ಮಡಿಕೇರಿ, ನ. 17: ಇದೇ ತಾ. 16ರಿಂದ ಆರಂಭಗೊಂಡಿರುವ ಪ್ರವಾದಿ ಮಹಮ್ಮದ್ ಅವರ ಕುರಿತು ಪರಿಚಯ ಅಭಿಯಾನವು ತಾ.30ರ ತನಕ ಮುಂದುವರಿಯಲಿದ್ದು, ತಾ. 24ರಂದು ಇಲ್ಲಿನ ಕಾವೇರಿ ಹಾಲ್‍ನಲ್ಲಿ ಸದ್ಭಾವನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್‍ನ ಮಂಗಳೂರು ವಲಯ ಸಂಚಾಲಕ ಅಬ್ದುಲ್ ಸಲಾಂ ತಿಳಿಸಿದ್ದಾರೆ.ಪ್ರವಾದಿ ಅವರ ಕುರಿತು ನಿನ್ನೆಯಿಂದ ಆರಂಭಗೊಂಡಿರುವ ಅಭಿಯಾನ ಸಂಬಂಧ ಇಲ್ಲಿನ ಕಾರುಣ್ಯ ಸದನದಲ್ಲಿ ಏರ್ಪಡಿಸಿದ್ದ ಗ್ರಂಥಗಳ ಬಿಡುಗಡೆ ಹಾಗೂ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಾ, ಕಾರ್ಯಕ್ರಮದ ವಿವರ ನೀಡಿದರು.

ಇದೇ ಸಂದರ್ಭ ವಕೀಲ ಹಾಗೂ ಸಾಹಿತಿ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಅವರು ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ ಪ್ರವಾದಿ ಮಹಮ್ಮದ್ ಎಂಬ ಲೇಖನಗಳ ಸಂಕಲನ ಬಿಡುಗಡೆಗೊಳಿಸಿದರು. ಮತ್ತೋರ್ವ ಉಪನ್ಯಾಸಕ ಡಾ. ಶ್ರೀಧರ್ ಹೆಗಡೆ ಮತ್ತೊಂದು ಲೇಖನಗಳ ಸಂಗ್ರಹಮಾಲೆ ಪ್ರವಾದಿ ಮಹಮ್ಮದ್ ಬಗ್ಗೆ ಜಗತ್ತಿನ ಪ್ರಸಿದ್ಧ ವಿದ್ವಾಂಸರು ಹಾಗೂ ಚಿಂತಕರ ಅಭಿಪ್ರಾಯಗಳ ಪುಸ್ತಕ ಬಿಡುಗಡೆಗೊಳಿಸಿದರು. ಅಲ್ಲದೆ ಇಬ್ಬರು ಮಾತನಾಡಿ, ಪ್ರವಾದಿಯ ಅಮೂಲ್ಯ ಚಿಂತನೆಗಳನ್ನು ಮನೆ ಮನೆಗೆ ಗ್ರಂಥ

(ಮೊದಲ ಪುಟದಿಂದ) ರೂಪದಲ್ಲಿ ತಲಪಿಸಿ ವಿಶ್ವ ಶಾಂತಿ, ಬಂಧುತ್ವ, ಸಹಬಾಳ್ವೆಗೆ ತೊಡಗುವಂತೆ ಆಶಿಸಿದರು.

ಅಬ್ದುಲ್ ಸಲಾಂ ಮಾಹಿತಿ : ಪ್ರವಾದಿ ಮಹಮ್ಮದ್‍ರ ಜನ್ಮ ತಿಂಗಳ ಪ್ರಯುಕ್ತ ಕನ್ನಡ ನಾಡಿನ ಜನತೆಗೆ, ಪ್ರವಾದಿವರ್ಯರ ಸಂದೇಶ ಮತ್ತು ಅವರು ಪ್ರತಿಪಾದಿಸಿರುವ ಮಾನವೀಯ ಮೌಲ್ಯಗಳನ್ನು ಪರಿಚಯಿಸಲು ಹಾಗೂ ಪ್ರವಾದಿ ಶಿಕ್ಷಣದ ಪ್ರಸ್ತುತತೆ ಸಮಾಜದಲ್ಲಿ ಚರ್ಚಾ ವಿಷಯವಾಗಿ ಪರಸ್ಪರ ಅರಿತುಕೊಂಡು ಬಾಳುವದರ ಜೊತೆಗೆ ಆರೋಗ್ಯಪೂರ್ಣ ಸಮಾಜವನ್ನು ನಿರ್ಮಿಸಲು ರಾಜ್ಯದಾದ್ಯಂತ ‘ಪ್ರವಾದಿ ಮಹಮ್ಮದ್ ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ’ ಎಂಬ ವಿಷಯದಲ್ಲಿ ತಾ. 16ರಿಂದ 30ರ ತನಕ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಅಭಿಯಾನದ ಅಂಗವಾಗಿ ಸುದ್ದಿಗೋಷ್ಠಿ, ವಿಚಾರಗೋಷ್ಠಿ, ಸಾರ್ವಜನಿಕ ಸಭೆ, ಸೀರತ್ ಪ್ರವಚನ, ಸದ್ಭಾವನಾ ಸಮಾವೇಶ, ಚಹಾ ಕೂಟಗಳು, ಪುಸ್ತಕ ಬಿಡುಗಡೆ, ಗಣ್ಯರ ಭೇಟಿ, ಮೊಹಲ್ಲಾ ಸಭೆಗಳು, ಶಿಕ್ಷಕರಿಗೆ ಪ್ರಬಂಧ ಸ್ಪರ್ಧೆ, ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ, ವಸ್ತು ಪ್ರದರ್ಶನ, ಪುಸ್ತಕ ಪ್ರದರ್ಶನ, ವಾಹನ ಜಾಥಾ, ಬೀದಿ ನಾಟಕ, ಮಹಿಳಾ ಸಮಾವೇಶ, ಮಕ್ಕಳ ಕಾರ್ಯಕ್ರಮ, ಶುಚಿತ್ವ ಅಭಿಯಾನ, ಪ್ರಕೃತಿ ಸಂರಕ್ಷಣೆ, ಸಮಾಜ ಸೇವಾ ಕಾರ್ಯಗಳು ಇತ್ಯಾದಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವದು ಎಂದರು.

