ಕೂಡಿಗೆ, ನ. 21: ಜಿಲ್ಲಾ ಮಹಿಳಾ ಮತ್ತು ಮಕ್ಕಳ ಸಹಾಯವಾಣಿ ವತಿಯಿಂದ ಕೂಡಿಗೆಯ ಸರ್ಕಲ್‍ನಲ್ಲಿ ಮಕ್ಕಳ ಅರಿವು ಸಪ್ತಾಹ ಕಾರ್ಯಕ್ರಮ ನಡೆಯಿತು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಪ್ರಕಾಶ ಮಾತನಾಡಿ, ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಸಂರಕ್ಷಣೆಯ ಯೋಜನೆಯನ್ವಯ ಮಕ್ಕಳ ಹಕ್ಕುಗಳನ್ನು ಸಂರಕ್ಷಿಸುವದು, ಮಕ್ಕಳ ಮೇಲಿನ ದೌರ್ಜನ್ಯಕ್ಕೆ ನಿವಾರಣೆಯ ಬಗ್ಗೆ ಸಂಬಂಧಪಟ್ಟ ಮಾಹಿತಿಗಳನ್ನು ತಿಳಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ. ಲೋಕೇಶ್ ಮಾತನಾಡಿ, ಮಕ್ಕಳ ಸಹಾಯ ವಾಣಿಯ ಮೂಲಕ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿಗೊಳಿಸುತ್ತಿರುವದರಿಂದ ಮಕ್ಕಳಲ್ಲಿ ಆತ್ಮಸ್ಥೈರ್ಯ ಮೂಡುತ್ತದೆ ಮತ್ತು ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟಲು ಇಂತಹ ಜಾಗೃತಿ ಕಾರ್ಯಕ್ರಮಗಳು ಅತಿಮುಖ್ಯ. ವಿದ್ಯಾರ್ಥಿಗಳು ಪಠ್ಯದ ಜೊತೆಯಲ್ಲಿ ಶಿಕ್ಷಕರು ತಿಳಿಸುವ ಮಕ್ಕಳ ದೌರ್ಜನ್ಯದ ವಿಚಾರಗಳ ಬಗ್ಗೆ ಹೆಚ್ಚು ತಿಳಿದುಕೊಂಡು ಸಮಾಜದಲ್ಲಿ ಉತ್ತಮ ಮಾರ್ಗದಲ್ಲಿ ನಡೆಯಬೇಕು ಎಂದರು.
ಕೂಡಿಗೆ ಸರ್ಕಲ್‍ನಲ್ಲಿ ಮಾನವ ಸರಪಳಿ ರಚಿಸಿ, ಬಿತ್ತಿಪತ್ರಗಳನ್ನು ಹಿಡಿದು ಮಕ್ಕಳ ಜಾಗೃತಿಯ ಬಗ್ಗೆ, ದೌರ್ಜನ್ಯ ತಡೆಗಟ್ಟುವ ಘೋಷಣೆಗಳನ್ನು ಕೂಗಿದರು.
ಕಾರ್ಯಕ್ರಮದಲ್ಲಿ ಮಕ್ಕಳ ಸಹಾಯವಾಣಿಯ ಅಧಿಕಾರಿ ನವೀನ್, ಇಲಾಖೆಗೆ ಸಂಬಂಧಿಸಿದ ಪ್ರಚಾರ ಕಾರ್ಯಕರ್ತರು, ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಆಂಜೆಲಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು, ಶಿಕ್ಷಕರು, ಸ್ಥಳೀಯ ಸ್ವ-ಸಹಾಯ ಗುಂಪುಗಳು, ಪಂಚಾಯಿತಿ ಸದಸ್ಯರು ಭಾಗವಹಿಸಿದ್ದರು.