ಮಡಿಕೇರಿ, ನ. 23 : ಪ್ರಕೃತಿಯ ಪ್ರತಿರೂಪ ಜಲರೂಪಿಣಿ ಕಾವೇರಿ ಮಾತೆಗೆ ರೂಪವನ್ನು ನೀಡುವ ಮೂಲಕ ಕೆಆರ್‍ಎಸ್‍ನಲ್ಲಿ ಅತಿ ಎತ್ತರದ ವಿಗ್ರಹವನ್ನು ಸ್ಥಾಪಿಸುವದರಿಂದ ಮೂಲ ಧಾರ್ಮಿಕ ಭಾವನೆಗೆ ದಕ್ಕೆಯಾಗಲಿದೆ ಎಂದು ಅಭಿಪ್ರಾಯಪಟ್ಟಿರುವ ತಲಕಾವೇರಿ ಮೂಲ ಸ್ವರೂಪ ರಕ್ಷಣಾ ವೇದಿಕೆ, ಸರಕಾರ ಉದ್ದೇಶಿತ ಯೋಜನೆಯನ್ನು ಕೈಬಿಡಬೇಕೆಂದು ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಪ್ರಮುಖ ಉಳ್ಳಿಯಡ ಎಂ.ಪೂವಯ್ಯ, ಜಲರೂಪಿಣಿ ಕಾವೇರಿ ಪ್ರಕೃತಿಯೇ ಹೊರತು ಯಾವದೇ ರೂಪವಿಲ್ಲವೆಂದು ಪ್ರತಿಪಾದಿಸಿದರು. ಕೆ.ಆರ್.ಎಸ್. ಪ್ರದೇಶದಲ್ಲಿ 125 ಅಡಿ ಎತ್ತರದ ಬೃಹತ್ ಕಾವೇರಿ ಮಾತೆಯ ವಿಗ್ರಹ ಸ್ಥಾಪನೆ, ಅದರ ಸಮೀಪದಲ್ಲಿ ಪ್ರತ್ಯೇಕವಾದ ಆಧುನಿಕ ಕೆರೆ ಸ್ಥಾಪಿಸಿ ಅಲ್ಲಿ ಪ್ರವಾಸಿಗರಿಗೆ ದೋಣಿ ವಿಹಾರ (ಬೋಟಿಂಗ್ ವ್ಯವಸ್ಥೆ), ಕೆರೆಯ ಮಧ್ಯ ಭಾಗದಲ್ಲಿ 360 ಅಡಿ ಎತ್ತರದ ವಿಶೇಷ ಮ್ಯೂಸಿಯಂ ಸ್ಥಾಪನೆ, ಇದರ ಎರಡೂ ಬದಿಗಳಲ್ಲಿ ಎತ್ತರದ ಗಾಜಿನ ಗೋಪುರ, ಅತ್ಯಾಧುನಿಕ ಹೈಟೆಕ್ ಪಾರ್ಕ್ ನಿರ್ಮಾಣ ಹೀಗೆÀ ವಿನೂತನ ಯೋಜನೆಗೆ ಒಟ್ಟು ರೂ. 1,200 ಕೋಟಿಗಳನ್ನು ಖರ್ಚು ಮಾಡಲು ಸರಕಾರ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.

ರೂ. 1,200 ಕೋಟಿ ಅಥವಾ ಅದಕ್ಕಿಂತಲೂ ಹೆಚ್ಚಿನ ಹಣದಿಂದ ಯಾರದ್ದೇ ವಿಗ್ರಹವನ್ನು ಸ್ಥಾಪಿಸಲಿ, ಆದರೆ ಕಾವೇರಿ ಮಾತೆಯ ವಿಗ್ರಹ ಸ್ಥಾಪನೆಗೆ ನಮ್ಮ ವಿರೋಧವಿದೆ ಎಂದು ಪೂವಯ್ಯ ಸ್ಪಷ್ಟಪಡಿಸಿದರು.

ಜಲದೇವತೆ ಎಂದೂ, ದಕ್ಷಿಣದ ಕಾಶಿ ಎಂದೂ ಭಕ್ತಿಗೆ ಪಾತ್ರವಾಗಿರುವ ಕಾವೇರಿ ಕ್ಷೇತ್ರವು ಪರಮ ಪವಿತ್ರ ಪ್ರಕೃತಿ ದೇವಿಯ ತವರು ಮನೆ ಇದ್ದಂತೆ. ಕಾವೇರಿಯ ಮೂಲ ಸ್ಥಾನ ತಲಕಾವೇರಿಯಲ್ಲಾಗಲಿ ಅಥವಾ ಕಾವೇರಿ ಹರಿದು ಸಮುದ್ರ ಸೇರುವ ತಮಿಳುನಾಡು ತಂಜಾವೂರು ಜಿಲ್ಲೆಯ ಪೂಂಪುಹಾರ್‍ವರೆಗೂ ಕಾವೇರಿ ಮಾತೆಯ ಹೆಸರಿನಲ್ಲಿ ಎಲ್ಲಿಯೂ ಮೂಲ ವಿಗ್ರಹ, ಪ್ರತಿಮೆ, ಮೂರ್ತಿ, ದೇವಸ್ಥಾನವಿಲ್ಲ.

