ಗೋಣಿಕೊಪ್ಪ ವರದಿ, ಡಿ. 9: 18 ವರ್ಷಗಳ ನಿರಂತರವಾಗಿ ಬುದ್ಧಿಮಾಂಧ್ಯ ಹಾಗೂ ಅಂಗ ವೈಖಲ್ಯತೆ ಮಕ್ಕಳಿಗೆ ಆಸರೆಯಾಗಿರುವ ಪಾಲಿಬೆಟ್ಟ ಚೆಷೈರ್‍ಹೋಂ ಇಂಡಿಯಾ ಕೂರ್ಗ್ ವಿಶೇಷ ಮಕ್ಕಳ ಶಾಲೆಗೆ ರಾಜ್ಯ ಸರ್ಕಾರ ರಾಜ್ಯ ಪ್ರಶಸ್ತಿ ನೀಡುವ ಮೂಲಕ ಪ್ರೋತ್ಸಾಹ ನೀಡಿದೆ.

ವಿಶೇಷಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ವತಿಯಿಂದ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಗಣನೀಯ ಸಾಧನೆ ಸೇವೆ ಸಲ್ಲಿಸಿದ ಸ್ವಯಂ ಸೇವಾ ಸಂಸ್ಥೆಗಳಿಗೆ ನೀಡುವ ಪ್ರಶಸ್ತಿ ಪಾಲಿಬೆಟ್ಟ ಚೆಷೈರ್‍ಹೋಂ ಇಂಡಿಯಾ ಕೂರ್ಗ್ ವಿಶೇಷ ಮಕ್ಕಳ ಶಾಲೆ ಪಡೆದುಕೊಂಡಿದೆ.

ಲಯನ್ಸ್ ಕ್ಲಬ್ ಆರಂಭಿಸಿದ್ದ ಸಂಸ್ಥೆಯನ್ನು 2000ರಲ್ಲಿ ಚೆಷೈರ್ ಹೋಂ ಹೆಸರಿನಲ್ಲಿ ಮುಂದುವರಿಸಲಾ ಯಿತು. ಮೊದಲ ಬಾರಿಗೆ ಪಾಲಿಬೆಟ್ಟ ಅನುಗ್ರಹ ಸಭಾಂಗಣದಲ್ಲಿ ಆರಂಭಿಸಿ ನಂತರದ ದಿನಗಳಲ್ಲಿ ಸರ್ಕಾರದಿಂದ ಜಾಗ ಪಡೆದು ಸ್ವಂತ ಕಟ್ಟಡದಲ್ಲಿ ಮುಂದುವರಿಸಲಾಯಿತು.

ಸಮುದಾಯ ಆಧಾರಿತ ಪುನರ್ವಸತಿ ಚಿಂತನೆಯಲ್ಲಿ ಪ್ರತಿ ಗ್ರಾಮದಲ್ಲಿ ಸರ್ವೆ ನಡೆಸಿ ಬುದ್ಧಿಮಾಂದ್ಯ, ಆಟಿಸಂ, ಸೆರ್ಟಿರಲ್ ಪಾಲ್ಸಿ, ಬಹು ಅಂಗವೈಖಲ್ಯತೆ ಇಂತಹ ಮಕ್ಕಳನ್ನು ಪತ್ತೆ ಹಚ್ಚಿ ಅವರಿಗೆ ಪುನರ್ವಸತಿ ನೀಡಲಾಯಿತು. ಇದು ಸಮಾಜದಲ್ಲಿ ಹೆಚ್ಚು ಪರಿಣಾಮ ಬೀರಿ ಹೆಚ್ಚು ಹೆಚ್ಚು ಮಕ್ಕಳು ಇಲ್ಲಿ ವಸತಿ ಪಡೆದುಕೊಳ್ಳಲು ಆರಂಭಿಸಿದರು. ಇದರಂತೆ ಇಲ್ಲಿವರೆಗೆ 150ಕ್ಕೂ ಹೆಚ್ಚು ಮಕ್ಕಳು ಇಲ್ಲಿ ಶಿಕ್ಷಣ ಪಡೆದುಕೊಂಡಿ ದ್ದಾರೆ. ಪ್ರಸ್ತುತ 66 ಮಕ್ಕಳಿದ್ದಾರೆ. 6 ಶಿಕ್ಷಕರು ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.

