ನಾಪೋಕ್ಲು, ಡಿ. 9: ದೇಶ ಹಾಗೂ ಸಮಾಜದ ಒಳಿತಿಗಾಗಿ ಎಲ್ಲ ಧರ್ಮಗಳು ಸಮನ್ವಯತೆ ಮೂಲಕ ಒಂದಾಗಿ ಒಗ್ಗಟ್ಟು ಪ್ರದರ್ಶಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಗಂಭೀರ ಚಿಂತನೆ ನಡೆಸಬೇಕಿದೆ ಎಂದು ಇಲ್ಲಿನ ಮಾರುಕಟ್ಟೆ ಆವರಣದಲ್ಲಿ ನಾಲ್ಕುನಾಡು ಮುಸ್ಲಿಂ ಜಮಾಅತ್ ಒಕ್ಕೂಟದ ಆಶ್ರಯದಲ್ಲಿ ನಡೆದ ಮಾನವ ಕುಲಕ್ಕೆ ವಿಶ್ವ ಪ್ರವಾದಿಯ ಶಾಂತಿಯ ಸಂದೇಶ ರ್ಯಾಲಿ ಹಾಗೂ ಸಾರ್ವಜನಿಕ ಸೌಹಾರ್ದ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಮುಖಂಡರು ಕರೆ ನೀಡಿದರು.
ಹೈಕೋರ್ಟ್ ವಕೀಲ ಅನಂತ್ ನಾಯಕ್ ಮಾತನಾಡಿ, ಎಲ್ಲಾ ಧರ್ಮಗಳು ಪ್ರೀತಿ, ಸಹನೆಯನ್ನು ಸಾರುತ್ತಿವೆ. ಎಲ್ಲಾ ಧರ್ಮಗಳ ವಿಚಾರಧಾರೆಗಳು ಮನುಷ್ಯನ ಘನತೆಯನ್ನು ಎತ್ತಿ ಹಿಡಿಯುತ್ತವೆ. ಅತೀ ವೇಗವಾಗಿ ಪ್ರವಾದಿ ಮಹಮ್ಮದ್, ಗೌತಮ ಬುದ್ಧ, ಏಸು ಕ್ರಿಸ್ತ ಇವರ ವಿಚಾರಗಳು ಜಗತ್ತಿನ ಎಲ್ಲೆಡೆ ಪ್ರಚಾರವಾಗಿದೆ. ಅದಕ್ಕೆ ಧರ್ಮದ ಸಾರ ಹಾಗೂ ಅವರ ವೈಯಕ್ತಿಕ ನಿಲುವೇ ಕಾರಣವಾಗಿದೆ ಎಂದರು.
ಪ್ರವಾದಿ ಮಹಮ್ಮದ್ ಉತ್ತಮ ಆಡಳಿತಗಾರರಾಗಿದ್ದರು. ಬುಡಕಟ್ಟು ಜನರನ್ನು ಒಗ್ಗೂಡಿಸಿ ಸಾಮರಸ್ಯ ಸಾಧಿಸಿದ್ದರು. ಅವರ ಕ್ಷಮಿಸುವ ಗುಣ ವಿಶ್ವÀದಲ್ಲಿಯೇ ಪ್ರಸಿದ್ಧಿಯಾಗಿದೆ. ಇಂದು ಧರ್ಮಾಂದರು ಧರ್ಮ ವಿರೋಧಿ ಚಟುವಟಿಕೆಗಳಲ್ಲಿ ಮೆರೆಯುತ್ತಿದ್ದಾರೆ. ಇದು ಎಲ್ಲಾ ಧರ್ಮಗಳಲ್ಲೂ ಇದೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಸಮಾಜದಿಂದ ಧರ್ಮಾಂದರನ್ನು ಪ್ರತ್ಯೇಕಿಸುವ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ದೇಶ ಉಳಿಯಬೇಕಾದರೆ ಧರ್ಮ ಉಳಿಯಬೇಕು. ಎಲ್ಲರೂ ಪ್ರೀತಿ ವಿಶ್ವಾಸದಿಂದ ಬದುಕಬೇಕು ಎಂದರು.
