ಮಡಿಕೇರಿ, ನ. 25: ರಾಜ್ಯದ ಜೀವನದಿ, ಕೊಡಗಿನ ಕುಲಮಾತೆ, ಲೋಕಪಾವನೆ ಶ್ರೀ ಕಾವೇರಿಯ ಉಗಮಸ್ಥಾನ ಕೊಡಗು ಜಿಲ್ಲೆ. ತಲಕಾವೇರಿಯಿಂದ ಜಲಸ್ವರೂಪಿಣಿಯಾಗಿ ಹರಿದು ದಕ್ಷಿಣ ಭಾರತದ ಹಲವು ರಾಜ್ಯಗಳಿಗೆ ನೀರುಣಿಸುವ ಕಾವೇರಿ ಅಂತಿಮವಾಗಿ ಬಂಗಾಳಕೊಲ್ಲಿಯನ್ನು ಸೇರುತ್ತಾಳೆ. ಉಗಮ ಸ್ಥಾನವಾದ ತಲಕಾವೇರಿಯಿಂದ ಹಿಡಿದು ಈ ನದಿ ಹರಿದು ಹೋಗುವ ಮಾರ್ಗದಲ್ಲಿ ಹಲವಾರು ಪುಣ್ಯ ಸ್ಥಳಗಳು ಬರುತ್ತವೆ. ಕೆಲವು ಜಾಗಗಳು ಪ್ರವಾಸಿ ತಾಣಗಳಾಗಿಯೂ ರೂಪುಗೊಂಡಿವೆ. ಕೊಡಗಿನಲ್ಲಿ ಕುಲ ದೇವಿಯಾಗಿ ಕಾವೇರಿ ಪೂಜಿಸಲ್ಪಡುತ್ತಿದ್ದರೂ ಕಾವೇರಿ ಮಾತೆಗೆ ದೈವೀ ಸಂಕಲ್ಪದ ಪ್ರತಿಮೆಯಾಗಲಿ, ದೇವಸ್ಥಾನವಾಗಲಿ ಇಲ್ಲ. ಇಲ್ಲಿನವರು ಪ್ರಕೃತಿಯ ಆರಾಧಕರಾಗಿದ್ದು, ಕಾವೇರಿಯನ್ನು ಜಲದೇವಿಯ ರೂಪದಲ್ಲೇ ಪೂಜಿಸಿಕೊಂಡು ಬರುತ್ತಿರುವದು ಎಲ್ಲರ ಅರಿವಿಗೂ ಇರುವ ವಿಚಾರವಾಗಿದೆ. ಒಂದೆರಡು ಕಡೆಗಳಲ್ಲಿ ಕಾವೇರಿ ಪ್ರತಿಮೆ ಎಂದು ನಿರ್ಮಿತವಾಗಿದ್ದರೂ ಪ್ರಕೃತಿಯ ಆರಾಧಕರು ಪೂಜಿಸುವದು ಪ್ರತಿಮೆಯನ್ನಲ್ಲ ಜಲದೇವತೆಯನ್ನೇ ಎಂಬದು ವಾಸ್ತವ.
ಇದೀಗ ವಿಶ್ವವಿಖ್ಯಾತ ಪ್ರವಾಸಿ ತಾಣವಾದ ಕಾವೇರಿಯ ಹರಿವಿನ ಮೂಲಕ ರೂಪಿತಗೊಂಡಿರುವ ಕೆಆರ್ಎಸ್ ಉದ್ಯಾನವನ ಸುದ್ದಿಗೆ ಗ್ರಾಸವಾಗಿದೆ. ಈ ಉದ್ಯಾನವನವನ್ನು ಅಮೇರಿಕಾದ ಡಿಸ್ನಿಲ್ಯಾಂಡ್ನ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ರಾಜ್ಯ ಸರಕಾರ ಕೈಗೊಂಡಿರುವ ತೀರ್ಮಾನ ಹೊಸ ಬೆಳವಣಿಗೆಗೆ ಕಾರಣವಾಗಿದೆ. ಈ ಉದ್ಯಾನವನದಲ್ಲಿ 125 ಅಡಿ ಎತ್ತರದ ಕಾವೇರಿ ಪ್ರತಿಮೆ ಒಳಗೊಂಡಂತೆ 360 ಅಡಿ ಎತ್ತರದ ಮ್ಯೂಸಿಯಂ ಸಮುಚ್ಚಯ, ಗೋಪುರಯುಕ್ತ ಗಾಜಿನ ಮನೆ, ವೀಕ್ಷಣೆ ಗೋಪುರ, ಬ್ಯಾಂಡ್ಸ್ಟ್ಯಾಂಡ್, ಒಳಾಂಗಣ ಕ್ರೀಡಾಂಗಣ ಮತ್ತಿತರ ಅಂಶಗಳನ್ನು ಒಳಗೊಂಡಂತೆ ಪರಿವರ್ತಿಸಲು ರಾಜ್ಯಸರಕಾರ ಯೋಜನೆ ಸಿದ್ಧ ಪಡಿಸಿದೆ. 1200 ಕೋಟಿ ರೂ. ಯೋಜನಾ ವೆಚ್ಚದ ಪ್ರಸ್ತಾಪ ಇದಾಗಿದೆ.
