ಕೂಡಿಗೆ, ನ. 16: ಇಲ್ಲಿಗೆ ಸಮೀಪದ ಮದಲಾಪುರ, ಬ್ಯಾಡಗೊಟ್ಟ ಮಾರ್ಗವಾಗಿ ಸೀಗೆಹೊಸೂರು, ಯಲಕನೂರು ರಸ್ತೆ ಸೋಮವಾರಪೇಟೆಗೆ ತೆರಳಲು ಹತ್ತಿರವಾದ ರಸ್ತೆಯಾಗಿದ್ದು, ಈ ರಸ್ತೆಯು ತೀರಾ ಹದಗೆಟ್ಟಿರುವದಲ್ಲದೆ, ದ್ವಿಚಕ್ರ ವಾಹನ, ಸಾರ್ವಜನಿಕರು ತಿರುಗಾಡಲು ಸಾಧ್ಯವಾಗದ ಸ್ಥಿತಿಯಾದ ಈ ರಸ್ತೆ ಕಳೆದ 10 ವರ್ಷಗಳಿಂದಲು ಒಂದಲ್ಲೊಂದು ಭರವಸೆಗಳ ನಡುವೆ ಸಾಗುತಾ ಬಂದಿದ್ದರೂ ರಸ್ತೆ ಕಾಮಗಾರಿಯ ಮುಕ್ತಿ ಕಾಣದಂತಾಗಿದೆ.

ಇನ್ನೊಂದೆಡೆ ಈ ರಸ್ತೆಯಲ್ಲಿ ದಿನಂಪ್ರತಿ ನೂರಾರು ವಾಹನಗಳು ಓಡಾಡುವದರ ಜೊತೆಗೆ ಯಲಕನೂರು, ಸೀಗೆಹೊಸೂರು ಸಮೀಪದಲ್ಲಿ ಕಲ್ಲುಕೋರೆಗಳಿದ್ದು, ಕಲ್ಲುಗಳನ್ನು ತುಂಬಿಸಿದ 50 ಕ್ಕೂ ಅಧಿಕ ಲಾರಿಗಳು ಈ ಮಾರ್ಗದಲ್ಲೇ ಚಲಿಸುವದರಿಂದ ಸಾಧಾರಣವಾಗಿ ಇದ್ದ ರಸ್ತೆ ಕಳೆದ 7 ವರ್ಷಗಳಿಂದ ತೀರಾ ಹದಗೆಟ್ಟಿದೆ. ಗಣಿಗಾರಿಕೆ ನಡೆಯುತ್ತಿರುವದರಿಂದ ಕಲ್ಲು ತುಂಬಿದ ಲಾರಿಗಳು ಚಲಿಸುವ ದರಿಂದ ಕಲ್ಲುಕೋರೆಯಿಂದ ಮುಖ್ಯ ರಸ್ತೆಗೆ ಬರುವ ಮಾರ್ಗದಲ್ಲಿ 6 ಗ್ರಾಮಗಳು ಬರುತ್ತವೆ.

ಈ ಗ್ರಾಮಗಳ ರಸ್ತೆ ಬದಿಯ ಮನೆಗಳು ಧೂಳುಮಯವಾಗುವದರ ಜೊತೆಗೆ ಧೂಳಿನಿಂದಾಗಿ ಈ ವ್ಯಾಪ್ತಿಯ ಜನರು ಕ್ಷಯರೋಗದಿಂದ ನರಳುತ್ತಿರುವ ಬಗ್ಗೆ ಸಾರ್ವಜನಿಕರು ಸ್ಥಳಕ್ಕೆ ತೆರಳಿದ ಸುದ್ದಿಗಾರರಿಗೆ ತಿಳಿಸಿದ್ದಾರೆ. ರಸ್ತೆ ಬದಿಯ ಮನೆಗಳು ಭಾರಿ ಕಲ್ಲು ತುಂಬಿದ ಲಾರಿಗಳಿಂದಾಗಿ ಮನೆಯ ಗೋಡೆಗಳು ಬಿರುಕುಬಿಟ್ಟು ಬೀಳುವ ಹಂತ ತಲಪಿದೆ.

ಈ ಮಾರ್ಗದಲ್ಲಿ ದಿನಂಪ್ರತಿ ಖಾಸಗಿ ಬಸ್ ಸೇರಿದಂತೆ ನೂರಾರು ದ್ವಿಚಕ್ರ ವಾಹನಗಳು ಚಲಿಸುತ್ತವೆ. ಆದರೆ ಸಮೀಪದ ಕೂಡಿಗೆ, ಕುಶಾಲನಗರಕ್ಕೆ ತಮ್ಮ ವ್ಯವಹಾರಕ್ಕೆ ಬರುವ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಈ ಧೂಳಿನಿಂದ ದಿನಂಪ್ರತಿ ನರಳುವ ಯಾತನೆಯಾಗಿದೆ.

