ಪೊನ್ನಂಪೇಟೆ, ನ. 16: ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದ ನಿಕಟಪೂರ್ವ ಅಧ್ಯಕ್ಷರೂ, ‘ಬದುಕಲು ಕಲಿಯಿರಿ’ ಗ್ರಂಥಕಥರೂ, ಅದ್ಭುತವಾಗಿ ಹಾಗೂ ಆಧ್ಯಾತ್ಮಿಕ ಸಾಧನೆಯ ಮೇರು ವ್ಯಕ್ತಿತ್ವದ ಸ್ವಾಮಿ ಜಗದಾತ್ಮಾನಂದ ಮಹಾರಾಜ್ ಅವರ ಪಾರ್ಥಿವ ಶರೀರಕ್ಕೆ ಇಲ್ಲಿನ ಹಿಂದೂ ರುದ್ರಭೂಮಿಯಲ್ಲಿ ಈ ಸಂಜೆ ಅಗ್ನಿ ಸ್ಪರ್ಶದೊಂದಿಗೆ ಪಂಚಭೂತಗಳಲ್ಲಿ ಲೀನಗೊಂಡರು.ನಿನ್ನೆ ಮೈಸೂರಿನಲ್ಲಿ ಬ್ರಹ್ಮೈಕ್ಯರಾದ ಪೂಜ್ಯರ ಪಾರ್ಥಿವ ಶರೀರವನ್ನು ಇಂದು ಮಧ್ಯಾಹ್ನದ ವೇಳೆಗೆ ಪುಷ್ಪಾಲಂಕೃತ ವಾಹನದಲ್ಲಿ ಇಲ್ಲಿನ ಶ್ರೀ ರಾಮಕೃಷ್ಣ ಶಾರದಾಶ್ರಮದ ಸಭಾಂಗಣಕ್ಕೆ ತಂದು ಸಾರ್ವಜನಿಕ ದರ್ಶನಕ್ಕೆ ಇರಿಸಲಾಯಿತು.ಮಾಧ್ಯಮದೊಂದಿಗೆ ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಬೋಧಸ್ವರೂಪ ನಂದಾ ಮಹಾರಾಜ ಮಾತನಾಡಿ, ಗಂಟಲಿನಲ್ಲಿ ಕ್ಯಾನ್ಸರ್ ಬಂದ ನಂತರ ಉಸಿರಾಟದ ತೊಂದರೆಯಿತ್ತು. ಬಾಯಿ ಸುತ್ತಲೂ ಚರ್ಮ ಸೂಕ್ಷ್ಮತೆಯಿಂದ ಇತ್ತು. ಇದರಿಂದಾಗಿ ಉಸಿರಾಟದ ಸಮಸ್ಯೆ ಹೆಚ್ಚಾಗಿ ಕಾಡುತ್ತಿತ್ತು. ನಿನ್ನೆಯಷ್ಟೇ ಆಸ್ಪತ್ರೆಯ ವಿಶೇಷ ವಾರ್ಡ್‍ಗೆ ಕರೆತರಲಾಗಿತ್ತು. ವೆಂಟಿಲೇಟರ್ ಇಲ್ಲದೆ ಉಸಿರಾಡುತ್ತಿದ್ದರು. ಚೈತನ್ಯದಿಂದ ಇದ್ದರು. ಎಲ್ಲಾ ಸೇವಕರಿಗೂ ಧನ್ಯವಾದ ಹೇಳಿದ್ದರು ಎಂದು ನೆನಪಿಸಿಕೊಂಡರು. ಸಂತರು ಸನ್ಯಾಸ ಸ್ವೀಕರಿಸುವ ಸಂದರ್ಭವೇ ಶ್ರಾದ್ಧ ಕಾರ್ಯಗಳು ನಡೆದಿರುತ್ತವೆ. ಆದರೂ 13ನೇ ದಿನದಲ್ಲಿ ಶ್ರಾದ್ಧ ನಡೆಸಲಾಗುವದು ಎಂದರು.