ಇಸ್ಲಾಂ ಪ್ರೀತಿಯನ್ನು ಬಯಸುತ್ತದೆ. ಪ್ರವಾದಿ ಶಾಂತಿಯನ್ನು ಬಯಸುತ್ತಾರೆ. ಯಾವದೇ ಗಲಭೆ ಸಂದರ್ಭದಲ್ಲಿ ಪ್ರಚೋದನಕಾರಿ ಯಾಗಿ ಮಾತನಾಡುವದು ದ್ವೇಷದ ವಿಷ ಬೀಜ ಬಿತ್ತುವದು ಸರಿಯಲ್ಲ ಎಂದರು. ಈ ನೆಲ, ಜಲ, ದೇಶ ನಮ್ಮದು. ಅದು ಉಳಿಯಬೇಕಾದರೆ ಎಲ್ಲರಿಗೂ ಶಿಕ್ಷಣ ದೊರಕುವಂತೆ ನೋಡಿಕೊಳ್ಳಬೇಕು. ಬಡವರನ್ನು ಮೇಲೆತ್ತುವ ಕೆಲಸವಾಗಬೇಕು ಎಂದ ಅವರು ಧರ್ಮ, ನಮ್ಮಲ್ಲಿರುವ ಪ್ರೀತಿ ದೇಶದ ಉಸಿರಾಗಲಿ ಎಂದು ಸಲಹೆ ನೀಡಿದರು. ಪ್ರವಾದಿಯ ಬಗ್ಗೆ ಅರಿವಿಲ್ಲದವರಿಗೆ ಅವರ ವಿಚಾರಧಾರೆಗಳನ್ನು ತಿಳಿಸುವ ಕೆಲಸವಾಗಬೇಕಾಗಿದೆ ಎಂದರು.
ಕುಶಾಲನಗರದ ಮಂಡೋ ಮೆಮೋರಿಯಲ್ ಚರ್ಚ್ನ ಸಿಎಸ್ಐ ರೆವರೆಂಡ್ ಹೇಮಚಂದ್ರ ಕುಮಾರ್ ಮಾತನಾಡಿ ಭಗವಂತನ (ಮೊದಲ ಪುಟದಿಂದ) ಸಂದೇಶ ಗಳನ್ನು ಎಲ್ಲರೂ ಪಾಲಿಸಬೇಕು. ಅದರ ವಿರುದ್ಧವಾಗಿ ನಡೆಯುವದು ಆಯಾಯ ಧರ್ಮಕ್ಕೆ ವಿರುದ್ಧವಾದ ಚಟುವಟಿಕೆಗಳಾಗಿರುತ್ತದೆ. ಎಲ್ಲಾ ಧರ್ಮದ ಸಾರವು ಒಂದೇ. ಎಲ್ಲಾ ಧರ್ಮಗಳನ್ನು, ಜನರನ್ನು ಪ್ರೀತಿಸಬೇಕು. ನಾವು ಮತ್ತೊಬ್ಬರನ್ನು ಪ್ರೀತಿಸಿದರೆ, ಅವರು ನಮ್ಮನ್ನು ಪ್ರೀತಿಸಲು ಸಾಧ್ಯ. ದ್ವೇಷ ಅಸೂಯೆಯಿಂದ ಯಾವದನ್ನೂ ಸಾಧಿಸಲು ಸಾಧ್ಯವಿಲ್ಲ. ಶಾಂತಿಯಿಂದ ಇಡೀ ಜಗತ್ತನ್ನೇ ಗೆಲ್ಲಬಹುದು ಎಂದರು.
ಬೆಂಗಳೂರಿನ ಇಸ್ಲಾಂ ಧರ್ಮಗುರು ಸಾಫಿ ಸಅದಿ ಮಾತನಾಡಿ ಕರ್ನಾಟಕ ಸರ್ವ ಜನಾಂಗದ ಶಾಂತಿಯ ರಾಜ್ಯವಾಗಿದೆ.
ಶಾಂತಿ ಕದಡಲು ಯತ್ನಿಸುವವರ ವಿರುದ್ಧ ನಾವು ಜಾಗೃತವಾಗಬೇಕು. ಎಲ್ಲ ಧರ್ಮಗಳಲ್ಲಿಯೂ ಒಳ್ಳೆಯವರು, ಕೆಟ್ಟವರು ಇದ್ದಾರೆ. ಒಬ್ಬ ಮಾಡಿದ ತಪ್ಪಿಗೆ ಇಡೀ ಧರ್ಮವನ್ನು, ಸಮೂಹವನ್ನು ದೂಷಿಸುವದು, ದ್ವೇಷಿಸುವದು ಸರಿಯಲ್ಲ. ನಾವು ಇದರ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ ಮುಂದಿನ ಹೆಜ್ಜೆ ಇಡಬೇಕು ಎಂದರು.
ಪ್ರಾಸ್ತಾವಿಕವಾಗಿ ಮಡಿಕೇರಿಯ ವಕೀಲ ಕುಂಞಬ್ದುಲ್ಲಾ ಮಾತನಾಡಿ, ಜಿಲ್ಲೆಯಲ್ಲಿ ಶಾಂತಿಯ ವಾತಾವರಣ ಮೂಡಿಸುವ ನಿಟ್ಟಿನಲ್ಲಿ ನಾಲ್ಕುನಾಡು ಮುಸ್ಲಿಂ ಜಮಾಅತ್ ಒಕ್ಕೂಟ ಕೈಗೊಂಡಿರುವ ಕಾರ್ಯ ಶ್ಲಾಘನೀಯ ಎಂದರು. ಇಸ್ಲಾಂನ ಸಹೋದರತೆ ಮತ್ತು ಐಕ್ಯತೆಯ ಸಹಕಾರವಿಲ್ಲದೆ ದೇಶವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಸ್ವಾಮಿ ವಿವೇಕಾನಂದರ ಮಾತಿನಂತೆ ಪ್ರವಾದಿ ಮಹಮ್ಮದರ ಸಿದ್ಧಾಂತಗಳನ್ನು ತಿಳಿಯಬೇಕಾಗಿರುವದು ಮುಖ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪರಿಷತ್ ಅಧ್ಯಕ್ಷ ಜಮ್ಮಡ ಕರುಂಬಯ್ಯ, ಸಿ.ಎಂ.ಖಾಸಿಂ ಸೇರಿದಂತೆ ಸಾಧಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಅಲ್ಹಾಜ್ ಅಬ್ದುಲ್ಲ ಫೈಜ್ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಲ್ಕುನಾಡು ಮುಸ್ಲಿಂ ಜಮಾಅತ್ ಒಕ್ಕೂಟದ ಅಧ್ಯಕ್ಷ ಪಿ.ಎಂ.ಖಾಸಿಂ ವಹಿಸಿದ್ದರು.
ಈ ಸಂದರ್ಭದಲ್ಲಿ ಪಾರ್ವತೀಶ್ ಬಿಳಿದಾಳೆ, ಎ.ಕೆ. ಹಿಮಕರ, ಶಾಫಿಸಅದಿ, ಅನೀಸ್ ಕೌಸರ್, ಕೆ.ಎಂ.ಇಬ್ರಾಹಿಂ ಮಾಸ್ಟರ್ ಮಾತನಾಡಿದರು. ವೇದಿಕೆಯಲ್ಲಿ ಇಸ್ಮಾಯಿಲ್ ಸಖಾಫಿ, ಕೆ.ಎ.ಇಸ್ಮಾಯಿಲ್, ವಿ.ಪಿ. ಶಶಿಧರ್, ಗೌಡ ಸಮಾಜದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಸೂಫಿಯಾಜಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಅಲ್ಹಾಜ್ ಮಹಮೂದ್ ಮುಸ್ಲಿಯಾರ್ ಪ್ರಾರ್ಥನೆ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಮಾಜಿ ಅಧ್ಯಕ್ಷ ಅಬ್ದುಲ್ ರೆಹಮಾನ್ ಸ್ವಾಗತಿಸಿದರೆ, ಅಜೀಜ್ ಮಾಸ್ಟರ್ ವಂದಿಸಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಹಳೇ ತಾಲೂಕುವಿನಿಂದ ನಾಪೋಕ್ಲು ಮಾರುಕಟ್ಟೆಯವರೆಗೆ ಮೆರವಣಿಗೆ ನಡೆಸಲಾಯಿತು. ಮಧ್ಯಾಹ್ನ 1 ಗಂಟೆಗೆ ಆರಂಭಗೊಂಡ ಮೆರವಣಿಗೆ 3 ಗಂಟೆಗೆ ಮುಕ್ತಾಯಗೊಂಡಿತು. ಮೆರವಣಿಗೆಗೆ ಪಿ.ಎಂ. ಖಾಸಿಂ ಚಾಲನೆ ನೀಡಿದರು. ಎಂ.ಹೆಚ್. ಅಬ್ದುಲ್ರಹಮಾನ್, ಮನ್ಸೂರ್ ಆಲಿ, ಕೊಟ್ಟಮುಡಿ ಹಂಸ ಮತ್ತಿತರರು ಇದ್ದರು. ಜಮಾಅತ್ ವಿದ್ಯಾರ್ಥಿಗಳಿಂದ ದಫ್ ಕುಣಿತ ನಡೆಯಿತು. ಎಲ್ಲರೂ ಶ್ವೇತ ವಸ್ತ್ರ ಧರಿಸಿ ಪಾಲ್ಗೊಂಡಿದ್ದರು.
-ಪಿ.ವಿ. ಪ್ರಭಾಕರ್