ಚೆಟ್ಟಳ್ಳಿ, ಡಿ. 9: ಜಿಲ್ಲೆಯ ಮಾದಾಪುರ, ಚೆಟ್ಟಳ್ಳಿ, ಸಂಪಾಜೆ, ಶ್ರೀಮಂಗಲ ಸೇರಿ 4 ಆರೋಗ್ಯ ಕೇಂದ್ರಗಳು 2017-18ನೇ ಸಾಲಿನ ಕಾಯಕಲ್ಪ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಸ್ವಚ್ಛ ಭಾರತ ಅಭಿಯಾನದಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ನೀಡಲಾಗುತ್ತಿರುವ ಕಾಯಕಲ್ಪ ಪ್ರಶಸ್ತಿಗಾಗಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ನೈರ್ಮಲ್ಯ, ಶುಚಿತ್ವ ಕಾಪಾಡುವಿಕೆ, ತ್ಯಾಜ್ಯ ನಿರ್ವಹಣೆ ಇನ್ನಿತರ 6 ವಿಷಯಗಳಡಿ ಮೌಲ್ಯ ಮಾಪನ ನಡೆಸಿ ಆಸ್ಪತ್ರೆಯ ಕಾರ್ಯನಿರ್ವಹಣೆಯ ಶ್ರೇಣಿಯ ಆಧಾರದ ಮೇಲೆ 2017-18ನೇ ಸಾಲಿನ ರಾಷ್ಟ್ರೀಯ ಕಾರ್ಯಕ್ರಮವಾದ ಕಾಯಕಲ್ಪ ಪ್ರಶಸ್ತಿ ನೀಡಲಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದಲ್ಲಿ ಜರುಗಿದ್ದು, ಈ ಕಾರ್ಯಕ್ರಮದಲ್ಲಿ ಪ್ರಶಸ್ತಿಗೆ ಆಯ್ಕೆಗೊಂಡ ರಾಜ್ಯದ ಹಲವು ಆರೋಗ್ಯ ಕೇಂದ್ರಗಳ ಜೊತೆ ಕೊಡಗು ಜಿಲ್ಲೆಯ ಮಾದಾಪುರ ಆರೋಗ್ಯ ಕೇಂದ್ರಕ್ಕೆ ಪ್ರಥಮ ಹಾಗೂ ಚೆಟ್ಟಳ್ಳಿ, ಸಂಪಾಜೆ ಹಾಗೂ ಶ್ರೀಮಂಗಲ ಆರೋಗ್ಯ ಕೇಂದ್ರಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಎಸ್. ಪಾಟೀಲ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ. ಜಾವೇದ್ ಅಕ್ತರ್, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ಡಾ. ರತನ್ ಕೇಲ್ಕರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಡಾ. ಪಂಕಜ್ ಕುಮಾರ್ ಪಾಂಡೆ, ನಿರ್ದೇಶಕರಾದ ಡಾ. ಪುಪ್ಪರಾಜ್ ಎಸ್. ಅವರು ಪ್ರಶಸ್ತಿ ನೀಡಿ ಗೌರವಿಸಿದರು.
ಕಳೆದ ವರ್ಷ ಚೆಟ್ಟಳ್ಳಿ ಆರೋಗ್ಯ ಕೇಂದ್ರ ಪ್ರಥಮ ಹಾಗೂ ಶ್ರೀಮಂಗಲ ಆರೋಗ್ಯ ಕೇಂದ್ರ ಸತತ 2ನೇ ಬಾರಿಯೂ ಕಾಯಕಲ್ಪ ಪ್ರಶಸ್ತಿಯನ್ನು ಪಡೆದಿವೆ.
- ಕರುಣ್ ಕಾಳಯ್ಯ