ಮಡಿಕೇರಿ, ನ. 22 : ಒಂದೊಮ್ಮೆ ಸಾಹಿತ್ಯದಲ್ಲಿ ಬರಡು ಭೂಮಿ ಎಂದು ಕರೆಸಿಕೊಳ್ಳುತ್ತಿದ್ದ ಕೊಡಗು ಜಿಲ್ಲೆಯಲ್ಲಿ ಇದೀಗ ಸಾಹಿತ್ಯ ಚಟುವಟಿಕೆಗಳು ಗರಿಗೆದರಿಕೊಳ್ಳುತ್ತಿವೆ. ವಿವಿಧ ಕನ್ನಡಪರ, ಸಾಹಿತ್ಯ ಪರ ಸಂಘಟನೆಗಳು ಸೇರಿದಂತೆ ಸಾಹಿತ್ಯಾಸಕ್ತರು ಅಲ್ಲಲ್ಲಿ ಸಾಹಿತ್ಯ ಪರ ಚಟುವಟಿಕೆಗಳನ್ನು ಹಮ್ಮಿಕೊಂಡು ಪ್ರೋತ್ಸಾಹಿಸುತ್ತಾ ಬರುತ್ತಿರುವದು ಕಂಡು ಬರುತ್ತಿದೆ. ಇಂತಹ ಒಂದು ಕಾರ್ಯಕ್ರಮಕ್ಕೆ ಮೂರ್ನಾಡು ಬಳಿಯ ಕಿಗ್ಗಾಲು ಗ್ರಾಮ ಸಾಕ್ಷಿಯಾಯಿತು.

ಹಿರಿಯ ಸಾಹಿತಿ ಕಿಗ್ಗಾಲು ಗಿರೀಶ್ ಅವರ ನಿವಾಸ ಗಿರಿಧಾಮದಲ್ಲಿ ಚಂದನವನ ಹಾಗೂ ಚುಕ್ಕಿ ವ್ಯಾಟ್ಸಪ್ ಬಳಗದವರಿಗಾಗಿ ಕವಿಗೋಷ್ಠಿ ಏರ್ಪಡಿಸಲಾಗಿತ್ತು. ಕವಿಗಳ ಭಾವನೆಗಳ ಲಹರಿಯೊಂದಿಗೆ ಹಾಡು ಅದಕ್ಕೆ ತಕ್ಕುದಾದ ಕುಂಚದಲ್ಲಿನ ಚಿತ್ರಣ ಹಾಸ್ಯ, ರಸಪ್ರಶ್ನೆಗಳಿಗೆ ಉತ್ತರದೊಂದಿಗೆ ಬಹುಮಾನ ಕೂಡ ಇದ್ದಿತು. ಸುಂದರ ಪ್ರಕೃತಿ ಸಿರಿಯ ನಡುವೆ ನಡೆದ ಕಾರ್ಯಕ್ರಮವನ್ನು ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಅವರು ಉದ್ಘಾಟಿಸಿದರು. ಹಿರಿಯ ಸಾಹಿತಿ ಅಂಬೆಕಲ್ಲು ಸುಶೀಲ ಕುಶಾಲಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರ್ರಮದಲ್ಲಿ ಸುಶೀಲ ಅವರೂ ಸೇರಿದಂತೆ ಬಿ.ಜಿ. ಅನಂತಶಯನ, ಕುಡೆಕಲ್ ಸಂತೋಷ್, ಪೂಜಾರೀರ ಕೃಪಾ ದೇವರಾಜ್, ಎಂ.ಎ. ರುಬೀನ, ಮಾಲಾಮೂರ್ತಿ, ನಾಕನ್ನಡಿಗ ಠೋಮಿ ಥೋಮಸ್, ಕೆ.ಜಿ. ರಮ್ಯ, ವಿಮಲದಶರಥ, ಪುಷ್ಪಲತಾ ಶಿವಪ್ಪ, ಕಿಗ್ಗಾಲು ಗಿರೀಶ್, ಕಿಗ್ಗಾಲು ಹರೀಶ್ ಅವರುಗಳು ಕವನಗಳನ್ನು ವಾಚಿಸಿದರು.

