ಮಡಿಕೇರಿ, ನ. 17: ಮಡಿಕೇರಿಯ ವಿಶಾಲ ತಾಣದೊಳಗೆ ನೂತನ ನ್ಯಾಯಾಲಯ ಸಂಕೀರ್ಣ ತಲೆಯೆತ್ತತೊಡಗಿದ್ದು, ಭರದಿಂದ ಸಾಗುತ್ತಿರುವ ಕಾಮಗಾರಿ ಈ ವರ್ಷದ ಡಿಸೆಂಬರ್ ಅಂತ್ಯಕ್ಕೆ ಸಂಪೂರ್ಣಗೊಂಡು, 2019ರ ಜನವರಿಯಲ್ಲಿ ಲೋಕಾರ್ಪಣೆಗೊಳ್ಳುವ ಆಶಯ ನ್ಯಾಯಾಂಗ ಇಲಾಖೆಯದ್ದಾಗಿತ್ತು. ಆದರೆ, ಜಿಲ್ಲೆಯಲ್ಲಿ ಎದುರಾದ ತೀವ್ರ ಮಳೆಯಿಂದಾಗಿ ಕಾಮಗಾರಿ ವಿಳಂಬಗೊಂಡು ಮುಂದಿನ ಫೆಬ್ರವರಿ ಹೊತ್ತಿಗೆ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ. ಕರ್ನಾಟಕ ನ್ಯಾಯಾಂಗ ಇಲಾಖೆಯ ನಿರ್ದೇಶನದಂತೆ ಈ ಕಟ್ಟಡ ಸಂಕೀರ್ಣ ತಲೆಯೆತ್ತುತ್ತಿದ್ದು, ಕೊಡಗಿನ ಹವಮಾನಕ್ಕೆ ಪೂರಕವಾಗಿ ರೂಪುಗೊಳ್ಳುತ್ತಿದೆ. ಹೀಗಾಗಿ ನೂತನ ನ್ಯಾಯಾಲಯ ಸಂಕೀರ್ಣವು ಮುಂದಿನ ಮಾರ್ಚ್ ಅಂತ್ಯಕ್ಕೆ ಅಥವಾ ಏಪ್ರಿಲ್ನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ನ್ಯಾಯಾಂಗ ಇಲಾಖೆಯ ಮೂಲಗಳು ಸುಳಿವು ನೀಡಿವೆ.
ನ್ಯಾಯಾಲಯದ ಈ ನೂತನ ಸಂಕೀರ್ಣದಲ್ಲಿ ನೆಲ ಮಳಿಗೆ ಸಹಿತ ಎರಡು ಮೇಲಂತಸ್ತು ಕಟ್ಟಡದಿಂದ ಕೂಡಿದ ಕಾಮಗಾರಿಯು ಅಂದಾಜು ರೂ. 36.70 ಕೋಟಿ ವೆಚ್ಚದಲ್ಲಿ ಸಾಗಿದೆ. 2014ರಲ್ಲಿ ಅಡಿಗಲ್ಲು ಹಾಕುವದರೊಂದಿಗೆ ಬೆಂಗಳೂರಿನ ಕೆ.ಬಿ.ಆರ್. ಕಂಪೆನಿಯ ಮೂಲಕ ಗುತ್ತಿಗೆ ಕಾಮಗಾರಿ ಸಾಗಿದೆ.
ಗುತ್ತಿಗೆ ಸಂಸ್ಥೆಯ ಪ್ರಕಾರ ಪ್ರಸಕ್ತ ವರ್ಷದ ನಾಲ್ಕು ತಿಂಗಳೂ ಎಡೆಬಿಡದೆ ಸುರಿದಿರುವ ಮಳೆಯ ಪರಿಣಾಮ, ಅನಿವಾರ್ಯವಾಗಿ ಕೆಲಸ ನಿರ್ವಹಿಸಲು ಅಸಾಧ್ಯ ಪರಿಸ್ಥಿತಿ ಎದುರಾಗಿದೆ. ಆ ಹೊರತಾಗಿಯೂ ಕೆಲಸ ಈಗ ವೇಗದಿಂದ ಸಾಗಿದ್ದು, ನೂತನ ಕಟ್ಟಡ ಕಾಮಗಾರಿ ಬಹುತೇಕ ಮುಕ್ತಾಯ ಹಂತ ತಲಪಿದೆ.
