಉದ್ಯೋಗವಿದೆ ಎಂದು ಹೇಳಿ ಪರಿಹಾರದ ಪಟ್ಟಿಯಿಂದ ತÀಮ್ಮನ್ನು ಕೈ ಬಿಡಲಾಗಿದೆ. ಸುಮಾರು ಇಪ್ಪತ್ತು ವರ್ಷಗಳ ಕಾಲ ಗಡಿಯಲ್ಲಿ ಸೈನಿಕನಾಗಿ ದುಡಿದ ತಾನು ಇಂದು ಎಲ್ಲವನ್ನು ಕಳೆದುಕೊಂಡಿದ್ದೇನೆ. ಆದರೆ, ಸರ್ಕಾರದ ಪರಿಹಾರವೇ ದೊರೆಯದಂತೆ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ದೇವಿಪ್ರಸಾದ್ ಹಾಗೂ ಎ.ಪಿ. ತೀರ್ಥಕುಮಾರ್ ಉಪಸ್ಥಿತರಿದ್ದರು.