ವೀರಾಜಪೇಟೆ, ಡಿ. 6: ಹನ್ನೆರಡು ವರ್ಷದ ಬಾಲಕಿಯೊಂದಿಗೆ ಅಕ್ರಮ ಸಂಬಂಧ ಹೊಂದಿ ಆಕೆಯನ್ನು ಗರ್ಭವತಿ ಮಾಡಿದ ಆರೋಪದಡಿ ಇಲ್ಲಿನ ಗ್ರಾಮಾಂತರ ಪೊಲೀಸರು ಕೊಳತೋಡು ಬೈಗೋಡು ಗ್ರಾಮದ ಎರವರ ಬೊಳಕ ಅಲಿಯಾಸ್ ಚೋಮ (37) ಎಂಬಾತನ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲು ಮಾಡಿದ್ದಾರೆ.
ಕೊಳತೋಡು ಬೈಗೋಡು ಗ್ರಾಮದ ವಿಶ್ವನಾಥ್ ಎಂಬವರ ಕಾಫಿ ತೋಟದ ಲೈನು ಮನೆಯಲ್ಲಿರುವ ಎರಡು ಗಂಡು ಮಕ್ಕಳ ತಂದೆ ಬೊಳಕ ಕಳೆದ ಒಂದು ವರ್ಷದಿಂದ ಅಕ್ರಮ ಸಂಬಂಧ ಹೊಂದಿದ್ದು, ಈಗ ಆಕೆ ಎಂಟೂವರೆ ತಿಂಗಳ ಗರ್ಭಿಣಿಯಾಗಿದ್ದಾಳೆ. ಗ್ರಾಮಸ್ಥರೊಬ್ಬರು ಮಡಿಕೇರಿಯ ಚೈಲ್ಡ್ ಲೈನ್ ಸಂಸ್ಥೆಗೆ ದೂರು ನೀಡಿದ ಮೇರೆ ತನಿಖೆ ನಡೆಸಿದ ಗ್ರಾಮಾಂತರ ಪೊಲೀಸರು ಇಂದು ಅಪ್ರಾಪ್ತ ವಯಸ್ಸಿನ ಗರ್ಭಿಣಿಯನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಗುರಿಪಡಿಸಿ ಆಕೆಯ ಹೇಳಿಕೆಯನ್ನು ಪಡೆದು ಪ್ರಕರಣ ದಾಖಲಿಸಿದರೊಂದಿಗೆ ಪೊಲೀಸರು ಆರೋಪಿಯ ಶೋಧನೆಯಲ್ಲಿ ತೊಡಗಿದ್ದಾರೆ. ಆರೋಪಿ ಬೊಳಕನ ಪತ್ನಿ ಎರಡು ವರ್ಷಗಳ ಹಿಂದೆ ಸಾವನ್ನಪ್ಪಿದ್ದಳು.