ಗಾಯನ- ಕುಂಚ

ಕಾರ್ಯಕ್ರಮಕ್ಕೆ ಮೆರುಗು ನೀಡುವಂತೆ ಗಾಯಕ ಮೋಹನ್ ಅವರ ಕಂಠದಿಂದ ಸುಮಧುರ ಗೀತೆಗಳು ಹೊರಹೊಮ್ಮಿದವು. ಹಾಡಿಗೆ ತಕ್ಕಂತೆ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರಕಲಾವಿದ ಬಿ.ಆರ್. ಸತೀಶ್ ಅವರ ಕುಂಚದಿಂದ ಮೂಡಿಬಂದ ಚಿತ್ರಗಳು ಕಣ್ಮನ ಸೆಳೆದವು. ಗಿರೀಶ್ ಅವರ ಕೊಳಲು ವಾದನ ಮುದ ನೀಡಿತು.

ರಸಪ್ರಶ್ನೆ - ಹಾಸ್ಯ

ಕಾರ್ಯಕ್ರಮದ ನಡುವೆ ಸಾಹಿತ್ಯ ಹಾಗೂ ಸಾಮಾನ್ಯ ಜ್ಞಾನ ಕುರಿತಾಗಿ ರಸಪ್ರಶ್ನೆ ಕೂಡ ಏರ್ಪಡಿಸಲಾಗಿತ್ತು. ಗಿರೀಶ್ ಅವರು ನಡೆಸಿಕೊಟ್ಟ ರಸಪ್ರಶ್ನೆಗಳಿಗೆ ಉತ್ತರಿಸಿದವರಿಗೆ ಬಹಮಾನ ಕೂಡ ನೀಡಲಾಯಿತು. ರಸಪ್ರಶ್ನೆಯೊಂದಿಗೆ ಹಾಸ್ಯದ ಹೊನಲು ಕೂಡ ಹರಿದು ಬಂದಿತು. ಭಾಗವಹಿಸಿದ್ದ ಸಾಹಿತಿಗಳು ಕಲಾವಿದರು ಹಾಸ್ಯಚಟಾಕಿ ಹಾರಿಸಿ ಎಲ್ಲರ ಮೊಗದಲ್ಲಿ ನಗು ಚಿಮ್ಮಿಸಿದರು.

ಸಂಗೀತಕ್ಕೆ ಹೆಜ್ಜೆ

ಮುಕ್ತಾಯದ ಹಂತದಲ್ಲಿ ಗಾಯಕ ಮೋಹನ್ ಅವರ ಹಾಡಿಗೆ ಮಕ್ಕಳು-ಮಹಿಳೆಯರಾದಿಯಾಗಿ ಎಲ್ಲರೂ ಹೆಜ್ಜೆ ಹಾಕಿ ಸಂಭ್ರಮಿಸಿದರು. ಭಾಗವಹಿಸಿದ್ದ ಎಲ್ಲರಿಗೂ ಗಿರೀಶ್ ಕುಟುಂಬದವ ರಿಂದ ಸ್ಮರಣಿಕೆಯೊಂದಿಗೆ ಶುಚಿ-ರುಚಿಯಾದ ಭೋಜನದ ಸವಿಯನ್ನೂ ಉಣಬಡಿಸಲಾಯಿತು. ಸುಂದರ ಕಾರ್ಯಕ್ರಮದಲ್ಲಿ ಜಯಶ್ರೀ ಅನಂತಶಯನ, ಜಾನಪದ ಪರಿಷತ್‍ನ ಅಂಬೆಕಲ್ ನವೀನ್ ಕುಶಾಲಪ್ಪ, ವೀಣಾಕ್ಷಿ, ಕ.ಸಾ.ಪದ ಎಸ್.ಡಿ. ಪ್ರಶಾಂತ್, ಶಶಿಕಲಾ ಗಿರೀಶ್, ರಂಜಿತ್, ಭುವನೇಶ್ವರಿ ಹರೀಶ್, ಪುಟಾಣಿ ಮಕ್ಕಳು ಭಾಗಿಗಳಾಗಿದ್ದರು. ಮುಕ್ತ ರಂಜಿತ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಕಿಗ್ಗಾಲು ಹರೀಶ್ ನಿರೂಪಿಸಿದರೆ, ಗಿರೀಶ್ ಸ್ವಾಗತಿಸಿ, ವಂದಿಸಿದರು.