ಈಗಿರುವ ದೋಣಿ ವಿಹಾರ ಸರೋವರದ ಪಕ್ಕದಲ್ಲಿ ಮತ್ತೊಂದು ಸರೋವರ ನಿರ್ಮಿಸಿ ಅದರ ಮಧ್ಯದಲ್ಲಿ 360 ಅಡಿ ಎತ್ತರದ ಮ್ಯೂಸಿಯಂ ಸಮುಚ್ಚಯ ಅಸ್ತಿತ್ವಕ್ಕೆ ಬರಲಿದೆ. ಈ ಸಮುಚ್ಚಯದ ಮೇಲ್ಭಾಗದಲ್ಲಿ ಕಾವೇರಿ ಮಾತೆಯ 125 ಅಡಿ ಎತ್ತರದ ಪ್ರತಿಮೆ ಬರಲಿದೆ ಎಂಬ ಯೋಜನೆಯ ಚಿಂತನೆ ನಡೆದಿದೆ.
ಕೇಳಿ ಬರುತ್ತಿರುವ ವಿರೋಧ
ಕಾವೇರಿಯ ಬೃಹತ್ ಪ್ರತಿಮೆ ಸ್ಥಾಪನೆಯೊಂದಿಗೆ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಉದ್ಯಾನವನ ಅಭಿವೃದ್ಧಿ ಕಾರ್ಯದ ಸರಕಾರದ ನಡೆ ಅವೈಜ್ಞಾನಿಕ ಹಾಗೂ ರೈತ ವಿರೋಧಿಯಾಗಿದೆ ಎಂದು ಇಂಜಿನಿಯರ್ಗಳ ಸಂಸ್ಥೆಯಾದ ಕಾವೇರಿ ತಾಂತ್ರಿಕ ಸಲಹಾ ಸಮಿತಿ ವಿರೋಧ ವ್ಯಕ್ತಪಡಿಸಿದೆ. ಇದರೊಂದಿಗೆ ಇನ್ನೂ ಹಲವರಿಂದ ಇದಕ್ಕೆ ವಿರೋಧ ಕೇಳಿ ಬರುತ್ತಿದೆ. ಈ ಯೋಜನೆಗಾಗಿ ಆಸುಪಾಸಿನ ರೈತರ 350 ಎಕರೆ ಜಮೀನು ವಶಪಡಿಸಿಕೊಳ್ಳಲು ಸರಕಾರ ಉದ್ದೇಶಿಸಿದ್ದು, ರೈತರಿಗೂ ಇದು ಮಾರಕ ಎಂಬ ಅಭಿಪ್ರಾಯ ವ್ಯಕ್ತಗೊಂಡಿದೆ.
