ವೀರಾಜಪೇಟೆ, ನ. 17: ಕೊಡಗು ರಮ್ಯ ಪರಿಸರದ, ಪ್ರಕೃತಿ ಸೊಬಗಿನ ನಾಡು, ಇದು ಕಲಾವಿದರಿಗೆ ಸ್ಫೂರ್ತಿ ನೀಡುತ್ತದೆ. ಇದನ್ನೇ ಕುಂಚದಲ್ಲಿ ಅರಳಿಸಿದರೆ ಉತ್ತಮ ಕಲಾ ಚಿತ್ರ ಮೂಡಿ ಬರುತ್ತದೆ. ಕಲಾವಿದರಿಗೆ ಒತ್ತಾಸೆ ನೀಡಲು ಅಂತಹ ತಾಣಗಳನ್ನು ಆರಿಸಿ ಅಲ್ಲಿ ಚಿತ್ರ ಕಲಾ ಕಾರ್ಯಕ್ರಮ ಆಯೋಜಿಸಿ ಎಂದು ಹಿರಿಯ ವಕೀಲ ಎಸ್.ಆರ್. ಜಗದೀಶ್ ಅಭಿಪ್ರಾಯಪಟ್ಟರು.ಇಲ್ಲಿನ ಶ್ಯಾನ್ ಬೋಗ್ ಕಾಂಪ್ಲೆಕ್ಸ್ ಕಟ್ಟಡದಲ್ಲಿ ಸಾಧಿಕ್ ಆರ್ಟ್ ಗ್ಯಾಲರಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕಲಾ ಉತ್ಸವ 2018 ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ಕಲೆ, ಸಾಹಿತ್ಯಕ್ಕೆ ಕೊಡಗು ಮರುಭೂಮಿಯಂತೆ ಎನ್ನುತ್ತಾರೆ, ವಿದ್ಯಾವಂತರಿದ್ದರೂ (ಮೊದಲ ಪುಟದಿಂದ) ಕಲೆ, ಸಾಹಿತ್ಯ ಕಾರ್ಯಕ್ರಮಗಳಿಗೆ ಬರುವದಿಲ್ಲ ಹಾಗೂ ಪ್ರೋತ್ಸಾಹ ನೀಡುವದಿಲ್ಲ. ಆರ್ಥಿಕ ಮತ್ತು ಪ್ರೋತ್ಸಾಹ ನೀಡಿ ಕಲಾವಿದರಿಗೆ ವೇದಿಕೆ ಒದಗಿಸಬೇಕು. ಇಂದು ನಮ್ಮಲ್ಲಿ ಕಲಾವಿದರು ಅನೇಕರಿದ್ದಾರೆ. ಅವರಿಗೆ ನಾವು ಸದಾ ಜೊತೆಯಾಗಿ ನಿಂತು ಸಹಕಾರ ನೀಡಬೇಕು ಎಂದು ಜಗದೀಶ್ ಹೇಳಿದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಮುಖ್ಯ ಅತಿಥಿಗಳಾಗಿ ಮಾತನಾಡಿ, ಕಾವೇರಿ ತಪೋ ಭೂಮಿಯಲ್ಲಿ ಅನೇಕ ಮಹಾನ್ ಕಲಾವಿದರಿದ್ದಾರೆ. ಆದರೆ ಅವರಿಗೆ ವೇದಿಕೆಯ ಆಗತ್ಯವಿದೆ, ಆ ಮೂಲಕ ಅವರನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕಿದೆ. ವೇದಿಕೆಯಲ್ಲಿ ಇವರ ಕುರಿತು ಮಾತನಾಡುವ ಗಣ್ಯ ಮಹನೀಯರು ವೇದಿಕೆ ಇಳಿದ ಬಳಿಕ ಅವರನ್ನು ಮೆರೆಯುತ್ತಾರೆ. ಸರಕಾರ ಸಹ ಕಲಾವಿದರನ್ನು ಗುರುತಿಸಿ ಗೌರವಿಸಿ ಮನ್ನಣೆ ನೀಡುವಲ್ಲಿ ವಿಫಲವಾಗಿದೆÉ. ಶಾಲೆಯಲ್ಲಿ ಒಂದು ಗಂಟೆಯ ಡ್ರಾಯಿಂಗ್ ಕ್ಲಾಸ್ ನಡೆಸುತ್ತಾರೆ ಇಷ್ಟು ಸಾಲದು, ಫ್ರಾನ್ಸ್ ಮತ್ತು ಇಟಲಿಯಲ್ಲಿ ಪ್ರಾಥಮಿಕ ಹಂತದಿಂದ ಕಲಿಸುತ್ತಾರೆ; ಆ ಕೆಲಸ ಇಲ್ಲಿ ಆಗಬೇಕು. ಸರಕಾರ ಒಂದು ಪ್ರಾಧಿಕಾರವನ್ನು ರಚಿಸಿ ಆ ಮೂಲಕ ಕಲಾವಿದರಿಗೆ ಉತ್ತೇಜನ ನೀಡುವ ಕೆಲಸ ಮಾಡಬೇಕು. ಜನರು ಅವರನ್ನು ಉಳಿಸಿ ಬೆಳೆಸುವ ಕೆಲಸಕ್ಕೆ ಕೈ ಜೋಡಿಸಬೇಕು. ಕೊಡಗಿನಲ್ಲಿ ಅನೇಕ ದಾನಿಗಳಿದ್ದರೂ ಕಲೆ, ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಿಲ್ಲ ಎಂದರು.