ಪುರಾಣ ಕಾಲದಿಂದಲೇ ಶ್ರೀ ಕಾವೇರಿಯನ್ನು ಶ್ರೀ ಕಾವೇರಮ್ಮೆ ಎಂದು ಭಕ್ತ ಕೋಟಿಯ ನಂಬಿಕೆ, ಭಕ್ತಿಯ ಭಾವನೆ, ಅಚಲ ವಿಶ್ವಾಸಕ್ಕೆ ನೂತನ ಕಾವೇರಿ ವಿಗ್ರಹ ಸ್ಥಾಪನೆ ಯಿಂದ ದಕ್ಕೆಯಾಗಲಿದೆ ಎಂದರು.

125 ಅಡಿಗಳಷ್ಟು ಎತ್ತರದ ಬೃಹತ್ ಪ್ರತಿಮೆ ಸ್ಥಾಪಿಸುವದಾದರೆ, ಅದಕ್ಕೆ 35-40 ಅಡಿಗಳಷ್ಟು ಆಳದಲ್ಲಿ ಅಡಿಪಾಯ ಹಾಕಬೇಕು. ಆ ಸಂದರ್ಭದಲ್ಲಿ ಕೆ.ಆರ್.ಎಸ್. ಅಣೆಕಟ್ಟೆಯ ಸುರಕ್ಷತೆಗೆ ದಕ್ಕೆ ಆಗಬಹುದು. ಕೆ.ಆರ್.ಎಸ್. ಪ್ರದೇಶದ ಅಂದಾಜು 400 - 500 ಏಕರೆಯಷ್ಟು ಕೃಷಿ ಭೂಮಿಯ ರೈತರು ಒಕ್ಕಲೇಳ ಬೇಕಾದೀತು. ಈ ಯೋಜನೆಯಿಂದ ಮೈಸೂರು - ಮಂಡ್ಯ ಜಿಲ್ಲೆಯ ರೈತರು ಪ್ರಥಮ ಹಂತದಲ್ಲಿಯೇ ಹಲವು ಕಷ್ಟ, ನಷ್ಟಗಳಿಗೆ ಸಿಲುಕಬೇಕಾಗಬಹುದು ಎಂಬದು ತಜ್ಞರುಗಳ ಹಾಗೂ ರೈತ ಮುಖಂಡರ ವಾದವಾಗಿದೆ. ಪರಿಸ್ಥಿತಿ ಹೀಗಿರುವಾಗ ರಾಜ್ಯ ಸರಕಾರ ತನ್ನ ನಿರ್ಧಾರದ ಬಗ್ಗೆ ಮತ್ತೊಮ್ಮ ಆಲೋಚನೆ ಮಾಡಬೇಕಾಗಿದೆ ಎಂದು ಪೂವಯ್ಯ ಹೇಳಿದರು.

ಭಾಗಮಂಡಲ, ತಲಕಾವೇರಿ ಕ್ಷೇತ್ರದಲ್ಲಿ ಕಣ್ಣಿಗೆ ಗೋಚರಿಸುವ ನದಿ, ತೊರೆ ಜಲ, ನೀರು, ಮರ, ಗಿಡ, ಕಲ್ಲು, ಮಣ್ಣು, ಗಿರಿ ಕಂದರಾದಿ ಪ್ರಕೃತಿ ಸ್ವರೂಪವೇ ಕಾವೇರಮ್ಮ ಎಂಬ ದೃಢ ನಂಬಿಕೆ ಭಕ್ತರಲ್ಲಿದೆ. ಸಾವಿರಾರು ವರ್ಷಗಳಿಂದ ಕೊಡಗಿನ ಹಾಗೂ ದಕ್ಷಿಣ ಭಾರತದ ಕೋಟ್ಯಾಂತರ ಭಕ್ತರ ಧಾರ್ಮಿಕ ಭಾವನೆಗೆ ಭಂಗ ಬಾರದಂತೆ ಸರಕಾರ ಕಾವೇರಿ ವಿಗ್ರಹ ಸ್ಥಾಪನೆ ಯೋಜನೆಯನ್ನು ಕೈ ಬಿಡಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿಗಳು, ಸಂಬಂಧಿಸಿದ ಸಚಿವರುಗಳು ಹಾಗೂ ಹಿರಿಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸುವದಾಗಿ ಪೂವಯ್ಯ ತಿಳಿಸಿದರು.

ಪ್ರಮುಖರಾದ ಕೊಕ್ಕಲೆರ ಎ. ಕಾರ್ಯಪ್ಪ ಮಾತನಾಡಿ ಕಾವೇರಿ ಭಕ್ತರ ನಂಬಿಕೆಗೆ ದಕ್ಕೆ ತರುವ ಯೋಜನೆಯನ್ನು ವಿರೋಧಿಸುವದಾಗಿ ಹೇಳಿದರು.

ಕಿರಿಯಮಾಡ ರತನ್ ತಮ್ಮಯ್ಯ ಮಾತನಾಡಿ ಪ್ರಕೃತಿ ಮಾತೆ ಕಾವೇರಿಗೆ ರೂಪ ನೀಡುವ ಮೂಲಕ ಧಾರ್ಮಿಕ ಭಾವನೆಯನ್ನು ವಿರೂಪ ಗೊಳಿಸಬಾರದೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖ ರಾದ ಬೊಳ್ಳಜಿರ ಬಿ. ಅಯ್ಯಪ್ಪ, ಮಣವಟ್ಟಿರ ದೊರೆ ಸೋಮಣ್ಣ ಹಾಗೂ ಮಂಡೀರ ಗಣೇಶ್ ಉಪಸ್ಥಿತರಿದ್ದರು.