ವೀರಾಜಪೇಟೆ, ನ. 21: ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಕಾರ್ತಿಕ ಪೂಜಾ ಮಹೋತ್ಸವವನ್ನು ಭಕ್ತಿ ಭಾವದಿಂದ ಆಚರಿಸ ಲಾಯಿತು. ವೀರಾಜಪೇಟೆ ಆರ್ಜಿ ಗ್ರಾಮದ ಪೆರುಂಬಾಡಿ ಬಾಳುಗೋಡು ಗ್ರಾಮದ ಗ್ರಾಮ ದೇವತೆಯಾದ ಶ್ರೀ ಅಗ್ನಿ ಚಾಮುಂಡಿ ದೇಗುಲದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಶುಭ ಸೋಮವಾರದಂದು ಸಂಜೆ ಲಕ್ಷದೀಪಗಳನ್ನು ಬೆಳಗುವ ಮೂಲಕ ಭಕ್ತಿಭಾವದಿಂದ ಆಚರಿಸಲಾಯಿತು. ಪೂಜೆಯ ಭಾಗವಾಗಿ ಪ್ರಾಥಃಕಾಲ ಗಣಪತಿ ಹೋಮದೊಂದಿಗೆ ಪೂಜಾ ಕೈಂಕರ್ಯ ನಡೆಯಿತು. ಮಧ್ಯಾಹ್ನ ದೇವಿಗೆ ಮಹಾಪೂಜೆ ನಡೆಯಿತು.
ಸಂಜೆ ಸೂರ್ಯ ಅಸ್ತಮವಾಗುವ ವೇಳೆಯಿಂದ ಗ್ರಾಮದ ವಿವಿಧ ಭಾಗಗಳಿಂದ ಆಗಮಿಸಿದ ಗ್ರಾಮಸ್ಥರು ದೀಪಗಳನ್ನು ಬೆಳಗಿದರು. ಸಂಜೆ ಏಕಲವ್ಯ ಶಾಲೆಯ ವಿದ್ಯಾರ್ಥಿಗಳಿಂದ ಭಕ್ತಿ ಗೀತೆಗಳ ಸುದೆ ನಡೆಯಿತು. ರಾತ್ರಿ 8 ರ ಸಮಯದಲ್ಲಿ ವಿಷ್ಣುಮೂರ್ತಿ ಪೌರೋಹಿತರಿಂದ ದೇವಿಗೆ ಸಂಕಲ್ಪ ಮತ್ತು ಮಹಾಪೂಜೆ ನೆರವೇರಿಸಲಾಯಿತು. ಆಡಳಿತ ಮಂಡಳಿಯ ವತಿಯಿಂದ ಆಗಮಿಸಿದ ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯ ನಡೆಯಿತು ಪೂಜಾ ಮಹೋತ್ಸವದ ವೇಳೆ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಬಿ. ಕಾವೇರಪ್ಪ, ಉಪಾಧ್ಯಕ್ಷ ಕೊಕ್ಕಲೆಮಾಡ ಮುತ್ತಣ್ಣ, ಕಾರ್ಯದರ್ಶಿ ರವೀಂದ್ರ ಬಿ.ಎಸ್. ಮತ್ತು ಆಡಳಿತ ಮಂಡಳಿಯ ಸದಸ್ಯರು, ಭಕ್ತರು ದೇಗುಲದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ತೀರ್ಥ ಪ್ರಸಾದ ಪಡೆದು ಸಂತುಷ್ಟರಾದರು.
-ಕೆ.ಕೆ.ಎಸ್.