ಮಡಿಕೇರಿ, ನ. 17: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ 10 ನೇ ತರಗತಿಯಲ್ಲಿ ಉತ್ತೀರ್ಣರಾಗಲು ವಿಫಲರಾಗುವಂತಹ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎನ್.ಐ.ಓ.ಎಸ್ (ನ್ಯಾಷನಲ್ ಇನ್ಸ್‍ಟ್ಯೂಟ್ ಆಫ್ ಓಪನ್ ಸ್ಕೂಲಿಂಗ್)ನಲ್ಲಿ 10 ನೇ ತರಗತಿ ಮುಂದುವರೆಸಲು ಅವಕಾಶ ಕಲ್ಪಿಸಿದ್ದು, ಆಸಕ್ತ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

ಎನ್.ಐ.ಒ.ಎಸ್. ಮೂಲಕ 10ನೇ ತರಗತಿಯ ಪರೀಕ್ಷೆ ಎದುರಿಸಿದ್ದಲ್ಲಿ ಕೇವಲ ಐದು ವಿಷಯಗಳಲ್ಲಿ ಉತ್ತೀರ್ಣರಾಗುವ ಮೂಲಕ 10ನೇ ತರಗತಿಯಲ್ಲಿ ತೇರ್ಗಡೆಯಾಗುವ ಅವಕಾಶವಿದೆ. ಕೇವಲ 1 ಭಾಷೆ ಮತ್ತು 4 ಕೋರ್ ವಿಷಯಗಳು ಅಥವಾ 2 ಭಾಷೆ ಮತ್ತು 3 ಕೋರ್ ವಿಷಯಗಳಲ್ಲಿ ಉತ್ತೀರ್ಣರಾದರೆ ತೇರ್ಗಡೆ ಹೊಂದುವ ಅವಕಾಶವಿದೆ.

ಕ್ಲಿಷ್ಟ ಎಂದು ಪರಿಗಣಿಸಲಾದ ಆಂಗ್ಲ, ವಿಜ್ಞಾನ ಹಾಗೂ ಗಣಿತ ವಿಷಯಗಳಿಗೆ ಪರ್ಯಾಯವಾಗಿ ಸಮಾಜಶಾಸ್ತ್ರ, ಗೃಹ ವಿಜ್ಞಾನ, ಮನೋವಿಜ್ಞಾನ, ಚಿತ್ರಕಲೆ ವಿಷಯಗಳಂತಹ 11 ವಿಷಯಗಳ ಆಯ್ಕೆಗೆ ಅವಕಾಶವಿದ್ದು, ಪ್ರಶ್ನೆ ಪತ್ರಿಕೆಗಳು ಆಂಗ್ಲ, ಹಿಂದಿ ಭಾಷೆಗಳಲ್ಲಿದ್ದು ಉತ್ತರಗಳನ್ನು ಯಾವದೇ ಭಾಷೆಯಲ್ಲಿ ಬರೆಯಬಹುದಾಗಿದೆ.

ರಾಜ್ಯ ಪಠ್ಯ ಕ್ರಮದಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ತಾವು ಉತ್ತೀರ್ಣರಾದ ವಿಷಯಗಳನ್ನು ಹೊರತುಪಡಿಸಿ ಉಳಿದ ವಿಷಯಗಳನ್ನು ಎನ್.ಐ.ಒ.ಎಸ್ ಪರೀಕ್ಷೆಯ ಮೂಲಕ ಎದುರಿಸಲು ಅವಕಾಶವಿದೆ. ಪ್ರತಿ ವಿಷಯಕ್ಕೆ ವಾರ್ಷಿಕ 30 ತರಗತಿಗಳನ್ನು ಸ್ಟಡಿ ಸೆಂಟರ್‍ಗಳಲ್ಲಿ ಹಾಜರಾಗುವ ಮೂಲಕ ಮಾರ್ಗದರ್ಶನ ಪಡೆಯಬಹುದಾಗಿದ್ದು, ಹೆಚ್ಚಿನ ವಿವರಗಳಿಗೆ ಉಪ ನಿರ್ದೇಶಕರ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಅಥವಾ ತಿತಿತಿ.ಟಿios.ಚಿಛಿ.iಟಿ ನಲ್ಲಿ ಮಾಹಿತಿ ಪಡೆಯಬಹುದಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಮಚ್ಚಾಡೊ ಅವರು ತಿಳಿಸಿದ್ದಾರೆ.