ಕೊಡಗು ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾಗಿದ್ದು, ಜಮಾಅತೆ ಇಸ್ಲಾಮೀ ಹಿಂದ್ ಮಡಿಕೇರಿ ಶಾಖೆಯ ವತಿಯಿಂದ ತಾ. 24ರಂದು ಸಂಜೆ 6.30ಕ್ಕೆ ನಗರದ ಕಾವೇರಿ ಹಾಲ್‍ನಲ್ಲಿ ಸದ್ಭಾವನಾ ಸಮಾವೇಶವನ್ನು ಏರ್ಪಡಿಸಲಾಗಿದೆ ಎಂದರು.

ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಎಸ್ಪಿ ಡಾ. ಸುಮನ್ ಡಿ.ಪಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸದ್ಭಾವನಾ ಸಂದೇಶವನ್ನು ವೀರಾಜಪೇಟೆಯ ಅರಮೇರಿ ಶ್ರೀ ಕಳಂಚೇರಿ ಮಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಮಡಿಕೇರಿ ಸಂತ ಮೈಕಲ್ ದೇವಾಲಯದ ಧರ್ಮಗುರು ರೆ|ಫಾ| ಆಲ್‍ಫ್ರೆಡ್ ಜಾನ್ ಮೆಂಡೋನ್ಸಾ, ಮಂಗಳೂರು ಶಾಂತಿ ಪ್ರಕಾಶನ ವ್ಯವಸ್ಥಾಪಕ ಮುಹಮ್ಮದ್ ಕುಂಞÂ ಅವರುಗಳು ನೀಡಲಿದ್ದಾರೆ. ಸಭಾಧ್ಯಕ್ಷತೆಯನ್ನು ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಸಂಚಾಲಕ ಅಬ್ದುಸ್ವಲಾಮ್ ಯು. ವಹಿಸಲಿದ್ದು, ಕೊಡಗು ಜಿಲ್ಲಾ ಸಂಚಾಲಕ ಅಫ್ಸರ್ ಸಿ.ಹೆಚ್. ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕೊಡಗು ಪ್ರಕೃತಿ ವಿಕೋಪದ ವೇಳೆ ರಕ್ಷಣಾ ಕಾರ್ಯಗಳನ್ನು ನಿರ್ವಹಿಸಿದ್ದ ವಿಶೇಷ ರಕ್ಷಣಾ ಕಾರ್ಯಕರ್ತರನ್ನು ಹಾಗೂ ವಿಶೇಷ ಸೇವಾ ಕಾರ್ಯಗಳನ್ನು ನಿರ್ವಹಿಸಿದ ಸಮಾಜ ಸೇವಕರನ್ನು ಸನ್ಮಾನಿಸಲಾಗುವದು.

ಅಲ್ಲದೇ ಪುಸ್ತಕ ಬಿಡುಗಡೆ ಸಮಾರಂಭ, ಮಹಿಳೆಯರಿಗಾಗಿ ಮತ್ತು ಮಕ್ಕಳಿಗಾಗಿ ಕಾರ್ಯಕ್ರಮ, ರಾಜೇಶ್ವರಿನಗರ, ತ್ಯಾಗರಾಜ ಕಾಲೋನಿ, ಆಝಾದ್ ನಗರ, ರಾಣಿಪೇಟೆ, ಸಿ.ಪಿ.ಸಿ. ಲೇಔಟ್, ಎ.ವಿ. ಶಾಲೆ ಮತ್ತು ಮಕ್ಕಂದೂರಿನಲ್ಲಿ ಮೊಹಲ್ಲಾ ಸಭೆಗಳನ್ನು ಜರುಗಿಸಲಾಗುವದು. ಸದ್ಭಾವನಾ ಸಮಾವೇಶದ ಅಂಗವಾಗಿ ನಗರದಾದ್ಯಂತ ವಾಹನ ಜಾಥಾವನ್ನು ಕೈಗೊಳ್ಳಲಾಗುವದು ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆ ಪ್ರಮುಖರಾದ ಸಿ.ಹೆಚ್. ಆಫ್ಸರ್, ಅಬ್ದುಸ್ವಲಾಮ್, ಜೆ.ಎಂ. ಹನೀಫ್, ಮುಹಮ್ಮದ್, ಕೆ.ಟಿ. ಬಶೀರ್, ಕೆ.ಪಿ.ಬಾಲಸುಬ್ರಹ್ಮಣ್ಯ ಕಂಜರ್ಪಣೆ, ಶ್ರೀಧರ್ ಹೆಗಡೆ, ಮನೆ ಮನೆ ಕವಿಗೋಷ್ಠಿಯ ವೈಲೇಶ ಪಿ.ಎಸ್. ಮೊದಲಾದವರು ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗಾಗಿ ಆಶಯ ನುಡಿಯಾಡಿದರು. ವೀರಾಜಪೇಟೆ ಪತ್ರಕರ್ತ ಅಬ್ದುಲ್ ರೆಹಮಾನ್ ಕಾರ್ಯಕ್ರಮ ನಿರೂಪಿಸಿದರು.