ಬಂದ್, ಮೆರವಣಿಗೆ : ನಿಧನದ ಗೌರವಾರ್ಥ ಪೊನ್ನಂಪೇಟೆ ಪಟ್ಟಣ ಸಂಜೆ 5 ರಿಂದ 7 ಗಂಟೆವರೆಗೆ ಬಂದ್ ಮಾಡಿ ಗೌರವ ಸಲ್ಲಿಸಲಾಯಿತು. ವರ್ತಕರು ಆಶ್ರಮಕ್ಕೆ ಬಂದು ದರ್ಶನ ಪಡೆದರು. ನಂತರ ಪಟ್ಟಣದಲ್ಲಿ ಮೆರವಣಿಗೆ ಮೂಲಕ ಕಿರುಗೂರು ರಸ್ತೆಯಲ್ಲಿರುವ ರುದ್ರಭೂಮಿಗೆ ಕೊಂಡೊಯ್ಯಲಾಯಿತು. ಎಲ್ಲಾ ವರ್ಗದವರೂ ಕೂಡ ಆಗಮಿಸಿ ದರ್ಶನ ಪಡೆದರು. ಸ್ವಾಮೀಜಿ ಗೌರವಾರ್ಥ ಕೊಡಗಿನ ವಾಲಗ ಮೊಳಗಿತು; ಅಂತ್ಯ ಸಂಸ್ಕಾರ ವೇಳೆ ಕುಶಾಲ ತೋಪು ಸಿಡಿಸಲಾಯಿತು.
ಮಧ್ಯಾಹ್ನ 1.30 ಸುಮಾರಿಗೆ ಆನೆಚೌಕೂರು ಗೇಟ್ ಮೂಲಕ ಮೃತದೇಹ ಕೊಡಗು ಜಿಲ್ಲೆಯನ್ನು ಪ್ರವೇಶಿಸಿತು. ನಂತರ ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮಕ್ಕೆ ತರಲಾಯಿತು. ಆವರಣದಲ್ಲಿ ಗೀತಾ ಉಪನಿಷತ್ತು, ಭಜನೆ ಹಾಡಿನ ಮೂಲಕ ಪ್ರದಕ್ಷಿಣೆ ಮಾಡಲಾಯಿತು. ಶ್ರೀರಾಮ ಜಯಘೋಷ ಎಲ್ಲೆಲ್ಲೂ ಮೊಳಗುತ್ತಿತ್ತು.
2011ರಲ್ಲಿ ಪೊನ್ನಂಪೇಟೆ ರಾಮಕೃಷ್ಣ ಆಶ್ರಮಕ್ಕೆ ಸೇರಿದ್ದ ಜಗದಾತ್ಮನಂದಾಜೀ ಅವರು 1 ದಶಕಗಳ ಕಾಲ ಆಶ್ರಮದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಒಂದುವರೆ ದಶಕಗಳಷ್ಟು ಕಾಲ ಪೊನ್ನಂಪೇಟೆಯಲ್ಲಿಯೇ ಉಳಿದಿದ್ದ ಸ್ವಾಮೀಜಿ ಅವರ ಸಂಬಂದದ ಕೊಂಡಿ ಸಾವಿನ ಮೂಲಕ ಕಳಚಿದಂತಾಗಿದೆ.
ಪಂಚ ಭೂತಗಳಲ್ಲಿ ಲೀನ
ನಾಡಿನ ಸಾವಿರಾರು ಭಕ್ತರು ಶ್ರೀ ರಾಮಕೃಷ್ಣ ಶಾರದಾಶ್ರಮದ
ಶ್ರೀ ಜಗದಾತ್ಮನಂದಾಜೀ ಮಹಾರಾಜ್ ಅವರ ಅಂತಿಮ ದರ್ಶನ ಪಡೆದರು. ನಂತರ ಪಾರ್ಥೀವ ಶರೀರವನ್ನು ಆಶ್ರಮದ ಮೂರು ಸುತ್ತು ಪ್ರದಕ್ಷಿಣೆ ಮಾಡಲಾಯಿತು.
ನಂತರ ತೆರೆದ ಅಲಂಕೃತ ವಾಹನದಲ್ಲಿ ಪಾರ್ಥೀವ ಶರೀರವನ್ನು ಪೊನ್ನಂಪೇಟೆಯ ಮುಖ್ಯರಸ್ತೆಯಲ್ಲಿ ಮೆರವಣಿಗೆ ಮೂಲಕ ಕೊಂಡೊಯ್ದು ಹಿಂದೂ ರುದ್ರ ಭೂಮಿಗೆ ತರಲಾಯಿತು. ರಸ್ತೆಯ ಉದ್ದಗಲಕ್ಕೂ ಸಾರ್ವಜನಿಕರು ಸಾಲುಗಟ್ಟಿ ನಿಂತಿದ್ದರು.
ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಭೋಧ ಸ್ವರೂಪಾನಂದಾ ಮಹಾರಾಜ್, ಜಗದಾತ್ಮನಂದಾಜೀ ಸಹೋದರ ಬಿ.ವಿ.ಕೇದಿಲಾಯ ಹಾಗೂ 7 ಯತಿವರ್ಯರು ಹಿಂದೂ ಸಂಪ್ರದಾಯದಂತೆ ಅಗ್ನಿ ಸ್ಪರ್ಶ ಮಾಡಿದರು.
ತಾಲೂಕು ಆಡಳಿತದ ಪರವಾಗಿ ತಹಶೀಲ್ದಾರ್ ಗೋವಿಂದರಾಜ್, ಶಾಸಕ ಕೆ.ಜಿ. ಬೋಪಯ್ಯ, ಕೊಡಗು ಜಾನಪದ
(ಮೊದಲ ಪುಟದಿಂದ) ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ, ಖಜಾಂಚಿ ಸಂಪತ್‍ಕುಮಾರ್, ಭಾರತೀಯ ವಿದ್ಯಾಭವನದ ಗೌ. ಅಧ್ಯಕ್ಷ ಕೆ.ಪಿ. ಉತ್ತಪ್ಪ, ಆರ್.ಎಸ್.ಎಸ್. ಸಂಘಚಾಲಕ್ ಚಕ್ಕೇರ ಮನು ಕಾವೇರಪ್ಪ, ಗ್ರಾ.ಪಂ. ಅಧ್ಯಕ್ಷೆ ಸುಮಿತಾ ಜಿ.ಪಂ. ಸದಸ್ಯೆ ಶ್ರೀಜಾ, ವಿವಿಧ ಮಠಾಧೀಶರು, ಪೊನ್ನಂಪೇಟೆಯ ಮುಸ್ಲಿಂ ಧರ್ಮಗುರುಗಳ ಸಹಿತ ಹಲವು ಸಂಘ ಸಂಸ್ಥೆಗಳ ಪ್ರತಿನಿಧಿಗಳು, ವಿವಿಧ ಶಾಲಾ ಮಕ್ಕಳು ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ, ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಲೋಕೇಶ್ ಸಾಗರ್, ರಾಣೆಬೆನ್ನೂರು ಮಠದ ಪ್ರಕಾಶಾನಂದಾ ಮಹಾರಾಜ್, ಮೈಸೂರುವಿನ ಯುಕ್ತೇಶಾನಂದಾ ಸ್ವಾಮೀಜಿ, ಮಂಗಳೂರುವಿನ ಏಕಗಾಮ್ಯಾನಂದಾ ಸ್ವಾಮೀಜಿ, ಶಿವಮೊಗ್ಗದ ವಿನಯಾನಂದಾ ಸೇರಿದಂತೆ ಅನೇಕ ಗಣ್ಯರು ಆಶ್ರಮಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆದು ನೂರಾರೂ ಶಿಷ್ಯಂದಿರನ್ನು ಬೆಳೆಸಿರುವ ಸ್ವಾಮೀಜಿ ಬದುಕು ನಮಗೆಲ್ಲ ಮಾದರಿ, ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸಿದರು.
ಶ್ರೀಗಳ ಅಗಲಿಕೆ ಸಂತ ಕುಟುಂಬಕ್ಕೆ ತುಂಬಲಾರದ ನಷ್ಟ ಸ್ವಾಮೀಜಿ ಎಲ್ಲಾ ವರ್ಗದವರ ಪ್ರೀತಿಗೆ ಪಾತ್ರರಾಗಿದ್ದರು. ಇಳಿ ವಯಸ್ಸಿನಲ್ಲಿಯೂ ದೇಶ, ಧರ್ಮದ ಬಗ್ಗೆ ಚಿಂತನೆ ಮಾಡುತ್ತಿದ್ದರು. ಇಂದಿನ ಯುವಜನತೆ ದೇಶಾಭಿಮಾನ, ಧರ್ಮಭಿಮಾನದಿಂದ ವಿಮುಖವಾಗುತ್ತಿರುವ ಬಗ್ಗೆ ಕಳವಳ ಕೂಡ ಅವರಲ್ಲಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ ಅವರ ನಿಶ್ಚಲತೆ ಇಂದಿನ ಯುವಕರಿಗೆ ಪ್ರೇರೇಪಣೆಯಾಗಿದೆ ಎಂದು ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನುಡಿದರು.
