ಕುಶಾಲನಗರ, ನ. 22: ಮೂತ್ರ ವಿಸರ್ಜನೆ ಮಾಡಲು ತೆರಳಿದ ಯುವಕನೊಬ್ಬನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಕುಶಾಲನಗರದ ಬೈಚನಹಳ್ಳಿ ಬಳಿ ನಡೆದಿದೆ.
ಹಲ್ಲೆಯಿಂದ ಗಾಯಗೊಂಡ ವೆಂಕಟೇಶ್ ಎಂಬಾತ ಕುಶಾಲನಗರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಕುಶಾಲನಗರ ಬ್ಲೂಮೂನ್ ಸರ್ವೀಸ್ ಸ್ಟೇಷನ್‍ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಗೊಂದಿಬಸವನಹಳ್ಳಿಯ ವೆಂಕಟೇಶ ಎಂಬಾತ ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಸಂದರ್ಭ ಅಲ್ಲಿನ ಬೈಕ್ ಮೆಕ್ಯಾನಿಕ್ ಭಯ್ಯ ಮತ್ತು ಆತನ ಕುಟುಂಬ ಸದಸ್ಯರು ಸೇರಿ ಸ್ಪಾನರ್ ಮತ್ತಿತರ ಸಲಕರಣೆಗಳಿಂದ ವೆಂಕಟೇಶ್ ಮೇಲೆ ಹಲ್ಲೆ ನಡೆಸಿದ್ದು ತಲೆಗೆ ತೀವ್ರ ಏಟಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.