ಮಡಿಕೇರಿ, ನ. 17 : ಪ್ರಕೃತಿ ವಿಕೋಪದಿಂದ ಕೊಡಗು ಜಿಲ್ಲೆ ಸಂಕಷ್ಟದಲ್ಲಿರುವದರಿಂದ ತೋಟ ಕಾರ್ಮಿಕರ ಮೈಕ್ರೋಫೈನಾನ್ಸ್ ಸಾಲ ಮನ್ನಾ ಮಾಡಬೇಕು ಮತ್ತು ಸಾಲ ವಸೂಲಾತಿಗಾಗಿ ನಡೆಯುತ್ತಿರುವ ಕಿರುಕುಳವನ್ನು ತಡೆಗಟ್ಟಬೇಕೆಂದು ಕರ್ನಾಟಕ ರಾಜ್ಯ ಸಂಯುಕ್ತ ಕೃಷಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಶಶಿಧರ್ ಆಗ್ರಹಿಸಿದ್ದಾರೆ.ಕೃಷಿ ಕಾರ್ಮಿಕರ ಸಂಘಟನೆಯ ಕೊಡಗು ಜಿಲ್ಲಾ ಘಟಕದ ವತಿಯಿಂದ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಕಾರ್ಮಿಕರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತ ನಾಡಿದರು.ಮಹಾಮಳೆಯಿಂದಾಗಿ ಕೂಲಿ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ತಮ್ಮ ಜೀವನಕ್ಕಾಗಿ ಮಾಡಿದ ಸಾಲವನ್ನು ತೀರಿಸಲು ಸಾಧ್ಯವಾಗುತ್ತಿಲ್ಲ. ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಕಿರುಕುಳ ನೀಡುತ್ತಿರುವದು ಖಂಡನೀಯವೆಂದ ಶಶಿಧರ್, ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಎಐವೈಒನ ರಾಜ್ಯಾಧ್ಯಕ್ಷೆ ಎಂ.ಉಮಾದೇವಿ ಮಾತನಾಡಿ, ಪ್ರಕೃತಿ ವಿಕೋಪದಿಂದಾಗಿ ಕೊಡಗು ಹಾಗೂ ಕೇರಳದ ಜನ ತತ್ತರಿಸಿ ಹೋಗಿದ್ದು, ಇನ್ನೂ ಸಂತ್ರಸ್ತರ ಸಮಸ್ಯೆಗಳು ಬಗೆ ಹರಿದಿಲ್ಲ. ಅಲ್ಲದೆ ಕೂಲಿ ಕಾರ್ಮಿಕರು ಕೆಲಸ, ಕಾರ್ಯಗಳಿಲ್ಲದೆ ಒಪ್ಪೊತ್ತಿನ ಊಟಕ್ಕೂ ಬೇಡಿ ತಿನ್ನುವ ಪರಿಸ್ಥಿತಿ ಎದುರಾಗಿದ್ದು, ಇಂತಹ ಸಂದರ್ಭ ಕೇಂದ್ರ ಸರ್ಕಾರ ಜನರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಿ ಕೊಡಲು ಮುಂದಾಗದೆ. ಜನ ವಿರೋಧಿ ನೀತಿಯನ್ನು ತೋರಿದೆ ಎಂದು ಆರೋಪಿಸಿದರು.

ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ಪೂರ್ಣಿಮ ಬಸಪ್ಪ ಮಾತನಾಡಿ, ಜಿಲ್ಲೆಯಲ್ಲಿ 40 ಸಾವಿರ ಆಶಾ ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜ. 25 ರಂದು ದೆಹಲಿಗೆ ನಿಯೋಗ ತೆರಳಲಾಗುವದು ಎಂದು ತಿಳಿಸಿದರು.

ಬೇಡಿಕೆಗಳು : ರಾಜ್ಯದ ರೈತರ ಸಾಲವನ್ನು ಮನ್ನಾ ಮಾಡಿದಂತೆ ಮಳೆಯಿಂದ ನೊಂದ ಕೂಲಿ ಕಾರ್ಮಿಕರ ಸಾಲವನ್ನು ಮನ್ನಾ ಮಾಡಬೇಕು, ಸಾಲ ವಸೂಲಿಗೆ ಕಿರುಕುಳ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಕೊಡಗಿನ ಎಸ್ಟೇಟ್ ಕೂಲಿ

(ಮೊದಲ ಪುಟದಿಂದ) ಕಾರ್ಮಿಕರ ಮೈಕ್ರೋಫೈನಾನ್ಸ್ ಸಾಲವನ್ನು ಮನ್ನಾ ಮಾಡಬೇಕು ಮತ್ತು ಸಂಸ್ಥೆಗಳು ನೀಡುತ್ತಿರುವ ಕಿರುಕುಳವನ್ನು ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಬೇಕು, ರಾಜ್ಯ ಮಟ್ಟದಲ್ಲಿ ಕೃಷಿ ಕಾರ್ಮಿಕರ ಏಳಿಗೆಗಾಗಿ ಕಲ್ಯಾಣ ಮಂಡಳಿಯೊಂದನ್ನು ಸ್ಥಾಪಿಸಿ ಅದರ ಮೂಲಕ ನೊಂದಾಯಿತ ಕೃಷಿ ಕಾರ್ಮಿಕರಿಗೆ ಮದುವೆ, ಆರೋಗ್ಯ, ವಸತಿ ಮುಂತಾದ ಅವಶ್ಯಕತೆಗಳಿಗೆ ಧನ ಸಹಾಯ ಮತ್ತು ಸಾಲ ಸೌಲಭ್ಯವನ್ನು ಒದಗಿಸಬೇಕೆಂದು ಒತ್ತಾಯಿಸಿ ಕಾರ್ಮಿಕರು ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

ರಾಜ್ಯ ಸಮಿತಿ ಸದಸ್ಯರಾದ ಬಿ.ರವಿ, ಸೋಮವಾರಪೇಟೆ ತಾಲೂಕು ಆಶಾಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ನಾಗಮಣಿ ಹಾಗೂ ವಿವಿಧ ಘಟಕಗಳ ಸದಸ್ಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಬಳಿಕ ಜಿಲ್ಲಾಧಿಕಾರಿ ಹಾಗೂ ಎಸ್ಪಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.