ಸ್ವಾಮಿ ಜಗದಾತ್ಮಾನಂದರ ಒಡನಾಟದಿಂದ ಭಗವಂತನ ಸಾನಿಧ್ಯವೇ ದೊರೆತ ಆನಂದದಲ್ಲಿದ್ದ ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮ ಭಕ್ತಾದಿಗಳಿಗೀಗ ದುಃಖದ ಕಾರ್ಮೋಡ ಕವಿದಿದೆ.
ಆಧ್ಯಾತ್ಮಿಕತೆಯ ಬಗ್ಗೆ ಒಲವು ಮೂಡಿಸಿ ಭಗವಂತನಲ್ಲಿ ಭಕ್ತಿ ಹೆಚ್ಚಿಸಲು ಕಾರಣರಾಗುತ್ತಿದ್ದ ಸ್ವಾಮಿ ಜಗದಾತ್ಮಾನಂದ ಅವರ ಅಗಲಿಕೆ ಭಕ್ತಾದಿಗಳಿಗೆ ತುಂಬಲಾರದ ನಷ್ಟ ಉಂಟುಮಾಡಿದೆ. ಇವರು ‘ಬದುಕಲು ಕಲಿಯಿರಿ ಕೃತಿಯ’ ಮೂಲಕ ಯುವ ಸಮುದಾಯವನ್ನು ಬಡಿದೆಚ್ಚರಿಸಿ ಸ್ಪೂರ್ತಿಯಾಗಿಸಿದ್ದರು.
ಆಶ್ರಮದಲ್ಲಿದ್ದ ಅವರ ಕೋಣೆಯಲ್ಲಿ ನೀರವ ಮೌನ ಆವರಿಸಿದೆ; ಅವರು ಬಳಸುತ್ತಿದ್ದ ತಂಬೂರಿ ವೀಣೆ, ಲೇಖನಿ, ಪುಸ್ತಕಗಳು, ಅವರು ವಿಶ್ರಾಂತಿ ಪಡೆಯುತ್ತಿದ್ದ ಹಾಸಿಗೆ ಅಧ್ಯಯನಕ್ಕೆ ಕುಳಿತುಕೊಳ್ಳುತ್ತಿದ್ದ ಕುರ್ಚಿ ಇದೀಗ ಅನಾಥವಾದಂತೆ ಬಾಸವಾಗುತ್ತಿದೆ.
ಶುಕ್ರವಾರ ಬೆಳಿಗ್ಗಿನಿಂದಲೇ ಪೊನ್ನಂಪೇಟೆ, ಗೋಣಿಕೊಪ್ಪ ಪಟ್ಟಣಗಳು ಮೋಡಕವಿದ ವಾತಾವರಣದಿಂದ ಪ್ರಕೃತಿಯು ಸ್ವಾಮೀಜಿ ಅಗಲಿಕೆಗೆ ಮಿಡಿದಂತ್ತಿದ್ದು, ಸನ್ಯಾಸಿ ಜೀವನ ಪ್ರಾರಂಭಿಸಿ 58 ವರ್ಷಗಳ ಕಾಲ ಶ್ರೀ ರಾಮಕೃಷ್ಣರ ನಾಮ ಜಪಿಸುತ್ತಾ; ಅವರ ತತ್ವಗಳನ್ನು ಅಳವಡಿಸಿಕೊಂಡು ಶಿಸ್ತುಬದ್ದ ಜೀವನ ನಡೆಸಿದ 89ರ ಇಳಿ ವಯಸ್ಸಿನ ಸ್ವಾಮಿ ಜಗದಾತ್ಮಾನಂದರು ಜನರ ನೋವುಗಳಿಗೆ ಮಿಡಿಯುವ ಸರಳ ಹೃದಯಿಯಾಗಿದ್ದರು.
ನಿತ್ಯ ಮುಂಜಾನೆ 5ರ ಹೊತ್ತಿಗೆ ಎದ್ದು ನಿತ್ಯ ಕರ್ಮಗಳೊಂದಿಗೆ ಪೂಜಾ ಭಜನೆ ಕಾರ್ಯಗಳನ್ನು ನಡೆಸುತ್ತಿದ್ದ ಇವರು ತಮ್ಮ ಅನಾರೋಗ್ಯದಲ್ಲೂ ಅಧ್ಯಯನವನ್ನು ನಡೆಸುತ್ತಿದ್ದರು. ಆಶ್ರಮಕ್ಕೆ ಬಂದ ಭಕ್ತಾದಿಗಳೊಂದಿಗೆ ಮಾತನಾಡುತ್ತಾ ಅವರ ಕಷ್ಟಸುಖಗಳನ್ನು ತಿಳಿದು ಅದಕ್ಕೆ ಪರಿಹಾರ ನೀಡಲು ಮುಂದಾಗುತ್ತಿದ್ದ ಇವರು ಸೇವೆ ಮತ್ತು ತಪೋಮಯ ಜೀವನ ನಡೆಸುತ್ತಿದ್ದರು. ಲಕ್ಷಾಂತರ ಭಕ್ತಾದಿಗಳನ್ನು ಹೊಂದಿದ್ದ ಇವರು 15 ವರ್ಷಗಳ ಕಾಲ ಪೊನ್ನಂಪೇಟೆ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಇವರ ಅವದಿಯಲ್ಲಿ ರಾಮಕೃಷ್ಣ ಮಠದ ಭಾವೈಕ್ಯ ಮಂದಿರ 2009 ರಲ್ಲಿ ಲೋಕಾರ್ಪಣೆಗೊಂಡಿತ್ತು. ಬುಡಕಟ್ಟು ಜನಾಂಗದ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದರು; ಸಮೀಪದ ಕೃಷ್ಣ ಕಾಲೋನಿಯನ್ನು ಅಭಿವೃದ್ಧಿಪಡಿಸಲು ಮದ್ಯಮುಕ್ತ ಗ್ರಾಮವಾಗಿ ಪರಿವರ್ತಿಸಿ ಆರೋಗ್ಯ, ನೈರ್ಮಲ್ಯ, ಸ್ವಉದ್ಯೋಗ, ಶಿಕ್ಷಣ ಸೇರಿದಂತೆ ಹಲವು ಪ್ರಗತಿಪರ ಕಾರ್ಯಗಳನ್ನು ಕೈಗೆತ್ತಿಕೊಂಡು ಜನಸೇವೆಯೇ ಜನಾರ್ದನ ಸೇವೆ ಎಂದು ಬದುಕಿದ ದಿವ್ಯತ್ರಯರಾಗಿದ್ದರು.
ಮಕ್ಕಳೆಂದರೆ ಇವರಿಗೆ ಎಲ್ಲಿಲ್ಲದ ಪ್ರೀತಿ ಮಕ್ಕಳನ್ನು ದೇವರಂತೆಯೇ ಕಾಣುತ್ತಿದ್ದ ಇವರು ಆಶ್ರಮಕ್ಕೆ ಯಾವದೇ ಶಾಲೆಯ ಮಕ್ಕಳು ಬಂದರೂ ತಮ್ಮ ವಿಶ್ರಾಂತ ಕೋಣೆಯಿಂದ ಪ್ರಸಾದ ಹಂಚುತ್ತಿದ್ದರು.
ಆಶ್ರಮದ ಕಿರಿಯ ಸನ್ಯಾಸಿಗಳು ಹೇಳುತ್ತಿದ್ದಂತೆ; ಶಿಸ್ತುಬದ್ದ ಸಮಯ ಪಾಲನೆಯ ಯೋಗಿ ಅನಾರೋಗ್ಯದಲ್ಲೂ ತಮ್ಮ ನಿತ್ಯದ ನಿಯಮ ಪಾಲನೆಯನ್ನು ಬಿಡುತ್ತಿರಲ್ಲಿಲ್ಲ. ಸದಾ ಭಗವತ್ ಭಾವದಲ್ಲೇ ಇರುತ್ತಿದ್ದ ಇವರು ನಿರ್ಭಯದ ಜೀವಿಯಾಗಿದ್ದರು ಎಂದು ಆಶ್ರಮದ ಕಿರಿಯ ಸ್ವಾಮಿ ತಪೋಯಜ್ಞಾನಂದಾಜೀ ಅನುಭವ ಹಂಚಿಕೊಂಡಿದ್ದಾರೆ.