ಪಟ್ಟಣ ಪಂಚಾಯಿತಿ ಸದಸ್ಯೆ ಮನೆಯಪಂಡ ದೇಚಮ್ಮ ಕಾಳಪ್ಪ ಮುಖ್ಯ ಅತಿಥಿಗಳಾಗಿ ಮಾತನಾಡಿ, ಹಿಂದೆ ಪಟ್ಟಣದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿದ್ದ ಎಂ.ಕೆ. ಪೂವಯ್ಯ ಅವರು ಕಾರು ನಿಲ್ದಾಣದಲ್ಲಿ ಒಂದು ಸಾರ್ವಜನಿಕ ವೇದಿಕೆಯನ್ನು ಮಾಡಿದ್ದರು.ಅದನ್ನು ನಡೆಸಿಕೊಂಡು ಹೋಗಲು ವಿಕ್ಟೋರಿಯ ಕ್ಲಬ್‍ನವರಿಗೆ ಅವಕಾಶ ನೀಡಿದರು. ಆದರೆ ಆ ವೇದಿಕೆ ಇಂದು ಸಾರ್ವಜನಿಕರಿಗೆ ಬಳಕೆ ಆಗುತ್ತಿಲ್ಲ. ಆದರಿಂದ ಪ.ಪಂ. ಕಲಾವಿದರಿಗೆ ಪ್ರಾತಿನಿಧ್ಯ ನೀಡಲು ಆ ವೇದಿಕೆ ಬಳಕೆಯಾಗುವಂತೆ ಮಾಡಲು ನಿರ್ಧಾರ ಮಾಡಿದ್ದೇವೆ ಎಂದರು.
ಕೊಡವ ಸಮಾಜದ ಅಧ್ಯಕ್ಷ ವಾಂಚೀರ ನಾಣಯ್ಯ ಮಾತನಾಡಿ ಕಲಾವಿದರಿಗೆ ಮುಖ್ಯವಾಗಿ ಏಕಾಗ್ರತೆ ಬೇಕು.ಜೊತೆಗೆ ಪ್ರೋತ್ಸಾಹ ಹಾಗೂ ಅವಕಾಶಗಳು ದೊರೆಯುವಂತಾಗಬೇಕು, ಕಲೆಯನ್ನು ಉಳಿಸಿ ಬೆಳೆಸಲು ಎಲ್ಲರೂ ಕೈಜೋಡಿಸಬೇಕು ಎಂದರು.
ಪಟ್ಟಣ ಪಂಚಾಯಿತಿ ಸದಸ್ಯರಾದ ಮಹ್ಮದ್ ರಾಫಿ ಮತ್ತು ಡಿ.ಪಿ.ರಾಜೇಶ್, ಬಿಜೆಪಿ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಜೋಕಿಂ ಮಾತನಾಡಿದರು.
ಶಿಬಿರ ಆಯೋಜಕ, ಚಿತ್ರ ಕಲಾವಿದ ಸಾಧಿಕ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಮ್ಮುಣಿಚಂಡ ಪ್ರವೀಣ್, ಹಿರಿಯ ಚಿತ್ರ ಕಲಾವಿದ ಬಿ.ಆರ್. ಸತೀಶ್, ಕಲಾವಿದ ಮಾಲ್ದಾರೆಯ ಬಾವ ಮುಂತಾದವರು ಉಪಸ್ಥಿತರಿದ್ದರು.
ಕಲಾ ಉತ್ಸವ ತಾ. 17ರಿಂದ 21ರವರೆಗೆ ನಡೆಯಲಿದೆ. ಕಲಾವಿದರುಗಳಾದ ಬಿ.ಆರ್.ಸತೀಶ್, ಪ್ರಸನ್ನ ಕುಮಾರ್, ಸುರೇಶ್ ಕೆ., ಉ.ರಾ.ನಾಗೇಶ್, ರೂಪೇಶ್ ನಾಣಯ್ಯ, ರಾಮ್ ಗೌತಮ್, ಅರುಣ ಗೌತಮ್, ಆರತಿ ಸೋಮಯ್ಯ, ಕ್ಲಿಪರ್ಡ್ ಡಿಮೆಲ್ಲೋ, ಬಾವಾ ಮಾಲ್ದಾರೆ, ಜಯರಾಮ್, ಸಜಿತ್ ಕುಮಾರ್, ಚಂದ್ರಶೇಕರ್, ಪ್ರವೀಣ್ ವರ್ಣಕುಠೀರ, ಮುಕುಂದನ್, ಸಚಿನ್ ಬೆಳ್ಯಪ್ಪ, ಸಾದಿಕ್ ಹಂಸ ಅವರ ಚಿತ್ರಗಳನ್ನು ಇದೇ ಸಂದರ್ಭ ಪ್ರದರ್ಶಿಸಲಾಯಿತು.
ವಿವಿಧ ಭಾಗದ ಚಿತ್ರ ಕಲಾವಿದರು ತಮ್ಮ ಕಲಾ ನೈಪುಣ್ಯದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಜಿಲ್ಲೆ ಹಾಗೂ ರಾಜ್ಯ ಮಟ್ಟದ ಕಲಾವಿದರು ಚಿತ್ರಕಲಾ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ.
ಪಟ್ಟಣದ ಎಸ್.ಎಸ್. ರಾಮಮೂರ್ತಿ ರಸ್ತೆಯಲ್ಲಿರುವ ಸಾದಿಕ್ ಆರ್ಟ್ ಲಿಂಕ್ಸ್ ಕಲಾಭೂಮಿಯಲ್ಲಿ ಬೆಳಿಗ್ಗೆ 1 ರಿಂದ ಸಂಜೆ 5 ಗಂಟೆಯವರೆಗೆ ಪ್ರದರ್ಶನ ಕಾರ್ಯ ನಡೆಯಲಿದೆ