ಮಡಿಕೇರಿ, ನ. 24 : ಕೊಡಗಿನಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರಕೃತಿ ವಿಕೋಪದ ಪರಿಹಾರ ಕಾರ್ಯಕ್ಕಾಗಿ ಪ್ರಾಧಿಕಾರ ರಚನೆಗೆ ಸರಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದ್ದು, ಅಂತಿಮ ಹಂತದ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿರುವ ಜಾತ್ಯತೀತ ಜನತಾದಳದ ಜಿಲ್ಲಾ ಮುಖಂಡ ಕೆ.ಎಂ.ಗಣೇಶ್, ಈ ವಿಚಾರದಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸುವದು ಸರಿಯಲ್ಲವೆಂದು ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಮಹಾಮಳೆಯಿಂದ ಕೊಡಗು ಜಿಲ್ಲೆ ಸಾಕಷ್ಟು ಕಷ್ಟ, ನಷ್ಟಗಳನ್ನು ಅನುಭವಿಸಿದ್ದು, ಸಂತ್ರಸ್ತರ ಹೆಸರಿನಲ್ಲಿ ಯಾರೂ ರಾಜಕಾರಣ ಮಾಡಬಾರದೆಂದು ತಿಳಿಸಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಅವರು ಪ್ರಾಧಿಕಾರ ರಚನೆಯ ಕುರಿತು ಮೊದಲ ಬಾರಿಗೆ ಸಲಹೆಯನ್ನು ನೀಡಿದ ಪರಿಣಾಮವಾಗಿ ರಾಜ್ಯ ಸರಕಾರ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಇತ್ತೀಚೆಗೆ ವಿಶ್ವನಾಥ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚಿಸಿದ್ದು, ಪ್ರಾಧಿಕಾರ ರಚನೆಯಾಗುವ ಬಗ್ಗೆ ಸ್ಪಷ್ಟ ಭರವಸೆ ದೊರೆತಿದೆ. ಸದ್ಯದಲ್ಲಿಯೇ ಮತ್ತೊಮ್ಮೆ ಕೊಡಗಿಗೆ ಭೇಟಿ ನೀಡಿ ಸಮಸ್ಯೆಗಳಿಗೆ ಸ್ಪಂದಿಸುವದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ಕೆ.ಎಂ.ಗಣೇಶ್ ತಿಳಿಸಿದ್ದಾರೆ.