ಸಾ.ರಾ. ಖಚಿತ ನುಡಿ
ಈ ನಡುವೆ ಪ್ರವಾಸೋದ್ಯಮ ಸಚಿವರಾಗಿರುವ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಡಿಸ್ನಿಲ್ಯಾಂಡ್ ಮಾದರಿ ಅಭಿವೃದ್ಧಿ ಶತಃಸಿದ್ಧ ಎಂದು ಹೇಳಿದ್ದಾರೆ. ಮಾತ್ರವಲ್ಲದೆ, ಕಾವೇರಿ ಮಾತೆಯ ಪ್ರತಿಮೆಯ ಸ್ಥಾಪನೆಯನ್ನೂ ಒತ್ತಿ ಹೇಳಿದ್ದು, ಈ ಕುರಿತು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ನೀರಾವರಿ ಸಚಿವ ಪುಟ್ಟರಾಜು, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇವರುಗಳೂ ಕಾರ್ಯಯೋಜನೆ ಬಗ್ಗೆ ಆಶಾಭಾವನೆ ಹೊಂದಿದ್ದಾರೆ.
ಇದರ ಬೆನ್ನಲ್ಲೇ ಮೈಸೂರಿನಲ್ಲಿ ಸಂಘಟನೆಯೊಂದರಿಂದ ಪ್ರತಿಭಟನೆಯೂ ನಡೆದಿದ್ದು, ಇದಕ್ಕೆ ವಿರೋಧ ವ್ಯಕ್ತಪಡಿಸಲಾಗಿದೆ. ಇದಕ್ಕೆ ಬಳಸುವ ಹಣವನ್ನು ಕೊಡಗಿನ ನೆರೆ ಸಂತ್ರಸ್ತರಿಗೆ ನೀಡುವಂತೆಯೂ ಈ ಸಂಘಟನೆಯ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಪ್ರತಿಮೆ ಸ್ಥಾಪನೆಗೆ ಕೊಡಗಿನಲ್ಲೂ ವಿರೋಧ
ಕಾವೇರಿ ಪ್ರತಿಮೆ ಸ್ಥಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಕಾವೇರಿ ಉಗಮ ಸ್ಥಾನವಾದ ಕೊಡಗು ಜಿಲ್ಲೆಯಲ್ಲೂ ವಿರೋಧ ವ್ಯಕ್ತಗೊಂಡಿದೆ. ಈ ಕುರಿತು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ತಲಕಾವೇರಿ ಮೂಲ ಸ್ವರೂಪ ಹಿತರಕ್ಷಣಾ ವೇದಿಕೆಯ ಕಾರ್ಯದರ್ಶಿ ಉಳ್ಳಿಯಡ ಎಂ. ಪೂವಯ್ಯ ಅವರು ಪುರಾತನ ಕಾಲದಿಂದಲೂ ಕಾವೇರಿಯನ್ನು ಜಲದೇವಿಯಾಗಿ ಪ್ರಕೃತಿದತ್ತವಾಗಿ ಪೂಜಿಸಲಾಗುತ್ತಿದೆಯೇ ವಿನಹ ಕಾವೇರಿ ಜನ್ಮ ತಳೆದ ತಲಕಾವೇರಿಯಿಂದ ಹಿಡಿದು ನದಿ ಹರಿಯುವ 760 ಕಿ.ಮೀ. ಉದ್ದದಲ್ಲಿಯೂ ಈ ಹಿಂದೆ ಕಾವೇರಿ ದೇವಸ್ಥಾನ ಎಂದಾಗಲಿ, ಗುಡಿ - ಗೋಪುರ, ವಿಗ್ರಹಗಳಾಗಲಿ ಇರಲಿಲ್ಲ ಕೆಲವೆಡೆ ಇದೀಗ ಇಂತಹದ್ದು ಕಂಡು ಬಂದರೂ ಅದು ಸಿಂಧುವಲ್ಲ. ಕೊಡಗಿನಲ್ಲಿ ಕಾವೇರಿಯನ್ನು ಜಲದೇವಿಯಾಗಿಯೇ ಆರಾಧಿಸಲಾಗುತ್ತದೆ. ಬೇರೆ ಪ್ರತಿಮೆಗಳ ಸ್ಥಾಪನೆಯ ರೀತಿಗೂ ಕಾವೇರಿ ಪ್ರತಿಮೆ ಸ್ಥಾಪನೆ ವಿಚಾರಕ್ಕೂ ವ್ಯತ್ಯಾಸವಿರುವದನ್ನು ಸಂಬಂಧಿಸಿದವರು ಅರಿಯಬೇಕು. ಇದು ಧಾರ್ಮಿಕವಾದ ವಿಚಾರ ಎಂದು ಹೇಳಿದ್ದಾರೆ.