ಗೋಣಿಕೊಪ್ಪ ವರದಿ, ನ. 19: ಕೊಡಗಿನಲ್ಲಿ ನಡೆದ ಭೂಕುಸಿತ ಮಾನವ ನಿರ್ಮಿತವಾದ ಕೃತ್ಯ ಎಂಬ ತಜ್ಞರ ವರದಿ ಪ್ರಶ್ನಾರ್ಹ ಎಂದು ಶಾಸಕ ಕೆ. ಜಿ. ಬೋಪಯ್ಯ ಹೇಳಿದರು.
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಆವರಣದಲ್ಲಿ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಕೃಷಿ ಮತ್ತು ಸಂಶೋಧನಾ ಕೇಂದ್ರ, ಅರಣ್ಯ ಮಹಾವಿದ್ಯಾಲಯ, ಕೃಷಿ, ತೋಟಗಾರಿಕಾ, ಅರಣ್ಯ, ಪಶುಸಂಗೋಪನೆ, ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ವಿಸ್ತರಣಾ ಘಟಕ ಸಹಯೋಗದಲ್ಲಿ ಎರಡು ದಿನ ನಡೆಯುವ ಕ್ಷೇತ್ರೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಇಂತಹ ಹೇಳಿಕೆಯನ್ನು ಹೇಗೆ ಅರ್ಥೈಸಬೇಕು ಎಂಬವದು ತಿಳಿಯುತ್ತಿಲ್ಲ. ನನ್ನ ಗ್ರಾಮ ಮುಕ್ಕೋಡ್ಲುವಿನಲ್ಲಿ ರೆಸಾರ್ಟ್‍ಗಳಿಲ್ಲ. ಒಂದೆರಡು ಹೋಂಸ್ಟೇಗಳಿವೆ. ಅರಣ್ಯಗಳು ಹಾಗೆ ಇವೆ. ಆದರೂ ಹೇಗೆ ನಮ್ಮಲ್ಲಿ ಭೂಕುಸಿತ ಉಂಟಾಯಿತು ಎಂದು ತಿಳಿಯುತ್ತಿಲ್ಲ. ಕೊಡಗಿನಲ್ಲಿ ದೇವರಕಾಡಿನ ಹೆಸರಿನಲ್ಲಿ ಪರಿಸರ ರಕ್ಷಣೆಯಾಗುತ್ತಿದೆ. ಆದರೂ ಇಂತಹ ಘಟನೆ ನಡೆದಿದೆ ಎಂದರು.
ಕೇಂದ್ರ ಸರ್ಕಾರ ಭತ್ತಕ್ಕೆ ಬೆಂಬಲ ಬೆಲೆ ಘೋಷಿಸಿದೆ. ಇದರಿಂದ ಕೃಷಿಕರಿಗೆ ಒಂದಷ್ಟು ಅನುಕೂಲವಾಗುತ್ತಿದೆ. ರಾಜ್ಯ ಸರ್ಕಾರ ಕೂಡ ಶೀಘ್ರದಲ್ಲಿಯೇ ಬೆಂಬಲ ಬೆಲೆ ಘೋಷಿಸುವ ಮೂಲಕ ರೈತರಿಗೆ ನೆರವಾಗಬೇಕು ಎಂದರು.
ಪ್ರಧಾನಿ ಮೋದಿ ಅವರ ಆದಾಯ ದ್ವಿಗುಣ ಚಿಂತನೆ ರೈತರಿಗೆ ದೊರೆಯಬೇಕಾದರೆ, ಕೃಷಿಯಲ್ಲಿ ವಿಜ್ಞಾನಿಗಳ ಸಲಹೆ ಪಡೆಯುವದು ಹೆಚ್ಚು ಸೂಕ್ತವಾಗಿದೆ. ಆದಾಯ ಹೆಚ್ಚಿಸಿಕೊಳ್ಳುವತ್ತ ಕೃಷಿಕರು ತೊಡಗಿಕೊಳ್ಳಬೇಕಾಗಿದೆ. ಸ್ವಾವಲಂಬಿ ಹಾಗೂ ಸ್ವಾಭಿಮಾನಿ ರೈತರು ಹೆಚ್ಚಾಗಬೇಕಿದೆ ಎಂದರು.
ಆಧುನಿಕ ಕೃಷಿ ಉಪಕರಣಗಳನ್ನು ಬಳಸಿಕೊಂಡು ವೈಜ್ಞಾನಿಕ ರೀತಿಯಲ್ಲಿ ಕೃಷಿ ಮಾಡುವ ಮೂಲಕ ರೈತರು ಆರ್ಥಿಕ ಸಬಲತೆಯನ್ನು ಹೊಂದಲು ಕೃಷಿ ವಿಜ್ಞಾನಿಗಳು ರೈತರಿಗೆ ಗಂಭೀರ ಮಾರ್ಗದರ್ಶನ ಮಾಡಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯ ಕರೆ ನೀಡಿದರು.
