ಶನಿವಾರಸಂತೆ, ನ. 19: ಕೊಡ್ಲಿಪೇಟೆಯ ಸಮೀಪದ ಕಲ್ಲುಕೋರೆ ಬಳಿ ಅಕ್ರಮ ಕಳ್ಳಬಟ್ಟಿ ಸಾರಾಯಿ ದಂಧೆಯ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಸೋಮವಾರಪೇಟೆ ವೃತ್ತ ನಿರೀಕ್ಷಕ ನಂಜುಂಡೇಗೌಡ ತಮ್ಮ ಸಿಬ್ಬಂದಿಗಳೊಂದಿಗೆ ಧಾಳಿ ನಡೆಸಿದ್ದಾರೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾನುವಾರ ಸಂಜೆ 7 ಗಂಟೆಗೆ ಕೊಡ್ಲಿಪೇಟೆ ಕಲ್ಲುಕೋರೆ ಹತ್ತಿರ ವಾಸವಾಗಿರುವ ತಂಗಮ್ಮ ಗದ್ದೆಯ ಜಾಗದಲ್ಲಿ ಇರುವ ಗುಡಿಸಲಿನಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ತಯಾರಿಸುವದು ಗೊತ್ತಾಗಿದೆ. 4 ಲೀಟರ್ ಕಳ್ಳಬಟ್ಟಿ ಸಾರಾಯಿ, 6 ಕೊಡಪಾನ, ಪುಳಿಗಂಜಿ ಹಾಗೂ ಕೃತ್ಯಕ್ಕೆ ಬಳಸಿದ ಪಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಕಾಡಿನೊಳಗಡೆ ಓಡಿ ತಲೆ ಮರೆಸಿಕೊಂಡಿದ್ದಾನೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಮಹದೇವಸ್ವಾಮಿ, ಅನಂತ್‍ಕುಮಾರ್, ಚಾಲಕ ಪ್ರವೀಣ್ ಪಾಲ್ಗೊಂಡಿದ್ದರು.