ಪ್ರತ್ಯಕ್ಷ ಚಿತ್ರ ವರದಿ : ರಫೀಕ್ ತೂಚಮಕೇರಿ ಪೊನ್ನಂಪೇಟೆ, ಡಿ. 9 : ಕೊಡಗು ಜಿಲ್ಲೆಗೆ ಅತೀ ಸಮೀಪದ ಕಣ್ಣನೂರು ಜಿಲ್ಲೆಯ ಸೆರಗಿನಲ್ಲಿರುವ ಮಟ್ಟನೂರಿ ನಲ್ಲಿ ನಿರ್ಮಾಣಗೊಂಡಿರುವ ಕಣ್ಣೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಭಾನುವಾರದಂದು ವಿಧ್ಯುಕ್ತವಾಗಿ ಲೋಕಾರ್ಪಣೆ ಗೊಂಡಿತು. ಕೇರಳ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಅವರು ವಿಶ್ವ ದರ್ಜೆಯ ಕಣ್ಣೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಡಗರದಿಂದ ಉದ್ಘಾಟಿಸಿ ಸಾರ್ವಜನಿಕ ಸೇವೆಗಾಗಿ ರಾಷ್ಟ್ರಕ್ಕೆ ಸಮರ್ಪಿಸಿದರು.ಕಣ್ಣೂರಿನಿಂದ ಮೊದಲ 186 ಪ್ರಯಾಣಿಕರನ್ನು ಹೊತ್ತು ಪ್ರಪ್ರಥಮವಾಗಿ ಅಬುಧಾಬಿಗೆ ಹೊರಟ ಐ.ಎಕ್ಸ್-715 ಸಂಖ್ಯೆಯ ‘ಏರ್ ಇಂಡಿಯಾ ಎಕ್ಸ್‍ಪ್ರೆಸ್’ ವಿಮಾನಕ್ಕೆ ಭಾನುವಾರ ಬೆಳಿಗ್ಗೆ 10.10ಕ್ಕೆ ಸರಿಯಾಗಿ ನೂತನ ವಿಮಾನ ನಿಲ್ದಾಣದ ‘ಏಪ್ರೊನ್’ನಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವರಾದ ಸುರೇಶ್ ಪ್ರಭು ಅವರು ಹಸಿರು ನಿಶಾನೆ ತೋರಿಸುವ ಮೂಲಕ ವಿಮಾನಯಾನ ಸೇವೆಗೆ ವಿಧ್ಯುಕ್ತ ಚಾಲನೆ ನೀಡಿದರು.

ಇದಕ್ಕೂ ಮೊದಲು ನಡೆದ ಕಾರ್ಯಕ್ರಮದಲ್ಲಿ ಪಿಣರಾಯಿ ವಿಜಯನ್ ಮತ್ತು ಸುರೇಶ್ ಪ್ರಭು ಅವರು ಒಳಾಂಗಣದಲ್ಲಿ ಜಂಟಿಯಾಗಿ ಜ್ಯೋತಿ ಬೆಳಗಿಸುವದರ ಮೂಲಕ ನಿಲ್ದಾಣದ ಟರ್ಮಿನಲ್ ಕಟ್ಟಡವನ್ನು ವಿಧ್ಯುಕ್ತವಾಗಿ ಲೋಕಾರ್ಪಣೆಗೊಳಿಸಿ ದರು. ಅಲ್ಲದೆ ನಿಲ್ದಾಣದ ಮುಂಭಾಗದಲ್ಲಿ ಸ್ಥಾಪಿಸಲಾಗಿದ್ದ ಬೃಹತ್ ರಾಷ್ಟ್ರ ಧ್ವಜಾರೋಹಣ ನಡೆಸಿದ ಮುಖ್ಯಮಂತ್ರಿಗಳು ಸಿ.ಐ.ಎಸ್.ಎಫ್. ಪಡೆಯಿಂದ ಗೌರವ ವಂದನೆ ಸ್ವೀಕರಿಸಿದರು.

ಬಳಿಕ ನೂತನ ವಿಮಾನ ನಿಲ್ದಾಣದ ಹೊರಾಂಗಣದಲ್ಲಿ ನಿರ್ಮಿಸಲಾಗಿದ್ದ ಬೃಹತ್ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ನವಕೇರಳ ನಿರ್ಮಾಣದ ಭಾಗವಾಗಿರುವ ಕಣ್ಣೂರು

(ಮೊದಲ ಪುಟದಿಂದ) ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾರಂಭದಿಂದ ಉತ್ತರ ಕೇರಳ ಮತ್ತು ಇದಕ್ಕೆ ಹೊಂದಿಕೊಂಡಿರುವ ಗಡಿ ಭಾಗದ ಚಿತ್ರಣವೇ ಬದಲಾಗಲಿದ್ದು, ಶೀಘ್ರದಲ್ಲೇ ಅಭಿವೃದ್ಧಿಯ ಮತ್ತಷ್ಟು ಬಾಗಿಲುಗಳು ಇದರಿಂದ ತೆರೆದುಕೊಳ್ಳಲಿವೆ ಎಂದರು.