ಮಧ್ಯಾಹ್ನ 2 ರಿಂದ 4.50 ರ ತನಕ ಭಕಾದಿಗಳ ದರ್ಶನಕ್ಕೆ ಇಟ್ಟು ಸಂಜೆ 5 ಗಂಟೆಗೆ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಬಸವೇಶ್ವರ ದೇವಸ್ಥಾನದ ಹೊರ ಭಾಗದಿಂದ ಮೂರು ಸುತ್ತು ಬಂದು ಪೊನ್ನಂಪೇಟೆ ಹಿಂದೂ ರುದ್ರಭೂಮಿಗೆ ಸಾಗಿಸಲಾಯಿತು. ನಂತರ ರಾಮಕೃಷ್ಣ ಮಠದ ನಿಯಮದಂತೆ ದೇಹಕ್ಕೆ ಅಗ್ನಿ ಸ್ಪರ್ಶ ಮಾಡಲಾಯಿತು.
ರಾಮಕೃಷ್ಣ ಮಠದ ನಿಯಮದಂತೆ ಗೋರಿ ಪೂಜೆ ಮಾಡುವದು ನಿಷೇದ ಹೀಗಾಗಿ ಆಶ್ರಮಕ್ಕೆ ಸಂಬಂದಪಟ್ಟಂತೆ ಬಹಳಷ್ಟು ಸ್ಥಳವಿದ್ದರೂ ಜಗದಾತ್ಮಾನಂದರ ದೇಹವನ್ನು ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲು ಕ್ರಮ ಕೈಗೊಳ್ಳಲಾಯಿತು. ಸ್ವಾಮಿಯ ದೇಹವನ್ನು ತಮ್ಮ ಸ್ಥಳದಲ್ಲಿ ಹಾಕುತ್ತೇವೆ; ನಂತರ ಬೃಂದಾವನ ನಿರ್ಮಿಸುತ್ತೇವೆ ಎಂದು ಹಲವು ಭಕ್ತಾಧಿಗಳು ಮುಂದೆ ಬಂದರೂ ಮಠದ ನಿಯಮವನ್ನು ಪಾಲಿಸುವಂತೆ ಪೊನ್ನಂಪೇಟೆ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಭೋದಸ್ವರೂಪಾನಂದಾಜಿ ಮನವಿ ಮಾಡಿದರು.
ಅಂತಿಮ ಗೌರವಕ್ಕಾಗಿ ಪೊನ್ನಂಪೇಟೆ ಪಟ್ಟಣವನ್ನು ಸಂಜೆ 5 ಗಂಟೆಯಿಂದ 7 ಗಂಟೆಯ ವರೆಗೆ ಸ್ವಯಂ ಪ್ರೇರಿತ ಬಂದ್ ಮಾಡಲಾಯಿತು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಂತಾಪ ಸಭೆ ನಡೆಸಲಾಯಿತು. ಪೋಲಿಸ್ ಇಲಾಖೆ, ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ, ಅಂತಿಮ ಗೌರವ ಸಲ್ಲಿಸಿದರು.
ಅನಾರೋಗ್ಯ ಪೀಡಿತರಾದ ಸ್ವಾಮಿಗಳು ಎರಡು ದಿನಗಳ ಹಿಂದೆ ಮಾತನಾಡುತ್ತಿರಲಿಲ್ಲ ಬರಹದ ರೂಪದಲ್ಲಿ ತಮ್ಮ ಬಾವನೆಯನ್ನು ವ್ಯಕ್ತ ಪಡಿಸುತ್ತಿದ್ದರು ಈ ಸಂದರ್ಭ ಕೊನೆಯದಾಗಿ ಸ್ವಾಮಿ ರಾಮಕೃಷ್ಣರು ಎಲ್ಲರಿಗೂ ಒಳಿತು ಮಾಡಲಿ ಎಂದು ಬರೆದು ಹಾರೈಸಿದರು.
