ವೀರಾಜಪೇಟೆ, ನ. 21: ಕೇರಳದ ಮಟ್ಟನೂರಿನ ಬಳಿಯ ಎರಡನೇ ಹಸಿರು ವಲಯದ ಕಣ್ಣೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆ ಡಿಸೆಂಬರ್ 9ಕ್ಕೆ ಮುಹೂರ್ತ ನಿಗದಿಪಡಿಸಲಾಗಿದೆ.

ಕೇಂದ್ರ ಸರಕಾರ ಹಾಗೂ ಖಾಸಗಿ ಸಹಭಾಗಿತ್ವದಡಿ ನಿರ್ಮಿಸಲಾದ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡುವದರಿಂದ ಕೊಡಗು-ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಾಯವಾಗಲಿದ್ದು ಹಸಿರು ವಲಯದ ವಿಮಾನ ನಿಲ್ದಾಣವು ಮಡಿಕೇರಿಯಿಂದ 85 ಕಿ.ಮಿ. ಅಂತರವಿದ್ದರೆ; ಮೈಸೂರಿನಿಂದ 153 ಕಿ.ಮಿ. ಅಂತರದಲ್ಲಿದೆ.

ಸುಮಾರು 2300 ಎಕರೆ ಪ್ರದೇಶದಲ್ಲಿ ರೂ 1892 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ವಿಮಾನ ನಿಲ್ದಾಣವು 20 ವಿಮಾನಗಳು ನಿಲ್ಲುವಷ್ಟು ವಿಶಾಲವಾಗಿದ್ದು 4-ಇ ವೀಸಾ ಕೌಂಟರ್‍ಗಳು, 16 ಕಸ್ಟಮ್ಸ್ ಕೌಂಟರ್‍ಗಳು, 24 ನಿಲ್ದಾಣದಲ್ಲಿನ ಚೆಕ್ ಇನ್ ಕೌಂಟರ್‍ಗಳು 32 ವಲಸಿಗ ಪ್ರಯಾಣಿಕರ ಕೌಂಟರ್‍ಗಳನ್ನು ಹೊಂದಿದೆ.

ಈ ವಿಮಾನ ನಿಲ್ದಾಣದಲ್ಲಿ ಈಗಾಗಲೇ ನಡೆಸಿದ ಪ್ರಯೋಗಾರ್ಥ ಸಂಚಾರ ಯಶಸ್ವಿಯನ್ನು ಕಂಡಿದೆ.

ಕೇರಳದ ನೆಡುಂಬಾಶೇರಿ ವಿಮಾನ ನಿಲ್ದಾಣದ ನಂತರ ಈ ವಿಮಾನ ನಿಲ್ದಾಣವನ್ನು ಪಿಪಿಪಿ ಮಾದರಿಯಲ್ಲಿ ಆಧುನಿಕವಾಗಿ ನಿರ್ಮಿಸಲಾಗಿದೆ. ಕೇರಳ ರಾಜ್ಯದಲ್ಲಿ ಇದು ನಾಲ್ಕನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ.