ಗೋಣಿಕೊಪ್ಪ ವರದಿ, ನ. 16: ಜಿಲ್ಲಾ ಮಟ್ಟದ ಯುವಜನೋತ್ಸವ ತಾ. 18 ರಂದು ಪೊನ್ನಂಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆಯಲಿದೆ ಎಂದು ತಾಲೂಕು ಯುವ ಒಕ್ಕೂಟ ಅಧ್ಯಕ್ಷೆ ಮನೆಯಪಂಡ ಶೀಲಾ ಬೋಪಣ್ಣ ತಿಳಿಸಿದ್ದಾರೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಮಡಿಕೇರಿ ಸೋಮವಾರ ಪೇಟೆ ಮತ್ತು ಪೊನ್ನಂಪೇಟೆ ನಿಸರ್ಗ ಯುವತಿ ಮಂಡಳಿ, ಜಿಲ್ಲಾ ಹಾಗೂ ತಾಲೂಕು ಯುವ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಅಂದು ಬೆಳಿಗ್ಗೆ 10 ಗಂಟೆಗೆ ಪ್ರಾರಂಭಗೊಂಡು ಸಾಯಂಕಾಲ 4.30 ಗಂಟೆಗೆ ಸಮಾರೋಪಗೊಳ್ಳಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜಾನಪದ ನೃತ್ಯ ಸ್ಪರ್ಧೆಗೆ ತಂಡದಲ್ಲಿ 20 ಜನ ಮೀರದಂತೆ 15 ನಿಮಿಷ ಕಾಲಾವಕಾಶದೊಂದಿಗೆ ಧ್ವನಿಸುರುಳಿ ಬಳಸದಂತೆ ಪಾಲ್ಗೊಳ್ಳಬೇಕಿದೆ. ಜಾನಪದ ಗೀತೆಗೆ 10 ಜನರು ಮೀರದಂತೆ 7 ನಿಮಿಷ ಕಾಲಾವಕಾಶದೊಂದಿಗೆ ಚಲನಚಿತ್ರಗಳ ಗೀತೆ ಬಳಸದೆ ಪಾಲ್ಗೊಳ್ಳಬೇಕಿದೆ. ಆಂಗ್ಲ ಹಾಗೂ ಹಿಂದಿ ಭಾಷೆಯ ಏಕಾಂಕ ನಾಟಕದಲ್ಲಿ 10 ಜನ ಮೀರದಂತೆ 7 ನಿಮಿಷ ಕಾಲಾವಕಾಶವಿದೆ. ಚಲನಚಿತ್ರಗಳ ಗೀತೆ ಹೊರತುಪಡಿಸಿ ಹಿಂದೂಸ್ತಾನಿ ಮತ್ತು ನಾಟಕ ಶೈಲಿಯ 15 ನಿಮಿಷಗಳ ಶಾಸ್ತ್ರೀಯ ಗಾಯನ ವೈಯಕ್ತಿಕ ವಿಭಾಗ, ಸಿತಾರ್, ಕೊಳಲು, ತಬಲ, ವೀಣೆ ಹಾಗೂ ಮೃದಂಗ ಬಳಸಿ 7 ನಿಮಿಷಗಳ ಶಾಸ್ತ್ರೀಯ ವಾದನ ವೈಯಕ್ತಿಕ ವಿಭಾಗ, 10 ನಿಮಿಷಗಳ ಹಾರ್ಮೊನಿಯಮ್ (ಲಘು) ವೈಯಕ್ತಿಕ ವಿಭಾಗ, 10 ನಿಮಿಷಗಳ ಗಿಟಾರ್ (ವೈಯಕ್ತಿಕ), ಮಣಿಪುರಿ, ಒಡಿಸ್ಸಿ, ಕಥಕ್, ಕೂಚುಪುಡಿ, ಭರತ ನಾಟ್ಯ ಪ್ರಕಾರದ ಶಾಸ್ತ್ರೀಯ ನೃತ್ಯ (ವೈಯಕ್ತಿಕ, 10 ನಿಮಿಷ) ವಿಭಾಗ, ಆಂಗ್ಲ ಹಾಗೂ ಹಿಂದಿ ಬಾಷೆಯ ಆಶುಭಾಷಣ (ವೈಯಕ್ತಿಕ, 4 ನಿಮಿಷ) ಸ್ಪರ್ಧೆಗಳು ನಡೆಯಲಿದೆ ಎಂದು ತಿಳಿಸಿದರು.

ಜಿಲ್ಲೆಯ ನಿವಾಸಿಗಳು ಹಾಗೂ 15 ರಿಂದ 35 ವಯೋಮಾನದವರಿಗೆ ಮಾತ್ರ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶವಿದೆ. ಸ್ಪರ್ಧಿಗಳು ಕಾರ್ಯಕ್ರಮ ನಡೆಯುವ ದಿನದಂದು ಬೆಳಿಗ್ಗೆ 10.30 ಒಳಗೆ ಸಂಘಟಕರಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ವಯೋಮಿತಿಯನ್ನು ಧೃಢೀಕರಿಸಲು ಎಸ್.ಎಸ್.ಎಲ್.ಸಿ ಅಂಕಪಟ್ಟಿ ಅಥವಾ ವರ್ಗಾವಣೆ ಪ್ರತಿಯನ್ನು ನೀಡಬೇಕು. ಪ್ರತಿಯೊಂದು ಸ್ಫರ್ಧೆಗಳು ಪ್ರತ್ಯೇಕ ನಿಬಂಧನೆಗಳಿಗೆ ಅನುಸಾರ ವಾಗಿ ನಡೆಯಲಿದೆ. ಸ್ಪರ್ಧೆಗಳ ನಿಯಮ ಗಳನ್ನು ತಿಳಿದುಕೊಳ್ಳಲು 9480753610 ಹಾಗೂ 94490 49095 ಸಂಪರ್ಕಿಸಬಹುದಾಗಿದೆ.

ಗೋಷ್ಠಿಯಲ್ಲಿ ಉಪಾಧ್ಯಕ್ಷ ರಾಮಕೃಷ್ಣ, ತಾಲೂಕು ಯುವ ಒಕ್ಕೂಟದ ಗೌರವ ಸಲಹೆಗಾರ ಕಂದಾ ದೇವಯ್ಯ, ನಿಸರ್ಗ ಯುವತಿ ಮಂಡಳಿ ಅಧ್ಯಕ್ಷೆ ರೇಖಾ ಶ್ರೀಧರ್ ಇದ್ದರು.