ಸಚಿವರ ಆದೇಶದನ್ವಯ ಕಳೆದ 2 ವರ್ಷದ ಹಿಂದೆ 2 ಕಿ.ಮೀ.ವರೆಗೆ ರಸ್ತೆಗೆ ಡಾಂಬರು ಹಾಕಿದರೂ, ಇನ್ನುಳಿದ ಪಿಪಾಯಿಹಳ್ಳದಿಂದ ಮದಲಾಪುರದ ವರೆಗೆ ಯಾವದೇ ಡಾಂಬರು ಕಾಮಗಾರಿಯನ್ನು ಕೈಗೊಂಡಿಲ್ಲ. ಅಲ್ಲದೆ, ಕಲ್ಲುಕೋರೆ ಯಿಂದ ಲಾರಿಗಳು ಸೀಗೆಹೊಸೂರು ಮಾರ್ಗವಾಗಿ ಕಣಿವೆಯ ಹತ್ತಿರದ ಹೆದ್ದಾರಿಯು ಲೋಕೋಪಯೋಗಿ ರಸ್ತೆಗೆ ಸೇರಿದ ರಸ್ತೆಯಾಗಿದೆ. ಈ ಮಾರ್ಗದಲ್ಲಿ ಚಲಿಸದೆ ಬ್ಯಾಡಗೊಟ್ಟ, ಶಿರಹೊಳಲು ಮತ್ತು ಮದಲಾಪುರ ರಸ್ತೆಯಲ್ಲಿ ಲಾರಿಗಳು ಚಲಿಸುವದರಿಂದ ರಸ್ತೆಯು ಗುಂಡಿ ಬಿದ್ದು ಹಾಳಾಗಿದ್ದು, ಇದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಚಾಲಕರಿಗೆ ತೀರಾ ತೊಂದರೆಯಾಗುತ್ತಿದೆ ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಅನೇಕ ಪತ್ರ ವ್ಯವಹಾರ ನಡೆಸಿದರೂ, ಚುನಾವಣೆಯ ಸಂದರ್ಭ ಭರವಸೆ ನೀಡಿದ ಜನಪ್ರತಿನಿಧಿಗಳು ಇತ್ತ ಗಮನಹರಿಸುತ್ತಿಲ್ಲ. ರಸ್ತೆಯಲ್ಲಿ ತಿರುಗಾಡಲು ಸಾಧ್ಯವಾಗದೆ, ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಧೂಳುಮಯವಾಗಿ ಶಾಲೆಗೆ ತೆರಳದೆ ಮನೆಯತ್ತ ವಾಪಾಸ್ಸು ತೆರಳುತ್ತಿರುವರು ಕಂಡುಬರುತ್ತಿದೆ. ಅಲ್ಲದೆ, ಧೂಳಿನಿಂದಾಗಿ ಅನೇಕ ಜನರು ಅಸ್ವಸ್ಥಗೊಂಡು ಆಸ್ಪತ್ರೆಗೆ ಸೇರಿರುವ ಘಟನೆ ನಡೆದಿದೆ ಎಂದು ಈ ವ್ಯಾಪ್ತಿಯ ಸಾರ್ವಜನಿಕರು ಸ್ಥಳಕ್ಕೆ ತೆರಳಿದ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ರಸ್ತೆಗೆ ಹೊಂದಿಕೊಂಡಂತೆ ದಿಡ್ಡಳ್ಳಿ ಪುನರ್ವಸತಿ ಕೇಂದ್ರದಲ್ಲಿ ವಾಸವಿರುವ ಆದಿವಾಸಿಗಳು ಸಹ ಇದೇ ಮಾರ್ಗದಲ್ಲಿಯೇ ತಿರುಗಾಡುವದರಿಂದ ಅವರಿಗೂ ಕೂಡಾ ಧೂಳಿನಿಂದ ಅನಾರೋಗ್ಯ ದಿಂದ ಬಳಲುವಂತಾಗಿದೆ. ಈ ರಸ್ತೆಯ ಕೆಲ ಕಿ.ಮೀಗಳ ಕಾಮಗಾರಿಯು ನಡೆಯುತ್ತಿದೆ.

ಆದಷ್ಟು ಬೇಗ ಸಿಮೆಂಟ್ ರಸ್ತೆಯನ್ನು ನಿರ್ಮಿಸುವ ಮೂಲಕ ಗ್ರಾಮಗಳನ್ನು ಧೂಳಿನಿಂದ ಮುಕ್ತಿಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲಿಸಿ ತುರ್ತಾಗಿ ರಸ್ತೆ ಕಾಮಗಾರಿಯನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