ಇದರೊಂದಿಗೆ ಒಟ್ಟು 9 ನ್ಯಾಯಾಲಯ ಕಲಾಪ ಕೊಠಡಿಗಳು ರೂಪುಗೊಳ್ಳಲಿದ್ದು, ಸುಸಜ್ಜಿತ ದಾಖಲೆ ಗಳನ್ನಿಡುವ ಭದ್ರತಾ ಕೊಠಡಿ, ವಿಚಾರಣಾಧೀನ ಬಂಧಿಗಳನ್ನು ಕರೆತಂದಾಗ, ಅವರ ಇರುವಿಕೆಗೆ ಭದ್ರತಾ ಕ್ರಮಗಳಿಂದ ಕೂಡಿದ ಪ್ರತ್ಯೇಕ ಶೆಲ್ಗಳು, ದೈನಂದಿನ ಕಲಾಪಗಳಿಗೆ ಬಂದು ಹೋಗುವ ಸಾರ್ವಜನಿಕರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಗಮನದಲ್ಲಿರಿಸಿ ಕೊಂಡು, ನ್ಯಾಯಾಂಗ ಇಲಾಖೆಯ ಮಾರ್ಗದರ್ಶನದಲ್ಲಿ ಕೆಲಸ ಸಾಗಿದೆ.
ನೆಲ ಅಂತಸ್ತು ಸಹಿತ ಇನ್ನೆರಡು ಅಂತಸ್ತುಗಳು ಸೇರಿದಂತೆ ತಲಾ 3 ರಂತೆ ದೈನಂದಿನ ವಿಚಾರಣೆ ಕಲಾಪಗಳಿಗೆ ಸೂಕ್ತ ವೇದಿಕೆಯುಳ್ಳ ಸಭಾಂಗಣಗಳು ನಿರ್ಮಾಣವಾಗಿದ್ದು, ಈ ಕಲಾಪ ಸಭಾಂಗಣಗಳಿಗೆ ಪೂರಕ ನ್ಯಾಯಪೀಠ ವೇದಿಕೆ, ಕಟಕಟೆಗಳು ಹಾಗೂ ಇನ್ನಿತರ ಸೌಲಭ್ಯಗಳನ್ನು ರೂಪಿಸಿ ಅಗತ್ಯ ಪೀಠೋಪಕರಣಗಳನ್ನು ಕಲ್ಪಿಸಲಾಗುತ್ತಿದೆ.
ಆಧುನಿಕ ತಂತ್ರಜ್ಞಾನದಿಂದ ಕೂಡಿದ ಮಹಾದ್ವಾರ, ವಕೀಲರ ಸಹಿತ ಕಕ್ಷಿದಾರರು, ವಿಚಾರಣಾ ಬಂಧಿಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಕರೆದೊಯ್ಯುವ ಅಥವಾ ತುರ್ತು ಆಗಮನ ಮತ್ತು ನಿರ್ಗಮನ ದೃಷ್ಟಿಯಿಂದ ‘ಲಿಫ್ಟ್’ಗಳನ್ನು ಕೂಡ ಪ್ರತ್ಯೇಕ ಮೂರು ಕಡೆಗಳಲ್ಲಿ ಅಳವಡಿಸಲಾಗುತ್ತದೆ.
ಇನ್ನು ಕೊಡಗಿನ ಮಳೆಗಾಲ, ಬೇಸಿಗೆ, ಚಳಿಗಾಲದ ಮಂಜು ಮುಂತಾದ ಕಾಲಮಾನದಲ್ಲಿ ಕಟ್ಟಡದ ಸುರಕ್ಷತೆಗೆ ಒತ್ತು ನೀಡಲಾಗಿದೆ. ಸೋರುವಿಕೆ, ಮಳೆಯಿಂದ ಎರಚಲು ನೀರು ಕೊಠಡಿಗಳಿಗೆ ರಾಚದಂತೆ ಕಾಮಗಾರಿ ನಿವ್ಯಾಸದಲ್ಲಿ ನಿಗಾ ವಹಿಸಲಾಗಿದೆ ಎಂದು ಗುತ್ತಿಗೆ ಸಂಸ್ಥೆ ಪ್ರತಿನಿಧಿಗಳು ಖಚಿತಪಡಿಸಿದ್ದಾರೆ.