4 ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ದೇಶದ ಏಕೈಕ ರಾಜ್ಯ ಎಂಬ ಖ್ಯಾತಿಗೆ ಒಳಗಾಗಿರುವ ಕೇರಳದಲ್ಲಿ ಪ್ರಸಿದ್ಧ ಯಾತ್ರಾ ಸ್ಥಳವಾದ ಶಬರಿಮಲೆಗೆ ಬರುವ ಭಕ್ತರ ಅನುಕೂಲಕ್ಕಾಗಿ ಎರಿಮಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಯೋಜನೆ ಸರಕಾರದ ಪರಿಗಣನೆಯಲ್ಲಿದೆ. ಇದನ್ನು ಶೀಘ್ರದಲ್ಲೆ ಕೈಗೆತ್ತಿಕೊಳ್ಳಲಾಗುವದು ಎಂದು ತಿಳಿಸಿದರು.

ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ನಾಗರಿಕ ವಿಮಾನಯಾನ ಸಚಿವರಾದ ಸುರೇಶ್ ಪ್ರಭು ಅವರು, ನಾಗಲೋಟದಲ್ಲಿ ಸಾಗುತ್ತಿರುವ ದೇಶದ ಸಾಮಾಜಿಕ ಪ್ರಗತಿ ಭಾರತದ ಆರ್ಥಿಕ ಸ್ಥಿತಿಗತಿಯನ್ನು ಬದಲಾಯಿ ಸಿದೆ. ಕೇರಳದ ಆರ್ಥಿಕತೆಗೆ ಹೆಚ್ಚು ಸಹಕಾರಿಯಾಗಲಿರುವ ಕಣ್ಣೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ರಾಜ್ಯದ ಆರ್ಥಿಕ ಪ್ರಗತಿ ಸಾಧಿಸಲು ಪ್ರಮುಖ ‘ಗೇಟ್‍ವೇ’ ಎಂದು ಬಣ್ಣಿಸಿದರಲ್ಲದೆ, ಇದೆಲ್ಲಾ ರಾಷ್ಟ್ರದ ಅಭಿವೃದ್ಧಿಗೆ ಮಹತ್ತರ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಪ್ರತೀ ರಾಜ್ಯಗಳ ಅಭಿವೃದ್ಧಿ ಅಗತ್ಯವಿದೆ ಎಂದು ಹೇಳಿದರು.

ಕೇರಳ ಸರಕಾರದ ಮುಖ್ಯ ಕಾರ್ಯದರ್ಶಿ ಟೋಮ್ ಜೋಸ್ ಅವರು ಸ್ವಾಗತಿಸಿದರು. ಕೆ.ಐ.ಎ. ಎಲ್.ನ ವ್ಯವಸ್ಥಾಪಕ ನಿರ್ದೇಶಕ ವಿ. ತುಳಸಿದಾಸ್ ಅವರು ಯೋಜನಾ ವರದಿ ಮಂಡಿಸಿದರು. ಅಧ್ಯಕ್ಷತೆ ವಹಿಸಿದ್ದ ಕೇರಳ ರಾಜ್ಯ ಕೈಗಾರಿಕೆ, ಕ್ರೀಡೆ ಮತ್ತು ಯುವಜನ ಸೇವಾ ಇಲಾಖೆಯ ಸಚಿವ ಇ.ಪಿ. ಜಯರಾಜನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಐ.ಎ.ಎಲ್.ನ ನಿರ್ದೇಶಕ ಕೆ.ಪಿ. ಜೋಸ್ ಅವರು ವಂದಿಸಿದರು.

ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ರಾಷ್ಟ್ರಕ್ಕೆ ಸಮರ್ಪಣೆ ಸಂದರ್ಭ ಬೆಳಿಗ್ಗೆಯಿಂದಲೇ ಸಾವಿರಾರು ಜನರು ಆಗಮಿಸಿದ್ದರು. ಸರಕಾರದ ಮೂಲಗಳ ಪ್ರಕಾರ 1 ಲಕ್ಷಕ್ಕೂ ಮೀರಿದ ಜನಸಾಗರ ಭಾನುವಾರ ಹರಿದು ಬಂದಿತು.್ತ

ಭಾನುವಾರದಂದು ವಿಮಾನಯಾನ ಸೇವೆ ಆರಂಭಿಸಿದ ‘ಗೋಏರ್’ ತನ್ನ ಮೊದಲ ಪ್ರಯಾಣಿಕರನ್ನು ನವದೆಹಲಿ ಮತ್ತು ಬೆಂಗಳೂರಿನಿಂದ ಹೊತ್ತು ಮಧ್ಯಾಹ್ನದ ವೇಳೆಗೆ ಕಣ್ಣೂರು ವಿಮಾನ ನಿಲ್ದಾಣ ತಲಪಿತು. ‘ಗೋಏರ್’ ವಿಮಾನ ರನ್‍ವೇನಿಂದ ‘ಏಪ್ರೊನ್’ ಗೆ ಬರುತ್ತಿದ್ದಂತೆ ವಿಮಾನ ನಿಲ್ದಾಣದ ಪರವಾಗಿ ಈ ವಿಮಾನಕ್ಕೆ ‘ಜಲವಂದನೆ’ ಸಲ್ಲಿಸಿ ಬರಮಾಡಿಕೊಳ್ಳಲಾಯಿತು.

ಕೊಡಗು ಜಿಲ್ಲೆಯಿಂದಲೂ ವಿವಿಧ ಸಂಘಟನೆಗಳ ಪ್ರಮುಖರು ಕಣ್ಣೂರು ವಿಮಾನ ನಿಲ್ದಾಣದ ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಗಳಾದರು.