ಮಡಿಕೇರಿ, ಡಿ. 9: ದಕ್ಷಿಣ ಕಾಶಿ ಎಂಬ ಹೆಗ್ಗಳಿಕೆಯ ಭಾಗಮಂಡಲ ಸಂಗಮ ಕ್ಷೇತ್ರದಲ್ಲಿ, ವರ್ಷಂಪ್ರತಿ ಮಳೆಗಾಲದಲ್ಲಿ ಜಲಾವೃತಗೊಂಡು ಪ್ರವಾಹದಿಂದ ರಸ್ತೆಗಳು ಮುಳುಗಡೆ ಯೊಂದಿಗೆ, ಸಂಪರ್ಕ ವ್ಯವಸ್ಥೆ ಕಡಿತಗೊಳ್ಳುವದ್ದನ್ನು ತಪ್ಪಿಸುವ ದಿಸೆಯಲ್ಲಿ, ಕಾವೇರಿ ನೀರಾವರಿ ನಿಗಮದಿಂದ ಮೇಲ್ಸೇತುವೆ ಕಾಮಗಾರಿಗೆ ಚಾಲನೆ ಲಭಿಸಿದೆ. ಭಾಗಮಂಡಲ ಸುತ್ತಮುತ್ತಲಿನ ಗ್ರಾಮಸ್ಥರ ಸಹಿತ ಯಾತ್ರಾರ್ಥಿಗಳು ಸಲ್ಲಿಸಿದ್ದ ಮನವಿಯಂತೆ ಸೇತುವೆ ನಿರ್ಮಾಣಕ್ಕೆ ಕ್ರಮಕೈಗೊಂಡಿರು ವದಾಗಿ ನಿಗಮದ ಕಾರ್ಯಪಾಲಕ ಅಭಿಯಂತರ ರಾಜೇಗೌಡ ಸುಳಿವು ನೀಡಿದ್ದಾರೆ.ಅಲ್ಲದೆ ಈಗಾಗಲೇ ರೂ. 29.60 ಕೋಟಿ ಮೊತ್ತದ ಮೇಲ್ಸೇತುವೆ ಕಾಮಗಾರಿಗೆ ಸಂಬಂಧಿಸಿದ ಇಲಾಖೆ ಯಿಂದ ಅನುಮೋದನೆ ಯೊಂದಿಗೆ, ಗುತ್ತಿಗೆದಾರರಿಗೆ ಭೂಮಿಯನ್ನು ಕೂಡ ಕಾಮಗಾರಿಗಾಗಿ ಹಸ್ತಾಂತರಿಸ ಲಾಗಿದ್ದು, ನಿಯಮಾನು ಸಾರ ಕೆಲಸ ಆರಂಭಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಎ.ವಿ.ಆರ್. ತೇಜಸ್ ಇನ್ಫ್ರಾಸ್ಟ್ರೆಕ್ಚರ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಗೆ ಕಾಮಗಾರಿಯ ಗುತ್ತಿಗೆ ನೀಡಲಾಗಿದೆ. ಪ್ರಸಕ್ತ ವರ್ಷದ ಮಳೆಯ ತೀವ್ರತೆಯಿಂದಾಗಿ ಈಗ ಕಾಮಗಾರಿಯನ್ನು ಆರಂಭಿಸಲಾಗಿದೆ ಎಂದು ವಿವರಿಸಿದ್ದಾರೆ. ಗುತ್ತಿಗೆ ಸಂಸ್ಥೆಯ ತಾಂತ್ರಿಕ ವಿಭಾಗದ ಮಹೇಂದ್ರಬಾಬು ಅವರು ಭಾಗಮಂಡಲ -
(ಮೊದಲ ಪುಟದಿಂದ) ಮಡಿಕೇರಿ ರಸ್ತೆಯ ಬಳಿಯಿಂದ ಸಂಗಮ ಕ್ಷೇತ್ರ ಬಳಿಯ ಮುಳುಗಡೆ ರಸ್ತೆ ಮೇಲ್ಭಾಗದಿಂದ ಮೇಲ್ಸೇತುವೆ ಹಾದು ಹೋಗಲಿದೆ ಎಂದು ಮಾಹಿತಿಯಿತ್ತರು.
ಅಲ್ಲದೆ ಭಾಗಮಂಡಲ - ಅಯ್ಯಂಗೇರಿ ಮಾರ್ಗದ ಮುಳುಗಡೆ ಪ್ರದೇಶಕ್ಕೆ ಮೇಲ್ಸೇತುವೆ ಸಂಪರ್ಕದೊಂದಿಗೆ ಜನತೆಗೆ ಎಲ್ಲ ಕಾಲದಲ್ಲಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುವದು ಎಂದರಲ್ಲದೆ, ಮುಂದೆ ಭಾಗಮಂಡಲ - ತಲಕಾವೇರಿ ಮಾರ್ಗದವರೆಗೆ ಸಂಪರ್ಕ ಸೇತುವೆ ನಿರ್ಮಾಣಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.
ಭಾಗಮಂಡಲ ಸಂಗಮ ಕ್ಷೇತ್ರ ಬಳಿ ಸುಮಾರು 6 ಮೀಟರ್ ಎತ್ತರಕ್ಕೆ ರಚನೆಗೊಳ್ಳಲಿರುವ ಮೇಲ್ಸೇತುವೆ, ಕೆಲವೆಡೆಗಳಲ್ಲಿ 3 ಮೀಟರ್ ಎತ್ತರದೊಂದಿಗೆ ಸಾಗಲಿದೆ ಎಂದು ವಿವರಿಸಿದರು. ಒಟ್ಟಾರೆ ಸೇತುವೆಯು 670 ಮೀಟರ್ ಉದ್ದದೊಂದಿಗೆ ಉತ್ತಮ ವಿನ್ಯಾಸದಿಂದ ರಚನೆಗೊಳ್ಳಲಿದೆ ಎಂದು ತಿಳಿಸಿದರಲ್ಲದೆ, ಸಂಗಮ ಕ್ಷೇತ್ರ ಸಹಿತ ಭಾಗಮಂಡಲದ ಸೊಬಗನ್ನು ಹೆಚ್ಚುವ ರೀತಿ ಯೋಜನೆ ಅನುಷ್ಠಾನಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.
ಇನ್ನೊಂದೆಡೆ ಶ್ರೀ ಭಗಂಡೇಶ್ವರ ದೇವಾಲಯದ ಆವರಣಕ್ಕೆ ಹೊಂದಿಕೊಂಡಿರುವ ಹೊಟೇಲ್, ಮನೆಗಳು ಇತ್ಯಾದಿ ತೆರವುಗೊಳಿಸಿ, ದೇವಾಲಯದ ಪಾವಿತ್ರ್ಯದೊಂದಿಗೆ ಸಂಗಮ ಕ್ಷೇತದ ಪರಿಸರ ಮಲೀನಗೊಳ್ಳದಂತೆ ಕಾಮಗಾರಿ ಸಂದರ್ಭ ನಿಗಾವಹಿಸಲಾಗುವದು ಎಂದು ವ್ಯವಸ್ಥಾಪನಾ ಸಮಿತಿ ಪ್ರಮುಖರು ಅಭಿಪ್ರಾಯ ನೀಡಿದ್ದಾರೆ.