ಸಂಸ್ಥೆ ಅಧ್ಯಕ್ಷರಾಗಿ ಗೀತಾ ಚೆಂಗಪ್ಪ, ಉಪಾಧ್ಯಕ್ಷರಾಗಿ ಪುನಿತಾ ರಾಮಸ್ವಾಮಿ, ಕಾರ್ಯದರ್ಶಿಯಾಗಿ ಆಶಾ ಸುಬ್ಬಯ್ಯ, ಖಜಾಂಜಿಯಾಗಿ ಮುತ್ತು ಬಿದ್ದಪ್ಪ ತೊಡಗಿಕೊಂಡಿದ್ದಾರೆ. ಒಟ್ಟು 14 ಮಂದಿ ಆಡಳಿತ ಮಂಡಳಿ ಯಲ್ಲಿದ್ದಾರೆ. ಪಾಲಿಬೆಟ್ಟ ಲಯನ್ಸ್ ಅಧ್ಯಕ್ಷರಿಗೆ ಗೌರವ ಸದಸ್ಯತ್ವ ನೀಡಿ ಮಕ್ಕಳ ಪೋಷಣೆಗೆ ಅವಕಾಶ ನೀಡಲಾಗಿದೆ.

ಬುದ್ಧಿಮಾಂದ್ಯ ಹಾಗೂ ವಿಶೇಷಚೇತನ ಮಕ್ಕಳಿಗೆ ವಿವಿಧ ಕ್ಷೇತ್ರಗಳಲ್ಲಿ ತರಬೇತಿ ನೀಡಿ, ಪುನರ್ವ ಸತಿ ಕಲ್ಪಿಸಿ ಅವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ, ಮಕ್ಕಳಿಗೆ ಯೋಗ, ಸಂಗೀತ, ಕ್ರೀಡೆ, ಕಸೂತಿ, ಕಂಪ್ಯೂಟರ್, ತರಬೇತಿ ಮೂಲಕ ಕಲಿಕೆ ನೀಡುತ್ತಿರುವದು, ಆರೋಗ್ಯ ಶಿಬಿರದ ಮೂಲಕ ಆರೋಗ್ಯ ರಕ್ಷಣೆ, ಕೃತಕ ಕಾಲು ಅಳವಡಿಕೆ ಮೂಲಕ ಸಾಧನೆಗೆ ಅವಕಾಶ ನೀಡಿರುವದು, ರಾಷ್ಟ್ರೀಯ ಮಟ್ಟದಲ್ಲೂ ಕ್ರೀಡಾ ಸಾಧನೆ ಮಾಡಿರುವದನ್ನು ಅರಿತು ಪ್ರಶಸ್ತಿ ನೀಡಲಾಗಿದೆ.

ವರ್ಷದ 10 ತಿಂಗಳು ಇಲ್ಲಿ ವಸತಿ, ಶಿಕ್ಷಣ ನೀಡಲಾಗುತ್ತಿದೆ. ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 2.30 ರವರೆಗೆ ಶಿಕ್ಷಣ ನೀಡಲಾಗುತ್ತದೆ. ಪ್ರಾರ್ಥನೆ ಮೂಲಕ ದಿನಚರಿ ಆರಂಭಿಸಿ, ಅಂಗಸಾಧನೆ ಮಾಡಿಸಲಾ ಗುತ್ತದೆ. ನಂತರ ಸಾಮಾಜಿಕವಾಗಿ ಬದುಕು ನಿಭಾಯಿಸುವ ಬಗ್ಗೆ ತಿದ್ದಿ ತೀಡಲಾಗುತ್ತಿದೆ. ಅವರಿಗೆ ಬೇಕಾದ ಆಹಾರ ಸೇವನೆಗೆ ಸಿಬ್ಬಂದಿ ಸಹಾಯ ಮಾಡುತ್ತಾರೆ. ಅವರ ಬೇಕು ಬೇಡಗಳನ್ನು ಅರ್ಥ ಮಾಡಿಕೊಂಡು ಬದುಕಿನ ಹಾದಿಯನ್ನು ತೋರಿಸಲಾಗುತ್ತಿದೆ.

ವಾರ್ಷಿಕವಾಗಿ ಪ್ರವಾಸದ ಮೂಲಕ ಸಮಾಜದ ಪರಿಚಯ, ಹೊಟೇಲ್‍ಗಳಲ್ಲಿ ತಿಂಡಿ ಪಡೆಯು ವದು, ಹಣ ಕಟ್ಟುವದು ಹೇಗೆ ಎಂಬವದನ್ನು ಅರ್ಥೈಸಲು ಪ್ರವಾಸ ಕೈಗೊಳ್ಳುತ್ತಾರೆ. ಅಂಗಡಿಗಳಲ್ಲಿ ವಸ್ತು ಖರೀದಿ ಬಗ್ಗೆ ತೋರಿಸಿಕೊಡಲಾಗುತ್ತಿದೆ.