ತಾ.ಪಂ. ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಮಾತನಾಡಿ ಹವಮಾನಕ್ಕೆ ಅನುಗುಣವಾಗಿ ಬೆಳೆ ಬೆಳೆಯುವಂತೆ ರೈತರಿಗೆ ಸಲಹೆ ಮಾಡುವ ಮೂಲಕ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವದನ್ನು ತಪ್ಪಿಸಬೇಕಾಗಿದೆ. ಕಾಫಿ, ಕಾಳುಮೆಣಸಿನ ಜೊತೆ ಬೇರೆ ಕೃಷಿಗೂ ಆಸಕ್ತಿ ವಹಿಸಬೇಕು ಎಂದು ಸಲಹೆ ನೀಡಿದರು.
ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ವಿಸ್ತಿರಣಾ ನಿರ್ದೇಶಕ ಡಾ. ಟಿ.ಹೆಚ್. ಗೌಡ ಮೂಡಿಗೆರೆ ತೋಟಗಾರಿಕೆ ಸಹ ಸಂಶೋದನ ನಿರ್ದೇಶಕ ಡಾ.. ಎಂ. ಶಿವ ಪ್ರಸಾದ್, ಪ್ರಾಸ್ತವಿಕ ನುಡಿಗಳನ್ನಾಡಿದರು.
ಪೊನ್ನಂಪೇಟೆ ಅರಣ್ಯ ವಿದ್ಯಾಲಯದ ಮುಖ್ಯಸ್ಥ ಡಾ.. ಸಿ.ಜಿ. ಕುಶಾಲಪ್ಪ ಅಧ್ಯಕ್ಷತೆಯಲ್ಲಿ ಜಿ.ಪಂ. ಸದಸ್ಯೆ ಶ್ರೀಜಾ ಸಾಜಿ, ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಮೂಕಳೇರ ಸುಮಿತ, ಜಿಲ್ಲಾ ಶಿಕ್ಷಣ ಘಟಕ ವಿಸ್ತರಣ ಮುಂದಾಳು ಡಾ.. ಆರ್.ಎನ್. ಕೆಂಚಾರೆಡ್ಡಿ, ತೋಟಗಾರಿಕ ಸಂಶೋದನಾ ನಿರ್ಧೇಶಕ ಡಾ. ಗುರುಮೂರ್ತಿ, ಡಾ. ಜಿ.ಎನ್. ಹೊಸಗೌಡರ್ ಉಪಸ್ಥಿತರಿದ್ದರು. ಈ ಸಂದರ್ಭ ಕೆ.ಎಂ.ಎಫ್.ಟಿ. ವತಿಯಿಂದ ಮಳೆ ಸಂತ್ರಸ್ತರಿಗೆ ಜೇನು ಪೆಟ್ಟಿಗೆ ಹಾಗೂ ಟಾರ್ಪಲ್‍ಗಳನ್ನು ಮತ್ತು ವಿಧ್ಯಾರ್ಥಿಗಳಿಗೆ ಸಹಾಯ ಧನವನ್ನು ನೀಡಲಾಯಿತು.
ಕೃಷಿಯ ಬಗ್ಗೆ ಸಮಗ್ರ ಮಾಹಿತಿ ಪಡೆದ ಕೃಷಿಕರು
ಕ್ಷೇತ್ರೋತ್ಸವದಲ್ಲಿ ಕೃಷಿ, ತೋಟಗಾರಿಕೆ, ಅರಣ್ಯ, ಪಶುಸಂಗೋಪನೆ, ಮೀನುಗಾರಿಕೆ ಇಲಾಖೆಗಳ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೈತರು ಪಡೆದುಕೊಂಡರು.
ಜೇನುಕೃಷಿ, ಆರ್ಕಿಡ್, ನರ್ಸರಿ, ಮುಂದಿನ ವರ್ಷ ಬೆಳೆಯಬಹುದಾದ ಮರಗಳ ಮಾಹಿತಿ, ಹಂದಿ ಸಾಕಣೆ, ಎರೆಹುಳ, ಬೀಜೋತ್ಪನ್ನ, ಸುಧಾರಿತ ಭತ್ತದ ತಳಿ, ಬೆಂಕಿ ರೋಗ ನಿರೋಧಕ ಬೆಳೆ, ಜೈವಿಕ ಇಂಧನ ಇಂತಹವುಗಳ ಮಾಹಿತಿ ಕಲೆ ಹಾಕಿದರು.
ಭತ್ತದ ತಾಕು, ವಸ್ತು ಪ್ರದರ್ಶನ ಹಾಗೂ ಕ್ಷೇತ್ರೋತ್ಸವ ಉದ್ಘಾಟನೆ, ಭತ್ತದ ಕೃಷಿ ಪುನಶ್ಚೇತನ ಬಗ್ಗೆ ವಿಚಾರಗೋಷ್ಠಿ, ಕಾಫಿ ಮತ್ತು ಕಾಳುಮೆಣಸು ಬೇಸಾಯದಲ್ಲಿ ಇತ್ತೀಚಿನ ಆವಿಷ್ಕಾರಗಳ ಮಾಹಿತಿ, ಜಿಲ್ಲೆಗೆ ಸೂಕ್ತವಾದ ಹಣ್ಣು, ತರಕಾರಿ, ಹೂ, ಔಷದಿ ಹಾಗೂ ಸುಗಂದ ದ್ರವ್ಯ ಬೆಳೆಗಳ ಮಾಹಿತಿ ಪಡೆದುಕೊಂಡರು.