ಮಡಿಕೇರಿ, ಡಿ. 9: ಸುಮಾರು ಮೂರು ದಶಕಗಳಿಂದ ಕುಶಾಲನಗರ ಹಾಗೂ ಕೊಪ್ಪ ವ್ಯಾಪ್ತಿಯಲ್ಲಿ ಖಾಸಗಿ ಚಿಕಿತ್ಸಾ ಕೇಂದ್ರ ನಡೆಸುವದರೊಂದಿಗೆ ಜನಾನುರಾಗಿಯಾಗಿದ್ದ ವೈದ್ಯ ಡಾ. ದಿಲೀಪ್ ಕುಮಾರ್ (60) ಎಂಬವರು ನಿಗೂಢ ರೀತಿಯಲ್ಲಿ ಕೊಲೆಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಹಾಗೂ ಅದೇ ತಾಲೂಕಿನ ಸತ್ತೀಹಳ್ಳಿ ಗ್ರಾಮದವರಾಗಿದ್ದ ಇವರು ಅನೇಕ ವರ್ಷಗಳಿಂದ ಏಕಾಂಗಿ ಜೀವನದೊಂದಿಗೆ ವೈದ್ಯ ವೃತ್ತಿ ನಿರ್ವಹಿಸುತ್ತಿದ್ದರು.
ಕುಶಾಲನಗರ ಫಾತಿಮಾ ಶಾಲೆಯ ಬಳಿ ಸದ್ಗುಣಿ ಕಾಂಪ್ಲೆಕ್ಸ್ನಲ್ಲಿ ಹರ್ಷ ಕ್ಲಿನಿಕ್ ಹೆಸರಿನೊಂದಿಗೆ ಪರಿಚಿತರಾಗಿದ್ದ ಡಾ. ದಿಲೀಪ್ ಚಿಕಿತ್ಸಾಲಯದ ಸಮಯ ಹೊರತುಪಡಿಸಿ, ಕೊಪ್ಪದಲ್ಲಿರುವ ಭಾರತ ಮಾತಾ ಶಾಲಾ ಬಳಿಯ ತಮ್ಮ ಮನೆಯಲ್ಲಿಯೂ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು.
ನಿನ್ನೆ ರಾತ್ರಿ ಕೂಡ ಮನೆಯಲ್ಲಿ ವೈದ್ಯರು ಇರುವ ಸಮಯದಲ್ಲಿ ದುಷ್ಕರ್ಮಿಗಳು ರೋಗಿಗಳ ಸೋಗಿನಲ್ಲಿ ಅವರ ಮನೆಗೆ ಬಂದಿರುವ ಶಂಕೆಯಿದೆ. ಅಲ್ಲದೆ ಮನೆಯೊಳಗೆ ನುಸುಳಿರುವ ದುಷ್ಕರ್ಮಿಗಳು ವೈದ್ಯರು ಬೊಬ್ಬೆ ಹಾಕದಂತೆ ಬಾಯಿಗೆ ಪ್ಲಾಸ್ಟರ್ ಅಂಟಿಸಿ ಕೈಕಾಲು ಕಟ್ಟಿ ಹಾಕಿ ಉಸಿರುಗಟ್ಟಿಸುವ ಮೂಲಕ ಕೊಲೆ ಮಾಡಿರುವ ಸುಳಿವು ಲಭಿಸಿದೆ.
ವೈದ್ಯರ ಮನೆಕೆಲಸದಾಕೆ ಎಂದಿನಂತೆ ಇಂದು ಬೆಳಿಗ್ಗೆ ಬಂದು ನೋಡಲಾಗಿ ದುಷ್ಕøತ್ಯ ಬೆಳಕಿಗೆ ಬಂದಿದೆ. ಆ ಮೇರೆಗೆ ಬೈಲುಕುಪ್ಪೆ ಠಾಣೆಗೆ ವಿಷಯ ಮುಟ್ಟಿಸಲಾಗಿದೆ. ಪೊಲೀಸ್ ಠಾಣಾಧಿಕಾರಿ ಸವಿ ಹಾಗೂ ಸಿಬ್ಬಂದಿ ಘಟನೆ ಸ್ಥಳಕ್ಕೆ ದೌಡಾಯಿಸುವದರೊಂದಿಗೆ ಮೇಲಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಆ ಮೇರೆಗೆ ಮೈಸೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್, ಎಎಸ್ಪಿ ಸ್ನೇಹಾ, ವೃತ್ತ ನಿರೀಕ್ಷಕ ಪ್ರದೀಪ್ಕುಮಾರ್ ಮೊದಲಾದವರು ಸ್ಥಳಕ್ಕೆ ಭೇಟಿ ನೀಡುವದರೊಂದಿಗೆ, ವೈದ್ಯ ದಿಲೀಪ್ ಕೊಲೆ ಸಂಬಂಧ ಬಿರುಸಿನ ತನಿಖೆ ಕೈಗೊಂಡಿದ್ದಾರೆ. ಮೃತರ ಸಂಬಂಧಿಕರಿಗೂ ವಿಷಯ ತಿಳಿಸುವದರೊಂದಿಗೆ, ಡಾ. ದಿಲೀಪ್ ಅವರ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಕೃತ್ಯ ನಡೆದ ಸ್ಥಳದಲ್ಲಿ ದುಷ್ಕರ್ಮಿಗಳ ಜಾಡಿನ ಸುಳಿವಿನೊಂದಿಗೆ ಬಂಧನಕ್ಕೆ ಬಲೆ ಬೀಸಲಾಗಿದೆ. ದುಷ್ಕರ್ಮಿಗಳು ಮನೆಯಲ್ಲೆಲ್ಲ ಖಾರದಪುಡಿ ಚೆಲ್ಲಿದ್ದು, ಶ್ವಾನದಳಕ್ಕೆ ಹಂತಕರ ಸುಳಿವು ಲಭಿಸದಂತೆ ಈ ಕೃತ್ಯ ಎಸಗಿರುವ ಶಂಕೆ ಇದೆ.
ಸೋದರನಿಂದ ದೂರು : ಮೃತ ಡಾ. ದಿಲೀಪ್ಕುಮಾರ್ ಸೋದರ ಪರಮೇಶ್ವರ ಎಂಬವರು ದೂರು ನೀಡಿ, ತನ್ನ ಸಹೋದರ ಡಾ. ದಿಲೀಪ್ಕುಮಾರ್ 26 ವರ್ಷಗಳ ಹಿಂದೆ ಮೂಡಿಗೆರೆ ಸರಕಾರಿ ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ರಾಜೀನಾಮೆ ಸಲ್ಲಿಸಿದ್ದು, ಬಳಿಕ ಕುಶಾಲನಗರದಲ್ಲಿ ಖಾಸಗಿ ಚಿಕಿತ್ಸಾಲಯದೊಂದಿಗೆ, ಕೊಪ್ಪದ ಮನೆಯಲ್ಲೂ ವೃತ್ತಿ ನಿರ್ವಹಿಸುತ್ತಿದ್ದುದಾಗಿ ತಿಳಿಸಿದ್ದಾರೆ. ಇಂದು ಬೆಳಿಗ್ಗೆ ದೂರವಾಣಿ ಮೂಲಕ ವಿಷಯ ತಿಳಿದು ತಾನು ಆಗಮಿಸಿ ಪುಕಾರು ಸಲ್ಲಿಸುತ್ತಿರುವದಾಗಿ ಪೊಲೀಸರಿಗೆ ಲಿಖಿತ ಹೇಳಿಕೆ ನೀಡಿದ್ದಾರೆ.