ವ್ಯಕ್ತಿಯ ಕಾರ್ಯವಿಶಿಷ್ಠತೆ ಅರಿಯಲು ಬುದ್ಧಿಮಾಂಧ್ಯತೆ, ಸ್ಪೀಚ್, ಫಿಸಿಯೋಥೆರಫಿ, ಮಕ್ಕಳ ಹಕ್ಕು, ಮಾಹಿತಿ ನೀಡಲಾಗುತ್ತಿದೆ. ಕೌಶಲ್ಯ ಮತ್ತು ಸನ್ನೆ ಭಾಷೆಯ ಬಗ್ಗೆ ತರಬೇತಿ ನೀಡಲಾಗುತ್ತಿದೆ.

ಕೌಶಲ್ಯ ತರಬೇತಿಯಲ್ಲಿ ಪೇಪರ್ ಬ್ಯಾಗ್, ಬಟ್ಟೆಯಿಂದ ತಯಾರಿಸುವ ಶೃಂಗಾರ ವಸ್ತುಗಳು ಪೆನಾಯಿಲ್ ತಯಾರಿಕೆ ಮಾಡಲಾಗುತ್ತಿದೆ. ದೇಶದಲ್ಲಿ ಆಚರಿಸುವ ಪ್ರತೀ ಹಬ್ಬಗಳನ್ನು ಇಲ್ಲಿ ಆಚರಿಸಿ, ಸಾಂಸ್ಕøತಿಕ, ಆಚಾರ-ವಿಚಾರ, ಹಬ್ಬ ಆಚರಣೆ ಬಗ್ಗೆ ತಿಳಿಸ ಲಾಗುತ್ತಿದೆ. ವಿದ್ಯಾರ್ಥಿಗಳೇ ಸಾಂಸ್ಕøತಿಕ ಕಾರ್ಯಕ್ರಮ ನೀಡಿ ಪರಸ್ಪರ ಮನರಂಜನೆ ಪಡೆದುಕೊಳ್ಳುತ್ತಾರೆ.

ಸರ್ಕಾರಿ ಶಿಶು ಕೇಂದ್ರ ಯೋಜನೆಯಲ್ಲಿ ಅನುದಾನ ನೀಡಲಾಗುತ್ತಿದೆ. ಬುದ್ಧಿಮಾಂದ್ಯ, ಅಂಗವೈಖಲ್ಯತೆಯಿಂದ ಹೇಳಿದಂತೆ ನಡೆದುಕೊಳ್ಳದ ಮಕ್ಕಳನ್ನು ಸಾಮಾಜಿಕವಾಗಿ ಬೆಳೆಸುವಲ್ಲಿ ಇಲ್ಲಿನ ಸಿಬ್ಬಂದಿ ವರ್ಗ ತೊಡಗಿಕೊಂಡಿದೆ. ಶಿವ್‍ರಾಜ್ ಮುಖ್ಯಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬಸ್‍ಗಳ ಮೂಲಕ ವೀರಾಜಪೇಟೆ, ಪೊನ್ನಂಪೇಟೆ, ಗೋಣಿಕೊಪ್ಪ, ಸಿದ್ದಾಪುರ, ಹುಂಡಿ, ಒಳಮಾಳ, ತಿತಿಮತಿ, ಹುದಿಕೇರಿ, ಚೆನ್ನಯ್ಯನಕೋಟೆ ಗ್ರಾಮಗಳಿಂದ ಬಸ್‍ನಲ್ಲಿ ಕರೆ ತಂದು ಮನೆಗೆ ಬಿಡಲಾಗುತ್ತಿದೆ. ಬುದ್ಧಿಮಾಂಧ್ಯ ಹಾಗೂ ಅಂಗವೈಖಲ್ಯತೆ ಮಕ್ಕಳನ್ನು ಏನು ಮಾಡುವದು ಎಂದು ಕೊರಗುವ ಪೋಷಕರ ಪಾಲಿಗೆ ಪೋಷಕರ ಪಾತ್ರವನು ಈ ಸಂಸ್ಥೆ ಮಾಡುತ್ತಿದೆ. -ಸುದ್ದಿಪುತ್ರ