ಗೋಣಿಕೊಪ್ಪ ವರದಿ, ನ. 17: ತುರ್ತು ಸಭೆಗೆ ಆಹ್ವಾನಿಸಿ ಗೈರು ಹಾಜರಾಗಿದ್ದ ವಿರಾಜಪೇಟೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಅವರನ್ನು ವೀರಾಜಪೇಟೆ ತಾಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.ಪೊನ್ನಂಪೇಟೆ ಸಾಮಥ್ರ್ಯ ಸೌಧದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಉಪಾಧ್ಯಕ್ಷ ನೆಲ್ಲೀರ ಚಲನ್ ತರಾಟೆಗೆ ತೆಗೆದುಕೊಂಡರು.

ನವೆಂಬರ್ ಮೊದಲ ವಾರದಲ್ಲಿ ಕರೆದಿದ್ದ ಸಭೆಗೆ ಜನಪ್ರತಿನಿಧಿ, ಅಧಿಕಾರಿಗಳನ್ನು ಆಹ್ವಾನಿಸಿ ತಾವು ಗೈರಾಗಿರುವ ಬಗ್ಗೆ ಪ್ರಶ್ನಿಸಿದರು. ಅನಾರೋಗ್ಯ ಎಂದು ಜಾರಿಕೊಳ್ಳುವ ಉತ್ತರ ನೀಡಬೇಡಿ. ಅಭಿವೃದ್ಧಿ ಯೋಜನೆಗಳ ಕ್ರಿಯಾಯೋಜನೆ ರೂಪಿಸಲು ಅಂದು ಸಭೆ ಕರೆದಿದ್ದರೂ ಬಾರದಿರುವದರಿಂದ ಅಭಿವೃದ್ಧಿಗೆ ತೊಂದರೆಯಾಗುತ್ತಿದೆ. ಸದಸ್ಯರಿಗೆ ನೀಡಬೇಕಾದ ಗೌರವ ಧನ ವಿತರಣೆಯಲ್ಲೂ ವಿಳಂಬ ಮಾಡುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಟಿಪ್ಪು ಜಯಂತಿ ವಿಚಾರದಲ್ಲಿ ಸಭೆ ಕರೆಯಲಾಗಿತ್ತು. ನಾನೊಬ್ಬ

(ಮೊದಲ ಪುಟದಿಂದ) ಅಧಿಕಾರಿಯಾಗಿ ಹೇಗೆ ಪಾಲ್ಗೊಳ್ಳಲಿ ಎಂದು ಇಒ ಜಯಣ್ಣ ಉತ್ತರಿಸಿದರು. ಕಳೆದ ವರ್ಷ ಇಒ ಸಭೆಗೆ ಪಾಲ್ಗೊಂಡಿದ್ದರು. ನಿಮ್ಮದೇನು ವಿಶೇಷ ಎಂದು ಖಾರವಾಗಿಯೇ ಚಲನ್ ಪ್ರಶ್ನಿಸಿದರು. ಕ್ರಿಯಾಯೋಜನೆ ರೂಪಿಸಿ ಅಭಿವೃದ್ಧಿಯತ್ತ ಗಮನ ಹರಿಸಿ ಎಂದು ಸೂಚಿಸಿದರು.

ತಾಲೂಕಿನಲ್ಲಿ ರಸ್ತೆ ಹದಗೆಟ್ಟಿದ್ದರೂ ಯೋಜನೆಗಳ ಮಾಹಿತಿ ನೀಡಲು ಅಧಿಕಾರಿಗಳು ಸಭೆಗೆ ಬಾರದಿರುವ ಬಗ್ಗೆ ಆಕ್ಷೇಪ ವ್ಯಕ್ತವಾಯಿತು.

ಕಣ್ಣಂಗಾಲ ಗ್ರಾಮದಲ್ಲಿ ಕುಡಿಯುವ ನೀರು ಯೋಜನೆಗೆ ವಿದ್ಯುತ್ ಅಳವಡಿಸಲು ಸ್ಥಳೀಯರೊಬ್ಬರು ಮರ ಕಡಿಯಲು ಅವಕಾಶ ನೀಡದಿರುವದರಿಂದ ಯೋಜನೆ ಅಪೂರ್ಣಗೊಂಡಿದೆ. ಇದರಿಂದಾಗಿ ಕುಡಿಯುವ ನೀರು ಒದಗಿಸಲು ಆಗುತ್ತಿಲ್ಲ ಎಂದು ಸೆಸ್ಕ್ ಅಧಿಕಾರಿಗಳು ಮಾಹಿತಿ ನೀಡಿದರು. ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಮರ ಕಡಿಯುವಂತೆ ಸೂಚಿಸಿದ್ದರೂ ಪ್ರಯೋಜನವಾಗುತ್ತಿಲ್ಲ ಎಂದು ಪಿಡಿಒ ಹೇಳಿದರು.

ತಾಲೂಕಿನ ನಿವೇಶನ ರಹಿತರಿಗೆ ವಿತರಿಸಲು ವಶಕ್ಕೆ ಪಡೆದಿರುವ ಒತ್ತುವರಿ ಜಾಗವನ್ನು ಫಲಾನುಭವಿ ಗಳಿಗೆ ಹಸ್ತಾಂತರ ಮಾಡಲು ಗ್ರಾಮ ಪಂಚಾಯಿತಿ ಪಿಡಿಒ ಅವರಿಗೆ ಜವಬ್ದಾರಿ ನೀಡಲಾಗಿದೆ. ಅವರು ವಶಕ್ಕೆ ತೆಗೆದುಕೊಂಡು ಫಲಾನುಭವಿಗಳಿಗೆ ನೀಡಬೇಕಾಗಿದೆ ಎಂದು ತಹಶೀಲ್ದಾರ್ ಗೋವಿಂದರಾಜು ಹೇಳಿದರು.

ಕೆದಮುಳ್ಳೂರುವಿನಲ್ಲಿರುವ ಮಧುವನ ಜಾಗವನ್ನು ವಶಕ್ಕೆ ಪಡೆಯುವಂತೆ ತೋಟಗಾರಿಕಾ ಇಲಾಖೆ ಅಧಿಕಾರಿಗೆ ಸೂಚಿಸಲಾಯಿತು.

ಬಿರುನಾಣಿ ವ್ಯಾಪ್ತಿಯಲ್ಲಿ ಮಳೆ ನಿಂತರೂ ಕೂಡ ವಿದ್ಯುತ್ ಸಮಸ್ಯೆ ಪರಿಹಾರ ಕಂಡಿಲ್ಲ. ಬಹುತೇಕ ದಿನಗಳಲ್ಲಿ ವಿದ್ಯುತ್ ದೊರಕುತ್ತಿಲ್ಲ. ಗೋಣಿಕೊಪ್ಪ ಪಟ್ಟಣದಲ್ಲಿಯೇ ವಿದ್ಯುತ್ ಸಮಸ್ಯೆ ನಿರಂತರವಾಗಿ ಕಾಡುತ್ತಿದೆ. ಸೆಸ್ಕ್ ಅಧಿಕಾರಿಗಳು ವಿಶೇಷ ಸಭೆ ಕರೆಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು. ಸ್ಥಾಯಿ ಸಮಿತಿ ಅಧ್ಯಕ್ಷ ಜೆನಿಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ವರದಿ-ಸುದ್ದಿಪುತ್ರ