ಪೂರ್ವಾಶ್ರಮ : ಉಡುಪಿ ಜಿಲ್ಲೆಯ ಬಾಳೆಕುದ್ರು ಗ್ರಾಮದ ದಿ. ಶ್ರೀನಿವಾಸ ಕೆದಿಲಾಯ ಹಾಗೂ ಶ್ರೀದೇವಿ ದಂಪತಿಗಳ 6 ಮಕ್ಕಳಲ್ಲಿ ಹಿರಿಯ ಪುತ್ರ ಸ್ವಾಮಿ ಜಗದಾತ್ಮನಂದಜಿ ಇವರ ಪೂರ್ವಾಶ್ರಮದ ಹೆಸರು ಲಕ್ಷ್ಮೀನಾರಾಯಣ ಕೆದಿಲಾಯ. ಸಂಸಾರದ ನೊಗ ಹೊತ್ತು ಸಹೋದರರು ಹಾಗೂ ಸಹೋದರಿಯರ ಜೀವನ ರೂಪಿಸಲು ಅಂದು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಇವರು ತಮ್ಮ 30ನೇ ವರ್ಷದಲ್ಲಿ ಸನ್ಯಾಸಿ ದೀಕ್ಷೆಯನ್ನು ಪಡೆದುಕೊಂಡರು.
ತನ್ನ ಹದಿಮೂರನೇ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡ ಇವರು ತಂದೆಯ ಆಶ್ರಯದಲ್ಲಿ ಬೆಳೆಯುತ್ತಾರೆ. ತಂದೆ ಸಂಸ್ಕøತ ವಿದ್ವಾಂಸರು ಹಾಗೂ ಜ್ಯೋತಿಶಾಸ್ತ್ರ ಪಾಂಡಿತ್ಯವನ್ನು ಹೊಂದಿದವರು. ಇವರ ಮನೆಯಲ್ಲಿದ್ದ ಆಧ್ಯಾತ್ಮಿಕ ಚಟುವಟಿಕೆಗಳೇ ಇವರನ್ನು ದೇವgತ್ತ ಒಲವು ಮೂಡಿಸಲು ಕಾರಣವಾಗುತ್ತದೆ. ಸಣ್ಣ ವಯಸ್ಸಿನಲ್ಲಿ ಭಕ್ತಿಯನ್ನು ಮೈಗೂಡಿಸಿಕೊಂಡ ಇವರು; ವಿವೇಕಾನಂದರ ಪ್ರಭಾವಕ್ಕೆ ಒಳಗಾಗುತ್ತಾರೆ. ರಾಮಕೃಷ್ಣ ಆಶ್ರಮಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು ಅಧ್ಯಯನ ನಡೆಸಿ ರಾಮಕೃಷ್ಣರ ತತ್ವಗಳಿಗೆ ಮಾರುಹೋದ ಇವರು 1960ರಲ್ಲಿ ಬೆಂಗಳೂರು ರಾಮಕೃಷ್ಣ ಶಾಖೆಯನ್ನು ಸೇರಿ ಸ್ವಾಮಿ ಯತೀಶ್ವರಾನಂದಾಜಿ ಅವರಲ್ಲಿ ಮಂತ್ರ ದೀಕ್ಷೆಯನ್ನು ಮತ್ತು ಸ್ವಾಮಿ ವೀರೇಶ್ವರನಂದಾಜಿ ಅವರಿಂದ ಸನ್ಯಾಸಿ ದೀಕ್ಷೆಯನ್ನು ಪಡೆದುಕೊಂಡರು. ಸನ್ಯಾಸಿಯಾದ ನಂತರ ಕುಟುಂಬದಿಂದ ದೂರ ಉಳಿದ ಇವರು ಒಂದು ಬಾರಿ ಮಾತ್ರ ತಂದೆಯನ್ನು ನೋಡಲು ಮನೆಗೆ ಬಂದಿದ್ದರು ಎಂದು ಸ್ವಾಮೀಜಿಯ ಪೂರ್ವಾಶ್ರಮದ ಸಹೋದರ ಬಿ.ವಿ. ಕೆದಿಲಾಯ ಮಾಹಿತಿ ನೀಡಿದರು. ಅವರು ಮೊಮ್ಮಗನೊಂದಿಗೆ ಆಗಮಿಸಿ ಜಗದಾತ್ಮಾನಂದರ ಅಂತಿಮ ದರ್ಶನ ಪಡೆದರು.
- ಚಿತ್ರ ವರದಿ : ಸುದ್ದಿಪುತ್ರ, ಹೆಚ್.ಕೆ. ಜಗದೀಶ್, ಎನ್.ಎನ್. ದಿನೇಶ್, ಕೇಶವಕಾಮತ್, ರಫೀಕ್.