ವೀರಾಜಪೇಟೆ, ಡಿ.10 : ಕೊಡಗಿನವರು ಸ್ವಾಭಿಮಾನಿಗಳು, ಆದರೆ ಪ್ರಕೃತಿ ಇಂದು ಅವರನ್ನು ಎಲ್ಲಾರ ಮುಂದೆ ಕೈ ಚಾಚಿ ನಿಲ್ಲುವಂತೆ ಮಾಡಿದೆ. ಪ್ರಕೃತಿ ತನ್ನ ಮುಂದೆ ಎಲ್ಲರೂ ತೃಣ ಸಮಾನರು ಎಂದು ತೋರಿಸಿದೆ. ಆದರೆ ನಾವು ಇಂದು ಆ ನೊಂದವರಿಗೆ ಮತ್ತೆ ಶಕ್ತಿ ಚೈತನ್ಯ ತುಂಬುವ ಕೆಲಸ ಮಾಡಬೇಕಿದೆ ಎಂದು ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಅಭಿಪ್ರಾಯಪಟ್ಟರು. ಅಖಿಲ ಕೊಡವ ಸಮಾಜ ಸಭಾಂಗಣದಲ್ಲಿ ಅಜ್ಜಿಕುಟ್ಟಿರ ಕುಟುಂಬಸ್ಥರ ಸಂಘ ಹಾಗೂ ಅಖಿಲ ಕೊಡವ ಸಮಾಜದ ಸಂಯುಕ್ತ ಆಶ್ರಯದಲ್ಲಿ ಸಂತ್ರಸ್ತರಿಗೆ ಸಹಾಯಧನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

1924 ರಲ್ಲಿ ಬಿರುಸಿನ ಮಳೆಗೆ ತೋರ ಗ್ರಾಮದಲ್ಲಿ ಚೋಮ ಬೆಟ್ಟ ಜಾರಿದ ಕಾರಣ ಅತಂತ್ರರಾಗಿ ಊರು ಬಿಡಬೇಕಾಯಿತು.1962 ರಲ್ಲಿ ಸಹ ಕೊಡಗೂ ಜಲ ಪ್ರಳಯ ಎದುರಿಸಿದೆ ವ್ಯಾಪಕ ಹಾನಿಯಾಗಿದೆ. ಅದರಂತೆ ಈ ಸಾಲಿನಲ್ಲಿ ಬಿರು ಮಳೆ ಜಲಪ್ರಳಯ ಮಾಡಿ, ಮನೆ ಆಸ್ತಿ ಪಾಸ್ತಿ ಎಲ್ಲಾವನ್ನು ಕೊಚ್ಚಿಕೊಂಡು ಹೋಗಿ ಜನರನ್ನು ಬೀದಿಗೆ ತಂದಿದ್ದು ಕೊಡಗಿನ ಪಾಲಿಗೆ ಅತ್ಯಂತ ನೋವಿನ ವಿಚಾರ.. ಅಂದು ಪ್ರಾಣ ಉಳಿಸಿಕೊಂಡು ಆ ಸ್ಥಳದಿಂದ ಬೇರೆಡೆಗೆ ಬಂದ ಜನರ ನೋವು, ಕಣ್ಣೆದುರೆ ಎಲ್ಲಾ ಕಳೆದು ಕೊಂಡವರ ನೋವು ಮರೆಯಲಾಗದು. ಅದರಿಂದ ಅಖಿಲ ಕೊಡವ ಸಮಾಜ ಹಿಂದೆಯು ಇವರಿಗೆ ಸ್ವಂದಿಸಿದೆ, ಇಂದು ಸಹ 10 ಕುಟುಂಬಗಳಿಗೆ ಅಜ್ಜಿಕುಟ್ಟಿರ ಕುಟುಂಬಸ್ಥರೊಂದಿಗೆ ಸೇರಿ ಸಹಾಯ ಧನ ವಿತರಣೆ ಮಾಡುತ್ತಿದೆ ಎಂದು ಮಾತಂಡ ಮೋಣ್ಣಪ್ಪ ಹೇಳಿದರು.