ನೂತನ ನ್ಯಾಯಾಲಯ ಸಂಕೀರ್ಣಕ್ಕೆ ಸುಸಜ್ಜಿತ ರಸ್ತೆಯೊಂದಿಗೆ ಬಂದು ಹೋಗುವ ವಾಹನಗಳಿಗೆ ನಿರ್ದಿಷ್ಟ ಮಾರ್ಗಸೂಚಿ, ಸುಸಜ್ಜಿತ ವ್ಯವಸ್ಥೆಯಿಂದ ಕೂಡಿದ ಬೆಳಕಿನ ವ್ಯವಸ್ಥೆ, ಅಗತ್ಯ ನೀರಿನ ಸೌಲಭ್ಯ, ಶೌಚಾಲಯ, ಉತ್ತಮ ನೆಲ ಹಾಸು ಸಹಿತ ಎಲ್ಲಾ (ಮೊದಲ ಪುಟದಿಂದ) ಅನುಕೂಲತೆಗಳನ್ನು ತ್ವರಿತಗತಿಯಲ್ಲಿ ನಿರ್ವಹಿಸಲಾಗುತ್ತಿದೆ. ಗುತ್ತಿಗೆ ಸಂಸ್ಥೆಯ ಪ್ರಕಾರ ಮುಂದಿನ ಡಿಸೆಂಬರ್ ಅಂತ್ಯಕ್ಕೆ ಹೊಸ ನ್ಯಾಯಾಲಯ ಕಟ್ಟಡದ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿ ಸಂಬಂಧಿಸಿದ ಇಲಾಖೆಯ ಅಧೀನÀಕ್ಕೆ ವಹಿಸಿಕೊಡಬೇಕಿತ್ತು.
ಬಹುಶಃ ಕರ್ನಾಟಕ ನ್ಯಾಯಾಂಗ ಇಲಾಖೆಯ ಆಶಯದಂತೆ ಜನವರಿಯಲ್ಲಿ ಉದ್ಘಾಟನೆಗೊಳ್ಳಬೇಕಿದ್ದ ಕಟ್ಟಡ ಕಾಮಗಾರಿ ಮಳೆಯಿಂದ ವಿಳಂಬವಾಗಿದೆ. ಹೀಗಾಗಿ ಫೆಬ್ರವರಿ ಹೊತ್ತಿಗೆ ಎಲ್ಲ ಕೆಲಸ ಪೂರೈಸಿ ನ್ಯಾಯಾಂಗ ಇಲಾಖೆಗೆ ಒಪ್ಪಿಸಲಾಗುವದು ಎಂದು ಕಟ್ಟಡದ ತಾಂತ್ರಿಕ ವಿಭಾಗದ ಮೇಲುಸ್ತುವಾರಿ ಗಮನಿಸುತ್ತಿರುವ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಇಬ್ರಾಹಿಂ ಖಚಿತಪಡಿಸಿದ್ದಾರೆ.
ಇನ್ನು ನ್ಯಾಯಾಲಯಕ್ಕೆ ಹೊಂದಿಕೊಂಡಂತೆ ಜಾಗ ಗುರುತಿಸಿ, ರೂ.4.70 ಕೋಟಿ ಅನುದಾನದಲ್ಲಿ ವಕೀಲರ ಸಂಘದ ಕಟ್ಟಡಕ್ಕೆ ಕ್ರಿಯಾಯೋಜನೆ ರೂಪಿಸಿದ್ದು, ಇನ್ನಷ್ಟೇ ಸರಕಾರದ ಅನುಮೋದನೆ ಬಳಿಕ ಟೆಂಡರ್ ಪ್ರಕ್ರಿಯೆ ಮುಗಿಸಿ ಕಟ್ಟಡ ಕಾಮಗಾರಿ ನಿರ್ವಹಿಸಲಾಗುವದು ಎಂದು ಅವರು ಮಾಹಿತಿ ನೀಡಿದ್ದಾರೆ.