ಮಡಿಕೇರಿ, ಡಿ. 2: ಸಹಕಾರ ಬ್ಯಾಂಕ್ ನೌಕರರ ನಿಸ್ವಾರ್ಥ ಸೇವೆ ಹಾಗೂ ಪರಿಶ್ರಮದಿಂದ ಜಿಲ್ಲಾ ಸಹಕಾರ ಬ್ಯಾಂಕ್ ಕೇಂದ್ರ ಈ ಮಟ್ಟಕ್ಕೆ ಬೆಳೆದಿದ್ದು, ಸೇವೆಯ ಅವಧಿಯಲ್ಲಿನ ನೌಕರರ ಅನುಭವವು ಬ್ಯಾಂಕಿಗೆ ನಿವೃತ್ತಿ ನಂತರವು ಅವಶ್ಯಕವಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಬಿ.ಡಿ. ಮಂಜುನಾಥ್ ಹೇಳಿದರು.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಕೇಂದ್ರ ಕಚೇರಿ ಆವರಣದಲ್ಲಿ ಇತ್ತೀಚೆಗೆ ನಡೆದ ಬ್ಯಾಂಕಿನ ನಿವೃತ್ತ ನೌಕರರ ನಿವೃತ್ತಿ ಪರಿಹಾರ ಯೋಜನೆಯ ಅನುಷ್ಠಾನ ಕಾರ್ಯಕ್ರಮಕ್ಕೆ ಬ್ಯಾಂಕಿನ ಅಧ್ಯಕ್ಷ ಬಿ.ಡಿ. ಮಂಜುನಾಥ ದೀಪ ಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಕಳೆದ 90 ವರ್ಷಗಳಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಪ್ರಸ್ತುತ ಬ್ಯಾಂಕಿನ ನಿವೃತ್ತ ನೌಕರರ ನಿವೃತ್ತಿ ಪರಿಹಾರ ಯೋಜನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈಗಿನ ಜೀವನದಲ್ಲಿ ನಿವೃತ್ತಿ ನಂತರದ ಜೀವನ ಕಷ್ಟಕರವಾಗಿದ್ದು, ಪಿಂಚಣಿ ಯೋಜನೆಯ ಪ್ರಯೋಜನೆಯನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳ ಬೇಕು ಎಂದು ಮನವಿ ಮಾಡಿದರು.
ಆಡಳಿತ ಮಂಡಳಿಯವರ ಸಮಯೋಜಿತ ಯೋಜನೆಗಳನ್ನು ಅನುಷ್ಠನಾಗೊಳಿಸುವಲ್ಲಿ ನಮ್ಮ ಹಿರಿಯ ನೌಕರರು ನಿಸ್ವಾರ್ಥ ಸೇವೆ ಸಲ್ಲಿಸಿರುತ್ತಾರೆ. ನೌಕರರು ಹಗಲಿರುಳೆನ್ನದೆ ದುಡಿದ ಫಲ ಇಂದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ರಾಷ್ಟ್ರದಲ್ಲೇ ಉತ್ತುಂಗಕ್ಕೇರಲು ಸಾಧ್ಯವಾಯಿತು ಎಂದು ಅವರು ಸ್ಮರಿಸಿದರು.
ಬ್ಯಾಂಕಿನ ನಿವೃತ್ತ ನೌಕರರಾದ ವಿ.ಕೆ. ಪ್ರೇಮಕುಮಾರಿ ಅವರು ಮಾತನಾಡಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಇದೀಗ 97 ವರ್ಷ ಪೂರೈಸಿ ಮುಂದಿನ ಮೂರು ವರ್ಷಗಳಲ್ಲಿ ಶತಮಾನೋತ್ಸವ ಆಚರಿಸುವ ಸಿದ್ಧತೆಯಲ್ಲಿದೆ. ಈ ಸುಸಂದರ್ಭದಲ್ಲಿ ಬ್ಯಾಂಕಿನ ಗೌರವಾನ್ವಿತ ಆಡಳಿತ ಮಂಡಳಿಯು ಈಗಾಗಲೇ ನಿವೃತ್ತಿ ಹೊಂದಿರುವ ನೌಕರರಿಗೆ ಪಿಂಚಣಿ ಪರಿಹಾರ ಸೌಲಭ್ಯ ಒದಗಿಸಿರುವದನ್ನು ಹೃದಯ ಪೂರ್ವಕವಾಗಿ ಸ್ವೀಕರಿಸುತ್ತೇವೆ ಎಂದು ಹೇಳಿದರು.
ಬ್ಯಾಂಕ್ ರೈತರ ಬೆಳೆ ನಷ್ಟ, ಫಸಲು ನಾಶ, ಅತಿವೃಷ್ಠಿ, ಅನಾವೃಷ್ಠಿ ಹಾಗೂ ಪ್ರಕೃತಿ ವಿಕೋಪದಂತ ಸಂದರ್ಭದಲ್ಲಿ ಬೆನ್ನೆಲುಬಾಗಿ ನಿಂತು ಸಹಕಾರ ನೀಡಿ ಜನಸ್ನೇಹಿಯಾಗಿದೆ. ಪಿಂಚಣಿ ಪರಿಹಾರ ಯೋಜನೆಯು ಹಾಲಿ ಮತ್ತು ನಿವೃತ್ತ ನೌಕರರಿಗೆ ನೀಡಿರುವದು ಅತ್ಯಂತ ಮಾನವೀಯತೆಯ ಕೊಡುಗೆ ಆಗಿದೆ. ಈ ಯೋಜನೆ ಜಾರಿಗೆ ತಂದಿರುವದಕ್ಕೆ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹೃದಯ ಪೂರ್ವಕ ಕೃತಜ್ಞತೆಯನ್ನು ಅರ್ಪಿಸುತ್ತೇವೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಬ್ಯಾಂಕ್‍ನ ನಿವೃತ್ತ ನೌಕರರಿಗೆ ಪಿಂಚಣಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಬ್ಯಾಂಕ್‍ನ ಆಡಳಿತ ಮಂಡಳಿ ನಿರ್ದೇಶಕರು, ಸದಸ್ಯರು, ಸಿಬ್ಬಂದಿಗಳು, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು, ಇತರರು ಇದ್ದರು. ಬ್ಯಾಂಕ್‍ನ ಸಿಬ್ಬಂದಿ ಜಿ.ಎಂ. ಬೋಜಮ್ಮ ಪ್ರಾರ್ಥಿಸಿ, ನಿರೂಪಿಸಿದರು. ಬ್ಯಾಂಕ್‍ನ ಪ್ರಧಾನ ವ್ಯವಸ್ಥಾಪಕ ಎಸ್.ಎನ್. ನಟರಾಜ್ ಅವರು ಸ್ವಾಗತಿಸಿದರು, ಬ್ಯಾಂಕ್‍ನ ಉಪ ಪ್ರಧಾನ ವ್ಯವಸ್ಥಾಪಕ ಎನ್.ಕೆ. ಮೋಹನ್ ವಂದಿಸಿದರು.