ಅಖಿಲ ಕೊಡವ ಸಮಾಜದ ಉಪಾಧ್ಯಕ್ಷ ಅಜ್ಜಿಕುಟ್ಟಿರ ಸುಬ್ರಮಣಿ ಮಾತನಾಡಿ, ಅಜ್ಜಿಕುಟ್ಟಿರ ಕುಟುಂಬಸ್ಥರ ಸಂಘ ಕುಟುಂಬ ಮತ್ತು ಇತರ ಕಡೆಯಿಂದ ಸಂಗ್ರಹಿಸಿದ 1ಲಕ್ಷ ರೂವನ್ನು ನೊಂದವರಿಗೆ ನೀಡುತ್ತಿದೆ. ಅದಕ್ಕಾಗಿ ಮಳೆ ಹಾನಿಯ ಪ್ರದೇಶಕ್ಕೆ ಬೇಟಿ ನೀಡಿ ಪರಿಸೀಲಿಸಿದಾಗ ಅಲ್ಲಿನ ಜನರ ನೋವಿನ ನೈಜತೆಯ ಅರಿವಾಗಿದೆ. ನಮ್ಮ ಕುಟುಂಬ ಮತ್ತು ಇತರರಿಂದ ಈ ಹಣ ಸಂಗ್ರಹ ಮಾಡಿ ತೀರಾ ತೊಂದರೆಯಾದವರಿಗೆ ಸಹಾಯಸ್ತ ನೀಡಿದೆ ಎಂದರು.

ಅಜ್ಕಿಕುಟ್ಟಿರ ಕುಟುಂಬಸ್ಥರ ಸಂಘದ ಅಧ್ಯಕ್ಷ ಶಾಂತು ಪೂಣಚ್ಚ ಮತ್ತು ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಢ ಮೊಣ್ಣಪ್ಪ ಸಹಾಯಧನ ವಿತರಣೆ ಮಾಡಿದರು. ಈ ವೇಳೆ ಅಜ್ಜಿಕುಟ್ಟಿರ ಕುಟುಂಬಸ್ಥರ ಸಂಘದ ಉಪಾಧ್ಯಕ್ಷ ಅಚ್ಚಯ್ಯ , ಸದಸ್ಯರಾದ ಅಜ್ಜಿಕುಟ್ಟಿರ ಮುತ್ತಪ್ಪ ಉಪಸ್ಥಿತರಿದ್ದರು.

ಇದೇ ಸಂದರ್ಭ ಅಖಿಲ ಕೊಡವ ಸಮಾಜದ ಖಜಾಂಚಿ ಮಂಡೇಪಂಡ ಸುಗುಣ ಮುತ್ತಣ್ಣ ಅವರ ಪುತ್ರಿ ಶಾಂತಲ ಮುತ್ತಣ್ಣ ಕೊಯಮುತ್ತೂರು ಶಿವ ಟೆಕ್ಸ್‍ಟೆಲ್ ಕಂಪನಿ ಮುಖಾಂತರ ಸುಮಾರು 5 ಲಕ್ಷ ರೂ ವೆಚ್ಚದ ಬಟ್ಟೆ ಬರೆ , ಹೊದಿಕೆಯನ್ನು ನೀಡಿದ್ದು ಇದರಲ್ಲಿ ಆಗತ್ಯ ಉಡುಪು ಮತ್ತು ಹೊದಿಕೆಗಳನ್ನು ನೀಡಲಾಯಿತು.

ಈ ಸಂದರ್ಭ ಸಮಾಜದ ಕಾರ್ಯದರ್ಶಿ ಅಮ್ಮಣಿಚಂಡ ರಾಜ ನಂಜಪ್ಪ, ಖಜಾಂಚಿ ಮಂಡೇಪಂಡ ಸುಗುಣ ಮುತ್ತಣ್ಣ , ಜಂಟಿ ಕಾರ್ಯದರ್ಶಿ ಅಪ್ಪುಮಣಿಯಂಡ ತುಳಸಿ ಮುಂತಾದವರು ಉಪಸ್ಥಿತರಿದ್ದರು.

ಇಂದು ಸಂತ್ರಸ್ತರಾದ ಶಾಂತಿ ರಾಜು ಗರಂಗದೂರು, ಕಾವೇರಮ್ಮ ಇಗೋಡ್ಲು , ಬಟ್ಟಿಯಂಡ ರಾಣಿ, , ನಾಗಂಡ ಚೋದಮ್ಮ ಮೂವತೋಕ್ಲು, ಬಾಚಮಂಡ ಭಾಗ್ಯವತಿ ಗರ್ವಾಲೆ, ಐಯ್ಯಮುಡಿಯಂಡ ಶಾರದ ಸುಬ್ಬಯ್ಯ ಮೇಘತಾಳು, ಕನ್ನಿಕಂಡ ಪಾರ್ವತಿ ಕುಂಬಾರಗಡಿಗೆ, ಕಾರೇರ ಜೋಯಪ್ಪ ಕಾಲೂರು, ಚಂಡೀರ ಪೊನ್ನಪ್ಪ ಕಾಲೂರು ಅವರುಗಳಿಗೆ ನೆರವು ವಿತರಿಸಲಾಯಿತು.