ಗೋಣಿಕೊಪ್ಪ ವರದಿ, ನ. 16: ಕೊಡಗಿನಲ್ಲಿ ನಡೆದ ಭೂಕುಸಿತವನ್ನು ದಿಕ್ಸೂಚಿಯನ್ನಾಗಿ ಇಟ್ಟುಕೊಂಡು ಹವಾಮಾನ ಬದಲಾವಣೆಗೆ ಅನುಗುಣವಾದ ಸುಸ್ಥಿರ ಕೃಷಿ ಪದ್ಧತಿ ಎಂಬ ಘೋಷವಾಕ್ಯದೊಂದಿಗೆ ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯ ಆವರಣದಲ್ಲಿ ಎರಡು ದಿನಗಳ ಕ್ಷೇತ್ರೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅರಣ್ಯ ಮಹಾವಿದ್ಯಾಲಯ ಡೀನ್ ಡಾ. ಸಿ.ಜಿ. ಕುಶಾಲಪ್ಪ ತಿಳಿಸಿದ್ದಾರೆ.
ರೈತನಿಂದಲೇ ಹೆಚ್ಚಿನ ಮಾಹಿತಿ ರೈತರಿಗೆ ಸಿಗುವಂತೆ ಮಾಡಲು ಮೊದಲನೇ ದಿನ ರೈತರಿಗೆ, 2ನೇ ದಿನ ಯುವರೈತರಿಗಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ತಾ. 19 ಹಾಗೂ 20 ರಂದು ಸುಮಾರು 8 ಬಗೆಯ ಕಾರ್ಯಕ್ರಮ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭೂಕುಸಿತ ಘಟನೆಯಿಂದ ಆ ಜಾಗಗಳಲ್ಲಿ ಮಾಡಬಹುದಾದ ಕೃಷಿ ಚಟುವಟಿಕೆ ಬಗ್ಗೆ ವಿಶೇಷ ಮಾಹಿತಿ ಕಲೆ ಹಾಕಲಾಗುವದು ಎಂದರು.
ಕ್ಷೇತ್ರೋತ್ಸವದಲ್ಲಿ ಕೃಷಿ, ತೋಟಗಾರಿಕೆ, ಅರಣ್ಯ, ಪಶು ಸಂಗೋಪನೆ, ಮೀನುಗಾರಿಕೆ ಇಲಾಖೆಗಳ ಹಲವು ಅಭಿವೃದ್ಧಿ ಕಾರ್ಯಕ್ರಮಗಳು ಕೂಡ ರೈತರಿಗೆ ದೊರೆಯಲಿದೆ.
ಕಾಲೇಜು ಆವರಣ ದಲ್ಲಿರುವ ಜೇನುಕೃಷಿ, ಆರ್ಕಿಡ್, ನರ್ಸರಿ, ಮುಂದಿನ ವರ್ಷ ಬೆಳೆಯ ಬಹುದಾದ ಮರಗಳ ಮಾಹಿತಿ, ಹಂದಿ ಸಾಕಣೆ, ಎರೆಹುಳ, ಬೀಜೋತ್ಪನ್ನ, ಸುಧಾರಿತ ಭತ್ತದ ತಳಿ, ಬೆಂಕಿ ರೋಗ ನಿರೋಧಕ ಬೆಳೆ, ಜೈವಿಕ ಇಂಧನ ಇಂತಹವುಗಳ ಮಾಹಿತಿ ಪಡೆಯಲು ಅವಕಾಶವಿದೆ ಎಂದರು.
ಭೂಕುಸಿತ ಸಂತ್ರಸ್ತ 5 ಪರಿಶಿಷ್ಟ ವರ್ಗದ ಕುಟುಂಬಗಳಿಗೆ ಜೇನುಪೆಟ್ಟಿಗೆ ವಿತರಣೆ, ಸಂತ್ರಸ್ತರ 3 ಮಕ್ಕಳಿಗೆ ಕೊಡಗು ಕೃಷಿ ವಿಜ್ಞಾನ ವೇದಿಕೆ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಗುವದು ಎಂದರು.
ತಾ. 19 ರಂದು ಬೆ. 10.30 ಕ್ಕೆ ಭತ್ತದ ತಾಕು, ವಸ್ತು ಪ್ರದರ್ಶನ ಹಾಗೂ ಕ್ಷೇತ್ರೋತ್ಸವ ಉದ್ಘಾಟನೆ ನಡೆಯಲಿದೆ.
ನಂತರ ಭತ್ತದ ಕೃಷಿ ಪುನಶ್ಚೇತನ ಬಗ್ಗೆ ವಿಚಾರಗೋಷ್ಠಿ, ಕಾಫಿ ಮತ್ತು ಕಾಳುಮೆಣಸು ಬೇಸಾಯದಲ್ಲಿ ಇತ್ತೀಚಿನ ಅವಿಷ್ಕಾರಗಳ ಮಾಹಿತಿ, ಜಿಲ್ಲೆಗೆ ಸೂಕ್ತವಾದ ಹಣ್ಣು, ತರಕಾರಿ, ಹೂ, ಔಷಧಿ ಹಾಗೂ ಸುಗಂದ ದ್ರವ್ಯ ಬೆಳೆಗಳ ಮಾಹಿತಿ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ಯುವ ರೈತರನ್ನು ಪ್ರೋತ್ಸಾಹಿಸಲು ವಿದ್ಯಾರ್ಥಿಗಳು ಹೆಚ್ಚಾಗಿ ಪಾಲ್ಗೊಳ್ಳುವಂತೆ ಯೋಜನೆ ರೂಪಿಸಲಾಗಿದೆ ಎಂದರು.
ತಾ.20 ರಂದು ಬೆ. 10 ಗಂಟೆಯಿಂದ 5 ಗಂಟೆಯವರೆಗೆ ವಿಚಾರಗೋಷ್ಠಿ ನಡೆಯಲಿದೆ. ಪಶುಪಾಲನೆಯ ತಾಂತ್ರಿಕ ಗೋಷ್ಠಿ, ಕೃಷಿ ಮತ್ತು ಅರಣ್ಯ ಪದ್ದತಿ, ಬಿದಿರು ಮತ್ತು ಶ್ರೀಗಂಧ ಬೆಳೆ, ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಮೌಲ್ಯವರ್ಧನೆ, ಕೃಷಿಯಿಂದ ವ್ಯಾಪಾರೋದÀ್ಯಮ ಹೆಚ್ಚಿಸಲು ಕಾರ್ಯಕ್ರಮಗಳು ನಡೆಯಲಿವೆ.
ಗೋಷ್ಠಿಯಲ್ಲಿ ಕೃಷಿ ತೋಟಗಾರಿಕಾ ಸಂಶೋಧನಾ ಕೇಂದ್ರ ಕ್ಷೇತ್ರ ಅಧೀಕ್ಷಕ ಡಾ. ಜಿ.ಎನ್. ಹೊಸಗೌಡ್ರ, ವಿಸ್ತರಣಾ ಶಿಕ್ಷಣ ಘಟನೆ ಮುಖ್ಯಸ್ಥ ಡಾ. ಆರ್. ಎನ್. ಕೆಂಚರೆಡ್ಡಿ ಉಪಸ್ಥಿತರಿದ್ದರು.