ಮಡಿಕೇರಿ, ನ. 19: ಕ್ರೀಡೆ ಹಾಗೂ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ರಾಜ್ಯದಲ್ಲಿ ಟೆನ್ನಿಸ್ ಅಕಾಡೆಮಿ ಸ್ಥಾಪನೆ ಮಾಡುವದಾಗಿ ಟೆನ್ನಿಸ್ ತಾರೆ ಮಚ್ಚಂಡ ರೋಹನ್ ಬೋಪಣ್ಣ ಹೇಳಿದ್ದಾರೆ.ಮಡಿಕೇರಿ ಕೊಡವ ಸಮಾಜ ಹಾಗೂ ಕೂರ್ಗ್ ಎಜುಕೇಶನ್ ಫಂಡ್ ವತಿಯಿಂದ ಕೊಡವ ಸಮಾಜದಲ್ಲಿ ಏರ್ಪಡಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಸಮಾಜದ ಬದಲಾವಣೆಗೆ ಶಿಕ್ಷಣ ಅತ್ಯಗತ್ಯ. ಕೂರ್ಗ್ ಎಜುಕೇಶನ್ ಫಂಡ್ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿದೆ. ತಾವು ಕನಕಪುರದಲ್ಲಿ ಜೈನ್ ಇನ್ಸ್ಟಿಟ್ಯೂಟ್ ಸಹಕಾರದೊಂದಿಗೆ ರೋಹನ್ ಟೆನ್ನಿಸ್ ಅಕಾಡೆಮಿ ಸ್ಥಾಪನೆ ಮಾಡಲಿದ್ದು, ಆ ಮೂಲಕ ಕ್ರೀಡೆ ಹಾಗೂ ಶಿಕ್ಷಣಕ್ಕೆ ಒತ್ತು ನೀಡುವದಾಗಿ ಹೇಳಿದರು. ನಮ್ಮಲ್ಲಿ ಅನೇಕ ಪ್ರತಿಭಾವಂತರು ಇದ್ದಾರೆ. ಅವರುಗಳಿಗೆ ಸೂಕ್ತ ವೇದಿಕೆಯ ಅವಶ್ಯಕತೆ ಇದೆಯೆಂದು ರೋಹನ್ ಹೇಳಿದರು.ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ ಸಂದರ್ಭ ಕೊಡವ ಸಮಾಜ ಸಂತ್ರಸ್ತರಿಗೆ ನೆರವಾಗಿದೆ. ತಾವು ಆ ಸಂದರ್ಭದಲ್ಲಿ ಇರಲಿಲ್ಲ. ಏಷ್ಯನ್ ಗೇಮ್ಸ್‍ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದೆ. ಅಲ್ಲಿಂದಲೇ ಜಿಲ್ಲೆಯ ಸಂತ್ರಸ್ತರಿಗಾಗಿ ಪ್ರಾರ್ಥಿಸಿದ್ದೇನೆ. ಕೊಡಗು ಮರು ನಿರ್ಮಾಣ ವಾಗಬೇಕು, ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.

ಕೊಡವ ಸಮಾಜದ ಅಧ್ಯಕ್ಷ ಕೊಂಗಾಂಡ ದೇವಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಟೆನ್ನಿಸ್ ಆರಂಭವಾದ ಬಗ್ಗೆ ರೋಹನ್ ಬೋಪಣ್ಣ ಟೆನ್ನಿಸ್ ಪಟುವಾದ ಬಗ್ಗೆ ಮಾಹಿತಿ ನೀಡಿದರು. ಕೂರ್ಗ್ ಎಜುಕೇಶನ್ ಫಂಡ್ ಅಧ್ಯಕ್ಷ ಕೂತಂಡ ಉತ್ತಪ್ಪ ಮಾತನಾಡಿ, ರೋಹನ್ ಅವರದ್ದು ಉತ್ತಮ ಸಾಧನೆ. ವಿಶ್ವವೇ ಗುರುತಿಸುವಂತೆ ಮಾಡಿದ್ದಾರೆ. ಇನ್ನಷ್ಟು ಕೀರ್ತಿ ತರಲಿ ಎಂದು ಹಾರೈಸಿದರು. ಅಲ್ಲದೆ ರೋಹನ್ ಅವರ ಅಕಾಡೆಮಿಗೆ ಫಂಡ್‍ನಿಂದ್ ರೂ. 50 ಸಾವಿರ ನೆರವು ನೀಡುವದಾಗಿ ಹೇಳಿದರು.

(ಮೊದಲ ಪುಟದಿಂದ) ಈ ಸಂದರ್ಭ ರೋಹನ್ ಅವರ ತಂದೆ ಪ್ರಭಾ ಬೋಪಣ್ಣ, ತಾಯಿ ಮಲ್ಲಿಕಾ ಬೋಪಣ್ಣ ಇದ್ದರು. ಬೊಟ್ಟೋಳಂಡ ಕಾಶಿ ಅಚ್ಚಯ್ಯ ಪ್ರಾರ್ಥಿಸಿದರೆ, ಮಾದೇಟಿರ ಬೆಳ್ಯಪ್ಪ ನಿರೂಪಿಸಿದರು. ನಡಿಕೇರಿಯಂಡ ಬೋಸ್ ಮಂದಣ್ಣ ರೋಹನ್ ಪರಿಚಯ ಮಾಡಿದರೆ, ಚೇಂದಿರ ಮುತ್ತಣ್ಣ ಸಭಿಕರನ್ನುದ್ದೇಶಿಸಿ ಮಾತನಾಡಿದರು. ಕೊಡವ ಸಮಾಜ ಉಪಾಧ್ಯಕ್ಷ ಮಣವಟ್ಟಿರ ಚಿಣ್ಣಪ್ಪ ವಂದಿಸಿದರು.